»   » ದೇವರಾಜ್‌ಗೆ ಮತ್ತೆ ಶಿವಮಣಿ ‘ಖಾಕಿ’

ದೇವರಾಜ್‌ಗೆ ಮತ್ತೆ ಶಿವಮಣಿ ‘ಖಾಕಿ’

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಹಾಡಿಲ್ಲದ ‘ರಾಜಕೀಯ’, ಒಂದೇ ಒಂದು ಬ್ಯಾಗ್ರೌಂಡ್‌ ಹಾಡಿನ ‘ಗೋಲಿಬಾರ್‌’- ಎಲ್ಲದರಲ್ಲೂ ದೇವರಾಜ್‌ ಕಾರುಬಾರ್‌. ಆ ದಿನಗಳಲ್ಲಿ ನಿರ್ದೇಶಕನಾಗಿ ಶಿವಮಣಿ ಖದರು ಸದ್ದು ಮಾಡಿತ್ತು. ಆ ಗುಂಗಿನಲ್ಲೇ ‘ಮದರ್‌ ಇಂಡಿಯಾ’ ಎಂಬ ಚಿತ್ರ ನೋಡ ಹೋದವರು ಬೇಜಾರು ಮಾಡಿಕೊಂಡರು. ಮತ್ತೆ ಶಿವಮಣಿ ಗಾಂಧಿನಗರದಲ್ಲಿ ಜೋರು ಸದ್ದು ಮಾಡಲೇ ಇಲ್ಲ.

ಹಠಾತ್ತನೆ ಕಾಲೇಜು ಹುಡುಗನ ಇಮೇಜಿನ ನಾಯಕನ ಗೆಟಪ್ಪಲ್ಲಿ ರೀ ಎಂಟ್ರಿ ಕೊಟ್ಟರು. ‘ಲವ್‌ ಯೂ’ ಎಂಬ ಆ ಚಿತ್ರ ತೋಪಾಯಿತು. ಈಗ ಶಿವಮಣಿ ಏನು ಮಾಡುತ್ತಿದ್ದಾರೆ?

ಇವರ ನಿರ್ದೇಶನದ ಖಾಕಿ ಎಂಬ ಚಿತ್ರ ತೆರೆಗೆ ಸಿದ್ಧವಾಗಿದೆ. ಲೇಡಿ ಬಚ್ಚನ್‌ ವಿಜಯಶಾಂತಿ ಎಗರಲು ಹೋಗಿ ಕಾಲು ಮುರಿದು ಕೊಂಡಿರುವುದರಿಂದ ‘ಶಕ್ತಿ’ ಎಂಬ ಬಹುಭಾಷಾ ಚಿತ್ರದ ಶೂಟಿಂಗು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಖಾಕಿ ಬಗ್ಗೆ ಶಿವಮಣಿಗೆ ತುಂಬಾ ಭರವಸೆಯಿದೆ.

ನಾನು ಕಾಲೇಜು ಹುಡುಗನ ಅವತಾರದಲ್ಲಿ ನಾಯಕನಾಗಿ ದೊಡ್ಡ ತಪ್ಪು ಮಾಡಿದೆ. ಸಿಕ್ಕಾಪಟ್ಟೆ ದುಡ್ಡು ಖರ್ಚು ಮಾಡಿಸಿ, ಮಾಡಿ ಇನ್ನೂ ಎಡವಟ್ಟು ಮಾಡಿದೆ. ಲವ್‌ ಯೂ ಚಿತ್ರಕ್ಕೆ ಒಳ್ಳೆಯ ವಿಮರ್ಶೆ ಸಿಕ್ಕಿತು. ಆದರೆ ಓಪನಿಂಗ್‌ ಸಿಗಲಿಲ್ಲ. ನೋಡಿದ ಕೆಲವರು ಚೆನ್ನಾಗಿದೆ ಅಂದರು. ಇನ್ನು ಮೇಲೆ ಅಂಥ ಸಾಹಸಕ್ಕೆ ಕೈ ಹಾಕುವುದಿಲ್ಲ ಅಂತ ತಪ್ಪೊಪ್ಪಿಕೊಂಡಿರುವ ಶಿವಮಣಿ ಈಗ ಎಚ್ಚೆತ್ತುಕೊಂಡಿದ್ದಾರೆ. ಅದೇ ದೇವರಾಜ್‌. ಜೊತೆಗೀಗ ವೃದ್ಧ ಕುಳ್ಳ ವಾದಿರಾಜ್‌. ಹಳೇ ವರಸೆಯಂತೆ ಈ ಚಿತ್ರದಲ್ಲೂ ಹಾಡಿಲ್ಲ. ಇದು ಖಾಕಿ ಚಿತ್ರದ ಖದರ್‌. ವೀರಪ್ಪನ್‌ಗೆ ಸಂಬಂಧ ಪಟ್ಟ ಕಥೇನಾ ಅಂತ ಕೆಣಕಿದರೆ ಶಿವಮಣಿ ಮೌನವಾಗುತ್ತಾರೆ. ಕಥೆ ಮಾತ್ರ ಕೇಳಬೇಡಿ ಎನ್ನುತ್ತಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada