»   » ನನಗೆ ಶಂಕರನ ನೆನಪಾಗುತ್ತಿದೆ’

ನನಗೆ ಶಂಕರನ ನೆನಪಾಗುತ್ತಿದೆ’

Posted By: *ಅಮೆಜಾನ್‌
Subscribe to Filmibeat Kannada

ಆರ್‌.ಕೆ.ನಾರಾಯಣರ 'ಮಾಲ್ಗುಡಿ ಡೇಸ್‌'ನ ಕಿರುತೆರೆಗೆ ತಂದ ಶಂಕರ್‌ನಾಗ್‌, ಏಳೆಂಟು ದಿನಗಳಲ್ಲೇ ಕಾದಂಬರಿ ಬರೆದು ನೆಮ್ಮದಿಯ ನಿಟ್ಟುಸಿರಿಡುತ್ತಿದ್ದ ಶಿವರಾಮ ಕಾರಂತ... ಇಂಥವರನ್ನು ನೆನೆದಾಗಲೆಲ್ಲಾ Think Big ಅನ್ನುವ ಮಂತ್ರ ನೆನಪಾಗುತ್ತದೆ.

ಸಾಮಾನ್ಯವಾಗಿ ವ್ಯಾಪಾರಿಗಳು, ಉದ್ದಿಮೆದಾರರು ದೊಡ್ಡದಾಗಿ ಯೋಚಿಸು, ದುಡ್ಡು ಮಾಡು ಅನ್ನುವ ಇರಾದೆಯನ್ನು ಹೊರಹಾಕುತ್ತಾರೆ. ದೊಡ್ಡದಾಗಿ ಯೋಚಿಸು, ದುಡ್ಡು ಹೋದರೂ ಪರವಾಗಿಲ್ಲ ಅನ್ನೋರು ಯಾರು? ಹೊಸತನ್ನು ಮಾಡುವಾಗ ರಿಸ್ಕಿಗೆ ಎದೆ ಕೊಡಲೇಬೇಕು. ಪ್ರಯೋಗಕ್ಕೆ ಮೊರೆಹೋಗಲೇಬೇಕು. ಕೆಲವರು ತಮ್ಮತನ ಹಾಗೂ ತುಡಿತದ ಅಭಿವ್ಯಕ್ತಿಗಾಗಿ ಎಂಥಾ ಪ್ರವಾಹಕ್ಕೆ ಎದೆಗೊಡಲೂ ಸೈ. ಡಜನ್ನು ನಿರ್ಮಾಪಕರ ತಂಡ ಕಟ್ಟಿಕೊಂಡು 'ಮುನ್ನುಡಿ', 'ಅತಿಥಿ'ಯಂಥಾ ಚಿತ್ರ ಕೊಟ್ಟ ಪಿ.ಶೇಷಾದ್ರಿಯನ್ನು ಈ ಸಾಲಿಗೆ ಸೇರಿಸಬಹುದು. ಇಂಥ ಅಪರೂಪದವರ ಪೈಕಿ ಪ್ರಕಾಶ್‌ ಬೆಳವಾಡಿ ಕೂಡ ಒಬ್ಬರು.

ಪತ್ರಕರ್ತ, ರಂಗ ನಿರ್ದೇಶಕ, ಧಾರಾವಾಹಿ ನಿರ್ದೇಶಕ, ಮೇಲಾಗಿ ಕಲೆಗಾರ ಈ ಬೆಳವಾಡಿ. ಪ್ರಸ್ತುತತೆಯನ್ನು ಜೀರ್ಣಿಸಿಕೊಂಡು ಅದಕ್ಕೆ ಕನ್ನಡಿ ಹಿಡಿಯುವ ಈತನ ತಂತ್ರವೇ ಅನನ್ಯ. 'ಗರ್ವ' ಧಾರಾವಾಹಿಗೆ ಸೂಕ್ತ ಪೂರ್ಣ ವಿರಾಮ ಹಾಕುವಷ್ಟು ಸ್ವಾತಂತ್ರ್ಯವನ್ನು ಈ-ಟಿವಿ ಕಸಿದುಕೊಂಡಿದ್ದೇ ಅದರ ವ್ಯಾಪಾರಿ ಧೋರಣೆಯಿಂದಾಗಿ.

ಇದು ತಮ್ಮ ಉದ್ದೇಶವನ್ನು ಅರ್ಥಪೂರ್ಣವಾಗಿಸಲಾಗದ ಸೋಲು ಅಂತ ಬೆಳವಾಡಿ ಭಾವಿಸಲೇ ಇಲ್ಲ. 'ಗರ್ವ' ನಂತರ ಮುಂದೇನು ಅಂತ ಇವರ ಅಭಿಮಾನಿ ಬಳಗ ಯೋಚಿಸುವಷ್ಟರಲ್ಲೇ ಇಂಗ್ಲಿಷ್‌ ಚಿತ್ರ 'Stumble' ಕೆಲಸದಲ್ಲಿ ಬೆಳವಾಡಿ ಶ್ರದ್ಧೆಯಿಂದ ತೊಡಗಿಕೊಂಡಿದ್ದರು. ಜೂನ್‌ ಹೊತ್ತಿಗೆ ಸ್ಕಿೃಪ್ಟ್‌ ಸಿದ್ಧವಾಗಿತ್ತು. ಆಗಸ್ಟ್‌ 1ನೇ ತಾರೀಖು ಶೂಟಿಂಗ್‌ ಶುರುವಾಯಿತು. ಆಗಸ್ಟ್‌ 18ನೇ ತಾರೀಖಿನ ಹೊತ್ತಿಗೆ 90% ಶೂಟಿಂಗ್‌ ಮುಕ್ತಾಯ ! 'ಗರ್ವ' ಕಟ್ಟಿಕೊಟ್ಟಿದ್ದ '2 streams' ತಂಡದವರೇ ಇದಕ್ಕೂ ದುಡ್ಡು ಹಾಕಿರೋದು. ಇದರ ಬಜೆಟ್‌ ಎಷ್ಟು ಅಂತ ಕೇಳಿದರೆ, ಬೆಳವಾಡಿ ಪಕ್ಕಾ ಉತ್ತರ ಕೊಡೋದಿಲ್ಲ. ಒಂದು ಕಮರ್ಷಿಯಲ್‌ ಕನ್ನಡ ಚಿತ್ರದಷ್ಟು ಅಂತಾರೆ. ಅಂದಾಜು ಒಂದು ಕೋಟಿ ರುಪಾಯಿ ಬಂಡವಾಳವಂತೂ ಇದಕ್ಕೆ ಹರಿದಿದೆ ಎನ್ನುತ್ತದೆ ಒಂದು ಮೂಲ.

ಏನೇ ಆಗಲಿ, ಬೆಳವಾಡಿ ಸಮಯ ತಿಂದಿಲ್ಲ. ಸೊಗಸಾದ ಕತೆ ಮುಂದಿಟ್ಟುಕೊಂಡೇ ಈ ರಿಸ್ಕಿಗೆ ಕೈಹಾಕಿರುವುದು. ವಿಆರ್‌ಎಸ್‌ ತೆಗೆದುಕೊಂಡು ಬಂದ ಹಣವನ್ನೆಲ್ಲಾ ಮ್ಯೂಚುಯಲ್‌ ಬಾಂಡ್‌ಗಳ ಮೇಲೆ ಸುರಿದು, ಮುಳುಗಿ ಹೋಗುವ ಮಧ್ಯಮ ವರ್ಗದ ಬ್ಯಾಂಕ್‌ ನೌಕರನ ಪೀಕಲಾಟ, ತೊಳಲಾಟವೇ ಚಿತ್ರದ ವಸ್ತು. ತಾರಾಗಣದಲ್ಲಿ ಅದೇ 'ಗರ್ವ'ದ ಹಲವು ಪಾದರಸದ ಮುಖಗಳಿವೆ. ಚಿಕ್ಕ ಪಾತ್ರದಲ್ಲಿ ರೇಡಿಯೋ ಜಾಕಿ ಪ್ರಿಯಾ ಗಣಪತಿ ನಟಿಸಿದ್ದಾರೆ. ರಾಜಕಾರಣಿಯಾಗಿ ಮುಖ್ಯಮಂತ್ರಿ ಚಂದ್ರು ಕಾಣಿಸಿಕೊಂಡಿದ್ದಾರೆ. ಮುಖ್ಯ ಪಾತ್ರದಲ್ಲಿ ಅನಂತ ನಾಗ್‌, ಸುಹಾಸಿನಿ ನಟಿಸಿದ್ದಾರೆ. ಅನಂತ್‌ ಮಗಳಾಗಿ ಎಂ.ಡಿ.ಪಲ್ಲವಿ, ಮಗನಾಗಿ ಅಜಿತ್‌ ಹಂದೆ ಇದ್ದಾರೆ. ಹಿರಿಯ ರಂಗ ಕಲಾವಿದ ಅಶೋಕ್‌ ಮಂದಣ್ಣ ಕೂಡ ಮುಖ್ಯ ಪಾತ್ರದಲ್ಲಿದ್ದಾರೆ. 'ಏಷಿಯನ್‌ ಏಜ್‌' ಪತ್ರಿಕೆಯಲ್ಲಿ ಕೆಲಸ ಮಾಡಿರುವ ಪತ್ರಕರ್ತ ತುಷಿತ ಪಟೇಲ್‌ ಚಿತ್ರದ ಎಕ್ಸಿಕ್ಯುಟಿವ್‌ ಪ್ರೊಡ್ಯೂಸರ್‌.

ಕನ್ನಡದ ಮುಖಗಳು, ಕನ್ನಡತನವನ್ನೇ ತೋರುವ ಕತೆ. ಹಾಗಾದರೆ ಇಂಗ್ಲಿಷಿನಲ್ಲಿ ಯಾಕೆ ಸಿನಿಮಾ ಮಾಡಿದಿರಿ ಅಂತ ಬೆಳವಾಡಿಯವರನ್ನು ಕೇಳಿದಾಗ- 'ಈ ಕತೆಯನ್ನು ನಾನು ಅಂದುಕೊಂಡಿರುವಂತೆ ಯಶಸ್ವಿಯಾಗಿ ಕೊಡೋಕೆ ಸಾಧ್ಯವಿರುವುದು ಇಂಗ್ಲಿಷ್‌ ಭಾಷೆಯಲ್ಲಿ ಮಾತ್ರ' ಅಂತ ಉತ್ತರ ಕೊಟ್ಟರು.

ತುಷಿತ ಪಟೇಲ್‌ ಈಗಾಗಲೇ ಚಿತ್ರಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆ ಒದಗಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಅನಂತನಾಗ್‌ಗೆ ಪಾತ್ರ ಭಾರೀ ಖುಷಿ ಕೊಟ್ಟಿದೆ. ಪ್ರಕಾಶ್‌ ಬೆಳವಾಡಿ ಕೆಲಸ ನನಗೆ ಶಂಕರನ ನೆನಪನ್ನು ತರುತ್ತದೆ ಅಂತಲೇ ಮಾತಿಗೆ ಕೂರುವ ಅನಂತ್‌, ಚಿತ್ರದಲ್ಲಿನ ನನ್ನ ಪಾತ್ರ Death Of A Salesman ನ ವಿಲ್ಲಿ ಲೋಮಾಕ್ಸ್‌ ಪಾತ್ರಕ್ಕೆ ಸ್ವಲ್ಪ ಮಟ್ಟಿಗೆ ಹೋಲುತ್ತದೆ ಎನ್ನುತ್ತಾರೆ.

ಈ ಸಿನಿಮಾ ಯಾವ ಕೆಟಗರಿಗೆ ಸೇರುತ್ತದೆ ?
'ಮಾನ್‌ಸೂನ್‌ ವೆಡ್ಡಿಂಗ್‌' ಅಥವಾ 'ಹೈದರಾಬಾದ್‌ ಬ್ಲೂಸ್‌'ನಂಥಾ ಸೆಲೆಬ್ರಿಟಿ ಚಿತ್ರಗಳ ಸಾಲಿಗಂತೂ ಸೇರೋದಿಲ್ಲ. ಇದು ನಮ್ಮತನದ ಅನನ್ಯ ಚಿತ್ರ ಅಂತ ಗೆದ್ದೇ ಗೆಲ್ತೀವಿ ಎಂಬಂತೆ ಅನಂತ್‌ ಹಾಗೂ ಬೆಳವಾಡಿ ಭರವಸೆಯ ನಗೆ ನಗುತ್ತಾರೆ.

ಅದಹಾಗೆ, Stumble ಚಿತ್ರ ಡಿಸೆಂಬರ್‌ ತಿಂಗಳೊಳಗೆ ತೆರೆ ಕಾಣಲಿದೆ.

ಪೂರಕ ಓದಿಗೆ...

English summary
Ananth Nag and Prakash Belawadi speak on Stumble

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada