»   » ಮೆಗಾಸ್ಟಾರ್‌ ಚಿರಂಜೀವಿ ಚಿತ್ರದ ಹುಚ್ಚಿಗೆ ಇಬ್ಬರ ಬಲಿ

ಮೆಗಾಸ್ಟಾರ್‌ ಚಿರಂಜೀವಿ ಚಿತ್ರದ ಹುಚ್ಚಿಗೆ ಇಬ್ಬರ ಬಲಿ

Posted By:
Subscribe to Filmibeat Kannada

ತೆಲುಗು ನಟ ಚಿರಂಜೀವಿ ಇವತ್ತಿಗೂ ಮೆಗಾಸ್ಟಾರ್‌ ಅನ್ನೋದನ್ನ ಬುಧವಾರ (ಸೆ.24) ದ ವಿದ್ಯಮಾನಗಳು ಸಾಬೀತು ಪಡಿಸಿದವು. ಅವರ ಹೊಸ ಚಿತ್ರ ‘ಠಾಗೂರ್‌’ ಬಿಡುಗಡೆಯಾದ ಮೊದಲ ದಿನವೇ ಇಬ್ಬರು ನೂಕುನುಗ್ಗಲಲ್ಲಿ ಸತ್ತಿದ್ದಾರೆ.

ರಾಜಮಂಡ್ರಿಯ ರಂಭಾ ಚಿತ್ರಮಂದಿರದಲ್ಲಿ ಮಂಗಳವಾರ ಸಂಜೆಯಿಂದಲೇ ಬುಧವಾರ ಬಿಡುಗಡೆಯಾಗಲಿರುವ ಚಿರಂಜೀವಿ ಚಿತ್ರಕ್ಕೆ ಟಿಕೇಟು ಗಿಟ್ಟಿಸಿಕೊಳ್ಳಲು ಅಭಿಮಾನಿಗಳು ಜಮಾಯಿಸಿದ್ದರು. ಬುಧವಾರ ಬೆಳಗ್ಗಿನಿಂದ ನೂಕು ನುಗ್ಗಲು ಅತಿಯಾಯಿತು. ಸಾಕಷ್ಟು ಪೊಲೀಸರು ಜನರನ್ನು ನಿಯಂತ್ರಿಸಲು ನಡೆಸಿದ ಯತ್ನ ಕೂಡ ಸಫಲವಾಗಲಿಲ್ಲ. ಪರಿಣಾಮವಾಗಿ ಕಾಲ್ತುಳಿತಕ್ಕೆ ಸಿಕ್ಕಿ ಲಕ್ಷ್ಮಣ್‌ (23) ಹಾಗೂ ರವಿಕುಮಾರ್‌ (30) ಎಂಬುವರು ಪ್ರಾಣ ತೆತ್ತರು. ಕಾಲ್ತುಳಿತದಲ್ಲಿ ಸುಮಾರು 10 ಮಂದಿಗೆ ಗಾಯಗಳಾಗಿದ್ದು, 8 ಮಂದಿ ಆಸ್ಪತ್ರೆಗೆ ಸೇರುವಷ್ಟು ತೊಂದರೆ ಅನುಭವಿಸಿದ್ದಾರೆ.

ಕಟೌಟ್‌ಗೆ ಕುರಿ ಬಲಿ : ಇದೇ ಮೊದಲ ಬಾರಿಗೆ ಚಿರಂಜೀವಿ ಚಿತ್ರ ಬಿಡುಗಡೆಯಾದ ಸಿರುಗುಪ್ಪದಲ್ಲಿ ಮಂಗಳವಾರದಿಂದಲೇ ಡೋಲು ತಮಟೆಗಳ ಸದ್ದು. ಇಡೀ ಊರಲ್ಲಿ ಹಬ್ಬದ ವಾತಾವರಣ. ಬುಧವಾರ ಜಮಾಯಿಸಿದ್ದ ಪೊಲೀಸರ ನಡುವೆಯೇ ಅಭಿಮಾನಿಗಳು 6 ಕುರಿಗಳನ್ನು ಚಿರಂಜೀವಿ ಕಟೌಟ್‌ಗೆ ಬಲಿ ಕೊಟ್ಟು, ರಕ್ತ ಚೆಲ್ಲಿದರು. ಇಲ್ಲೂ ಕೂಡ ಜನರ ನೂಕುನುಗ್ಗಲು ಇತ್ತು. ಅದೃಷ್ಟವಶಾತ್‌ ಯಾರಿಗೂ ತೊಂದರೆಯಾಗಲಿಲ್ಲ.

ಇದಕ್ಕೂ ಮುಂಚೆ ತೆರೆ ಕಂಡಿದ್ದ ಚಿರಂಜೀವಿ ಅಭಿನಯದ ‘ಇಂದ್ರ’ ಚಿತ್ರ ಕೂಡ ದುಡ್ಡು ಮಾಡಿತ್ತು. ಆದರೆ ‘ಠಾಗೂರ್‌’ ಚಿತ್ರಕ್ಕೆ ಅದಕ್ಕಿಂತ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ‘ಮುಠಾಮೇಸ್ತ್ರಿ’ ಚಿತ್ರ ಬಿಡುಗಡೆಯಾಗಿದ್ದ ದಿನದ ಸಂಭ್ರಮಗಳನ್ನು ನೆನಪಿಸುವಂತೆ ಚಿರಂಜೀವಿ ಅಭಿಮಾನಿಗಳು ವರ್ತಿಸಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada