»   » ಇವಳು ಕನ್ನಡದ ಚುರುಮುರಿ, ಮಾಧುರಿ

ಇವಳು ಕನ್ನಡದ ಚುರುಮುರಿ, ಮಾಧುರಿ

Subscribe to Filmibeat Kannada

*ಎಂ.ವಿನೋದಿನಿ

ಮೂರು ವರ್ಷಗಳ ಹಿಂದೆ ಮಿಸ್‌ ಬೆಂಗಳೂರು. ಈ ವರ್ಷ ಮಿಸ್‌ ಸೌತ್‌ ಇಂಡಿಯಾ. ನಡುವೆ ಒಂದಿಷ್ಟು ಮಾಡೆಲಿಂಗ್‌. ಬಿಡುವಿನ ವೇಳೆಯಲ್ಲಿ ಸದಾ ಕೈಯಲ್ಲಿ ಪುಸ್ತಕ- ಇದು ಮಾಧುರಿ ಭಟ್ಟಾಚಾರ್ಯ ಕಿರು ಜಾತಕ.

ಕನ್ನಡ ಚಿತ್ರರಂಗದಲ್ಲೀಗ ಹೊಸ ಮುಖಗಳ ಕಾರುಬಾರು. ಖುಷಿ ಚಿತ್ರದಲ್ಲಿ ವಿಜಯ ರಾಘವೇಂದ್ರ ಹೊರತು ಪಡಿಸಿದಂತೆ ಉಳಿದೆಲ್ಲ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದ ಹೊಸಬರಿಗೆ ಜಯ ಸಂದಿತು. ಈ ಹೊಸಬರ ಪೈಕಿ ಮಾಧುರಿ ಭಟ್ಟಾಚಾರ್ಯ ಕೂಡ ಒಬ್ಬಾಕೆ. ‘ಖುಷಿ’ಯ ಯಶಸ್ಸು ಈಕೆಗೆ ಆಫರುಗಳ ಸುರಿಮಳೆಗರೆಯುತ್ತಿದೆ. ತಮಿಳು ಹಾಗೂ ತೆಲುಗಿನತ್ತ ವಲಸೆ ಹೋಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.

ಮಾಧುರಿ ಭಿನ್ನ ಅನ್ನಿಸುವುದು ಆಕೆಯ ಕಟ್ಟಾ ನಿರ್ಣಯ ಕೈಗೊಳ್ಳುವ ಧೋರಣೆಯಲ್ಲಿ. ಆಕೆ ಬಯಸಿದ್ದಿದ್ದರೆ ಇಷ್ಟು ಹೊತ್ತಿಗೆ ಯಾವತ್ತೋ ಸಿನಿಮಾ ನಾಯಕಿಯಾಗಿ ಹಳಬಳಾಗಬಹುದಿತ್ತು. 2000ನೇ ಇಸವಿಯಲ್ಲಿ ಮಿಸ್‌ ಬೆಂಗಳೂರ್‌ ಕಿರೀಟ ತೊಟ್ಟಾಗಲೇ ಈಕೆಯ ಮನೆ ಮುಂದೆ ನಿರ್ಮಾಪಕರು ಬಂದು ನಿಂತರು. ಆದರೆ, ಪಕ್ಕಾ ಕುಡುಮಿಯಾಗಿದ್ದ ಈಕೆ ಓದಿಗೆ ತನ್ನ ಮೊದಲ ಪ್ರಾಶಸ್ತ್ಯ ಅಂತ ಸಾರಾಸಗಟಾಗಿ ಹೇಳಿಬಿಟ್ಟಳು. ಇವತ್ತಿಗೂ ಎಂ.ಎಸ್‌.ರಾಮಯ್ಯ ಕಾಲೇಜಲ್ಲಿ ಎಲ್‌.ಎಲ್‌.ಬಿ ಓದುತ್ತಿರುವ ಮಾಧುರಿಗೆ ಮಾಧುರಿ ದೀಕ್ಷಿತ್‌ ತರಹದ ನಟಿಯಾಗುವಾಸೆ. ಅದಕ್ಕೂ ಮುಂಚೆ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪಡೆಯುವ ಗುರಿ. ಹಾಗೆ ಓದಿದರೂ, ತಾನು ಸುತಾರಾಂ ವಕೀಲಳಾಗುವುದಿಲ್ಲ ಅನ್ನುವುದು ಈಕೆಯ ವಿಚಿತ್ರ ತೀರ್ಮಾನ.

ಗೋವಿಂದ ನಾಯಕನಾಗಿ ನಟಿಸುತ್ತಿರುವ ಚಿತ್ರದಲ್ಲಿ ಒಂದು ಐಟಂ ಹಾಡಿಗೆ ಹೆಜ್ಜೆ ಹಾಕಬೇಕೆಂಬ ಬುಲಾವು ಬಾಲಿವುಡ್‌ನಿಂದ ಬಂದಿತ್ತು. ಅದನ್ನು ಎಡಗಾಲಿನಲ್ಲಿ ಒದ್ದು ಸುದ್ದಿ ಮಾಡಿರುವ ಮಾಧುರಿ, ಸತ್ತರೂ ಐಟಂ ನಂಬರ್‌ ಮಾಡಲ್ಲ ಅಂತ ಕಡ್ಡಿ ತುಂಡುಮಾಡಿದಂತೆ ಹೇಳಿದ್ದಾಳೆ.

ಕನ್ನಡ ಚಿತ್ರಗಳನ್ನು ಇಷ್ಟಪಡುವ ಮಾಧುರಿ ‘ಬಿಸಿಬಿಸಿ’ ಚಿತ್ರದಲ್ಲಿ ರಮೇಶ್‌ ಹಾಗೂ ಅನು ಪ್ರಭಾಕರ್‌ ಜೊತೆ ನಟಿಸಿದ್ದಾರೆ. ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ತೂಕವಿದೆ ಎನ್ನುವ ಈಕೆ ಕುಣಿದಿರುವ ಎರಡು ಹಾಡುಗಳಿಗೆ ಖುದ್ದು ರಮೇಶ್‌ ಮೆಚ್ಚಿಗೆ ಸೂಚಿಸಿದ್ದಾರೆ. ನಿಮ್ಮ ಕನಸೇನು ಅಂದರೆ, ನಾನು ಕನಸು ಕಾಣೋದಿಲ್ಲ ಅಂತ ನಗುವ ಮಾಧುರಿ ಕೆನ್ನೆ ಮೇಲೆ ಸಣ್ಣಗೆ ಗುಳಿ ಬೀಳುತ್ತದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada