»   » ರಿಯಲ್ ಸ್ಟಾರ್ ಉಪ್ಪಿ ರಿಯಲ್ ನಟ ಆಗಬಲ್ಲರೆ?

ರಿಯಲ್ ಸ್ಟಾರ್ ಉಪ್ಪಿ ರಿಯಲ್ ನಟ ಆಗಬಲ್ಲರೆ?

Posted By:
Subscribe to Filmibeat Kannada


ಈ ಮೊದಲು ಉಪ್ಪಿ ಆರಿಸಿಕೊಂಡಿರುವ ಪಾತ್ರಗಳನ್ನು ನೋಡಿ. ನಾಗರಹಾವಿನಲ್ಲಿ ಶಾಹ್‌ರುಖ್ ಮಾಡಿದ ಪಾತ್ರ, ತಂದೆಗೆ ತಕ್ಕ ಮಗದಲ್ಲಿ ಕಮಲ್‌ಹಾಸನ್ ಮಾಡಿದ ಪಾತ್ರ. ಈಗ ರಾಷ್ಟ್ರಪ್ರಶಸ್ತಿವಿಜೇತ ಪಾತ್ರ. ಆದರೆ ಮಾಡಿದ ಯಾವ ಪಾತ್ರಕ್ಕೆ ತಕ್ಕ ನ್ಯಾಯ ಸಲ್ಲಿಸಿದ್ದಾರೆ?

ಮಣ್ಣಿಗೇ ಹುಟ್ಟಿದವನಂತೆ, ಮಣ್ಣಾದವರಷ್ಟೇ ಭಾವುಕತೆಯುಳ್ಳ, ನಾಗರಿಕತೆಯ ಸೋಂಕೂ ಇಲ್ಲದ ಆತನಿಗೆ ಮೌನವೇ ಬಂಗಾರ. ಸ್ಮಶಾನದಲ್ಲಿ ಹುಟ್ಟಿ, ಸ್ಮಶಾನದಲ್ಲೇ ಬೆಳೆದು, ಸ್ಮಶಾನದ ನೀರವತೆಯನ್ನಷ್ಟೇ ಮಾತಾಗಿಸಿಕೊಂಡ ಆ ಪಾತ್ರವನ್ನು ಅತ್ಯಂತ್ರ ಪ್ರಬುದ್ಧವಾಗಿ, ಮನೋಜ್ಞವಾಗಿ ಅಭಿವ್ಯಕ್ತಪಡಿಸಿದ ಆ ನಟನಿಗೆ ದಕ್ಕಿದ್ದು ಅತ್ಯುತ್ತಮ ನಟ ರಾಷ್ಟ್ರೀಯ ಪುರಸ್ಕಾರ.

ಚಿತ್ರದ ಹೆಸರು-ಪಿತಾಮಗನ್, ತಮಿಳು ಚಿತ್ರ. ನಿರ್ದೇಶಿಸಿದ್ದು ಬಾಲಾ. ಪಾತ್ರ ಮಾಡಿದ್ದು ತಮಿಳು ನಟ ವಿಕ್ರಂ. ಈಗ ಅದೇ ಚಿತ್ರ ಕನ್ನಡಕ್ಕೆ ಭಟ್ಟಿಯಾಗುತ್ತಿದ್ದು, ಹೆಸರು-ಅನಾಥರು. ನಿರ್ದೇಶಿಸಿರುವುದು ನಟ, ಸಂಗೀತಗಾರ ಸಾಧು ಕೋಕಿಲಾ. ಆ ಪಾತ್ರವನ್ನು ಕೈಗೆತ್ತಿಕೊಂಡಿರುವುದು ರಿಯಲ್ ಸ್ಟಾರ್ ಉಪೇಂದ್ರ.

ಆ ಪಾತ್ರ ನಿರ್ವಹಿಸಲು ರೆಡಿಯಾಗಿದ್ದಕ್ಕೇ ಉಪ್ಪಿಗೆ ಅಭಿನಂದನೆ ಸಲ್ಲಿಸಬೇಕು. ಈ ಮೊದಲು ಕೂಡ ಉಪ್ಪಿ ಆರಿಸಿಕೊಂಡಿರುವ ಪಾತ್ರಗಳನ್ನು ನೋಡಿ. ನಾಗರಹಾವಿನಲ್ಲಿ ಶಾಹ್‌ರುಖ್ ಮಾಡಿದ ಪಾತ್ರ, ತಂದೆಗೆ ತಕ್ಕ ಮಗದಲ್ಲಿ ಕಮಲ್‌ಹಾಸನ್ ಮಾಡಿದ ಪಾತ್ರ. ಈಗ ರಾಷ್ಟ್ರಪ್ರಶಸ್ತಿವಿಜೇತ ಪಾತ್ರ. ಆದರೆ ಈಮೊದಲು ಮಾಡಿದ ಯಾವ ಪಾತ್ರಕ್ಕೆ ತಕ್ಕ ನ್ಯಾಯ ಸಲ್ಲಿಸಿದ್ದಾರೆ? ಯಾವ ಚಿತ್ರ ಗೆದ್ದಿದೆ? ಉತ್ತರ ಅತ್ಯಂತ ಸ್ಪಷ್ಟ. ಘಟಾನುಘಟಿಗಳು ಮಾಡಿದ ಯಾವ ಚಿತ್ರವನ್ನು ಉಪ್ಪಿ ಗೆಲ್ಲಿಸಿಲ್ಲ.

ಸ್ವಮೇಕ್ ಚಿತ್ರಗಳು ಒಂದರ ಹಿಂದೊಂದಂತೆ ಗೆಲ್ಲುತ್ತಿವೆ. ರಿಮೇಕ್ ಚಿತ್ರಗಳ ಹಣೆಬರಹವೇ ಇಷ್ಟು ಎಂದುಕೊಳ್ಳುತ್ತಿರುವಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಎಲ್ಲ ರಿಮೇಕ್ ಚಿತ್ರಗಳಿಗೂ ನೂರರಷ್ಟು ತೆರಿಗೆ ವಿನಾಯಿತಿ ನೀಡುವ ಭರವಸೆ ನೀಡಿದ್ದಾರೆ.

ಆದರೆ ಈ ರಿಮೇಕ್ ಚಿತ್ರವನ್ನು ಉಪ್ಪಿ-ಸಾಧು ಜೋಡಿ ಖಂಡಿತ ಗೆಲ್ಲಿಸಿಕೊಡುತ್ತಾರೆಂಬ ನಂಬಿಕೆ ನಿರ್ಮಾಪಕ ಮುನಿರತ್ನ ಅವರಿಗಿದೆ. ಮುನಿರತ್ನರಿಂದ ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬ ಎಂದು ಹಾಡಿ ಹೊಗಳಿಸಿಕೊಂಡ ಸಾಧು ಕೋಕಿಲ ಫ್ರೇಂ ಬೈ ಫ್ರೇಂ ಭಟ್ಟಿ ಇಳಿಸಿದ್ದಾರೆ. ಉಪೇಂದ್ರ ಕಣ್ಣುಗಳಲ್ಲೇ ಎಲ್ಲ ಭಾವಾಭಿನಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಸರ್ಟಿಫಿಕೇಟ್ ನೀಡಿದ್ದಾರೆ.

ತಮಿಳಿನಲ್ಲಿ ಸೂರ್ಯ ಮಾಡಿದ ಪಾತ್ರವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡುತ್ತಿದ್ದಾರೆ. ಉಳಿದ ತಾರಾಗಣದಲ್ಲಿ ರಾಧಿಕಾ, ಸಾಂಘವಿ ಇದ್ದಾರೆ. ರಂಭಾಗೊಂದು ಐಟಂ ಸಾಂಗ್ ಕೂಡ ಇದೆ.

ಚಿತ್ರ ಉಪೇಂದ್ರರ ಹುಟ್ಟುಹಬ್ಬ ಸೆಪ್ಟೆಂಬರ್ 18ರಂದು ಬಿಡುಗಡೆಯಾಗಲಿದೆ. ರಿಯಲ್ ಸ್ಟಾರ್ ಉಪೇಂದ್ರ ರಿಯಲ್ ನಟನಾಗಿ ಉತ್ತಮ ಅಭಿನಯ ನೀಡಬೇಕಿದೆ.

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada