»   » ವಿನಯಾ ಪ್ರಸಾದ್‌ ಹೆಸರೀಗ-ಪ್ರಸಾದ್‌ ತೆಗೆದು, ಪ್ರಕಾಶ್‌ ಹಾಕಬೇಕು

ವಿನಯಾ ಪ್ರಸಾದ್‌ ಹೆಸರೀಗ-ಪ್ರಸಾದ್‌ ತೆಗೆದು, ಪ್ರಕಾಶ್‌ ಹಾಕಬೇಕು

Posted By: Staff
Subscribe to Filmibeat Kannada

ಎಸ್ಪಿ ಬಾಲು ಎದೆ ತುಂಬಿ ಹಾಡುವ ಕಾರ್ಯಕ್ರಮಕ್ಕೆ ತಣ್ಣಗಿನ ಕನ್ನಡದಲ್ಲಿ ಸ್ಫುಟವಾಗಿ ಮಾತಾಡುತ್ತ ಒಂದಿಷ್ಟು ಅಭಿಮಾನಿಗಳನ್ನು ಕಂಡುಕೊಂಡಿರುವ ವಿನಯಾ ಪ್ರಸಾದ್‌ ಈಗ ವಿನಯಾ ಪ್ರಕಾಶ್‌ ಆಗಿದ್ದಾರೆ !

ಈ ಸ್ಫುರದ್ರೂಪಿ ಹೆಣ್ಮಗಳು ಗಂಡನ ಕಳಕೊಂಡಾಗಿನಿಂದ ಈಕೆ ಇನ್ನೊಂದು ಮದುವೆ ಮಾಡಿಕೊಳ್ಳಲಿ ಅಂತ ವೋಟು ಹಾಕಿದವರೇ ಹೆಚ್ಚು. ಆದರೆ ವಿನಯಾ ಪತಿ ವಿಯೋಗದ ನಂತರ ಹೆಚ್ಚು ಸುದ್ದಿಯಲ್ಲಿರಲಿಲ್ಲ. ಸಿನಿಮಾದಲ್ಲೂ ಸಿಕ್ಕಿದ್ದು ಅಲ್ಲೊಂದು ಇಲ್ಲೊಂದು ಅವಕಾಶ. ಕಿರುತೆರೆಯಂತೂ ಹೆಚ್ಚೂಕಮ್ಮಿ ವಿನಯಾರನ್ನು ಮರೆತುಬಿಟ್ಟಿತ್ತು. ಆಗ ಈಟಿವಿಯಲ್ಲಿ ಶುರುವಾದ 'ಎದೆ ತುಂಬಿ ಹಾಡುವೆನು" ಕಾರ್ಯಕ್ರಮದ ಮೂಲಕ ವಿನಯಾ ಪುನರಾಗಮನವಾಯಿತು. ಶಾಮಸುಂದರ್‌ ಕುಲಕರ್ಣಿ ಬರೆದ ಸಾಲುಗಳಿಗೆ ಜೀವ ಕೊಡುವ ಈಕೆಯ ಸ್ಪಷ್ಟ- ಸ್ಫುಟ ಕನ್ನಡ ಬಹುತೇಕರಿಗೆ ಇಷ್ಟವಾಯಿತು.

ಹೀಗೆ ತಮ್ಮ ಪಾಡಿಗೆ ತಾವು ಎಂಬಂತಿದ್ದ ವಿನಯಾ ಜೀವನದ ದಿಕ್ಕು ಬದಲಿಸಿದ್ದು 'ಸಂಜೀವಿನಿ" ಎಂಬ ಟಿವಿ ಧಾರಾವಾಹಿ. ಒಮ್ಮೆಗೆ ಒಂದೇ ಧಾರಾವಾಹಿ ಎಂಬ ಕಟ್ಟನ್ನು ಹಾಕಿಕೊಂಡಿರುವಾಕೆ ವಿನಯಾ. ಕೆಲವು ಕಂತುಗಳ ನಂತರವೂ 'ಸಂಜೀವಿನಿ" ಧಾರಾವಾಹಿಗೆ ನಿರೀಕ್ಷಿತ ಟೇಕಾಫ್‌ ಸಿಗದ ಕಾರಣ ನಿರ್ದೇಶಕರನ್ನೇ ಬದಲಿಸುವ ಕಸರತ್ತು ನಡೆಯಿತು. ತಾನು ನಟಿಸುವ ಧಾರಾವಾಹಿಗೆ ಪೂರ್ಣ ನ್ಯಾಯ ಒದಗಿಸುವ ಜಾಯಮಾನದ ವಿನಯಾ ಹೊಸ ನಿರ್ದೇಶಕರನ್ನು ಹುಡುಕುವ ಕೆಲಸವನ್ನೂ ಮಾಡಿದರು. ಆದರೆ ವಿನಯಾ ಸೂಚಿಸಿದ ಹೆಸರಿನ ನಿರ್ದೇಶಕರಾರೂ ಹದಗೆಡಿಸಿದ ಅರ್ಧ ಕೆಲಸವನ್ನು ಹಸನಾಗಿಸುವ ಕೆಲಸಕ್ಕೆ ಒಪ್ಪಲಿಲ್ಲ. ಆಗ ಎಂಟ್ರಿ ಕೊಟ್ಟದ್ದೇ ಜ್ಯೋತಿ ಪ್ರಕಾಶ್‌ ಎಂಬ ಹೈದರಾಬಾದ್‌ ನಿರ್ದೇಶಕ.

ಮೊದಮೊದಲು ವಿನಯಾ- ಜ್ಯೋತಿ ಪ್ರಕಾಶ್‌ ಎಣ್ಣೆ ಸೀಗೇಕಾಯಿ. ಪ್ರಕಾಶ್‌ ಹೆಸರೆತ್ತಿದರೆ ವಿನಯಾ ಮುಖ ಅಂಟುವಾಳದ ಕಾಯಿಯಂತಾಗುತ್ತಿತ್ತು. ಈ ಬಗ್ಗೆ ಖುದ್ದು ವಿನಯಾ ಅಳಲು ತೋಡಿಕೊಂಡದ್ದೂ ಉಂಟು. ಹತಾಶೆ ಯಾವ ಮಟ್ಟಕ್ಕಿತ್ತೆಂದರೆ, ಧಾರಾವಾಹಿಯಿಂದಲೇ ಹೊರಹೋಗಲು ಒಂದೊಮ್ಮೆ ವಿನಯಾ ನಿರ್ಧರಿಸಿದ್ದರು.

ಇವರಿಬ್ಬರ ಗಲಾಟೆ ಸುದ್ದಿಯನ್ನೇ ಮೆಲುಕು ಹಾಕುತ್ತಿದ್ದವರಿಗೆ ಕಬ್ಬಿಣದ ಕಡಲೆಯಾದದ್ದೆಂದರೆ, ವಿನಯಾ- ಪ್ರಕಾಶ್‌ ಮದುವೆಯಾದರು ಎಂಬ ಸುದ್ದಿ ! ವಿನಯಾ ವಿಷಯದಲ್ಲಿ ಸರಸಕ್ಕೆ ವಿರಸವೇ ಮುನ್ನುಡಿಯಾಗಿದೆ. ಪ್ರಕಾಶ್‌ ತವರು ಹೈದರಾಬಾದಲ್ಲೇ ಇಬ್ಬರ ಮದುವೆಯೂ ಆಗಿದೆ. ಈ ಬೆಳವಣಿಗೆಗೆ ಸಂಜೀವಿನಿ ಧಾರಾವಾಹಿ ನಿರ್ಮಾಣ ಸಂಸ್ಥೆ ವಿ- ನೆಟ್‌ ಕೊಟ್ಟಿರುವ ಬಹುಮಾನ- ಇಬ್ಬರನ್ನೂ ಧಾರಾವಾಹಿಯಿಂದ ಹೊರಗೆ ಹಾಕಿರುವುದು !

ಸೋ, ಇನ್ನು ಮುಂದೆ ವಿನಯಾ ಪ್ರಸಾದ್‌ ಅಂದಿರಾ, ಆಕೆ ಈಗ ವಿನಯಾ ಪ್ರಕಾಶ್‌.

English summary
Vinaya Prasad becomes Vinaya Prakash !
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada