»   » ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ ನಟಿ ರಂಭಾ?

ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ ನಟಿ ರಂಭಾ?

Subscribe to Filmibeat Kannada

ತೀವ್ರವಾಗಿ ಅಸ್ವಸ್ಥಗೊಂಡು ಗಂಭೀರ ಪರಿಸ್ಥಿತಿಯಲ್ಲಿದ್ದ ಖ್ಯಾತ ನಟಿ ರಂಭಾ ಅವರನ್ನು ಮಂಗಳವಾರ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೀವನದಲ್ಲಿ ತೀವ್ರ ನೊಂದಿದ್ದ ಅವರು ವಿಷ ಸೇವಿಸಿ ಆತ್ಮಹತ್ಯೆ ಪ್ರಯತ್ನಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಆದರೆ ಕುಟುಂಬ ಮೂಲಗಳು ಹಾಗೂ ಸಂಬಂಧಿಕರು ಆಹಾರ ವಿಷವಾಗಿ ಪರಿಣಮಿಸಿದ ಕಾರಣ ಆಕೆ ಅಸ್ವಸ್ಥಗೊಂಡಿದ್ದರು ಎಂದಿದ್ದಾರೆ.

ಆದರೆ ತಮಿಳು ಚಿತ್ರೋದ್ಯಮದ ಮೂಲಗಳು ಹೇಳುವ ಕಥೆಯೇ ಬೇರೆ. ಅವಕಾಶಗಳು ಸಿಗದೆ ತಮ್ಮ ವೃತ್ತಿ ಜೀವನದಲ್ಲಿ ರಂಭಾ ಬಹಳಷ್ಟು ಹತಾಶರಾಗಿದ್ದರು ಜೊತೆಗೆ ಪ್ರೇಮ ವ್ಯವಹಾರ ವಿಫಲವಾದ ಕಾರಣ ಮನನೊಂದಿದ್ದ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಗಿ ಚಿತ್ರೋದ್ಯಮ ಮಾತನಾಡುತ್ತಿದೆ. ಚೆನ್ನೈನ ಸಾಲಿಗ್ರಾಮ ಪ್ರದೇಶದ ತಮ್ಮ ಮನೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ರಂಭಾ ಅವರನ್ನು ಗಮನಿಸಿದ ಸಂಬಂಧಿಕರು ಕೂಡಲೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಆಕೆ ಚಿಕಿತ್ಸೆ ಪಡೆಯುತ್ತಿದ್ದು ಪರಿಸ್ಥಿತಿ ಗಂಭೀರವಾಗಿದೆ.

ಜಗ್ಗೇಶ್‌ರ 'ಸರ್ವರ್ ಸೋಮಣ್ಣ' ಚಿತ್ರದ ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ರಂಭಾ ಪಾದಾರ್ಪಣೆ ಮಾಡಿದ್ದರು. ನಂತರ ಭಾವ ಭಾಮೈದ, ಸಾಹುಕಾರ ಮತ್ತು ಇತ್ತೀಚೆಗೆ ಅನಾಥರು ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಮುಂತಾದ ಭಾಷೆಗಳಲ್ಲಿ ನಟಿಸಿದ್ದರು. ಭೋಜ್‍ಪುರಿ ಚಿತ್ರಗಳ ಕಡೆಗೆ ರಂಭಾ ಒಲವು ಹರಿಯಲಾರಂಭಿಸಿದ ಕಾರಣ ಅಲ್ಲಿಯೂ ಸಹ ಖ್ಯಾತಿ ಗಳಿಸಿದ್ದರು. ಭೋಜ್‌ಪುರಿ ಚಿತ್ರರಂಗದ ಖ್ಯಾತ ನಟ ರವಿ ಕಿಶನ್ ಜೊತೆ ಪ್ರೇಮಾಂಕುರವಾಗಿ ನಂತರ ಕಾರಣಾಂತರಗಳಿಂದ ಅವರಿಬ್ಬರೂ ದೂರಾಗಿ ಭಗ್ನ ಪ್ರೇಮಿಗಳಾದರು. ಹಳೆಯದೆಲ್ಲವನ್ನು ಮರೆತು ಈಗ ಮತ್ತೆ ತಮಿಳು ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರು. ಅತ್ತ ಅವಕಾಶಗಳು ಸಿಗದೆ ಇತ್ತ ಕಾಡುವ ಪ್ರಿಯಕರನ ನೆನಪುಗಳು ಆಕೆಯನ್ನು ಹೈರಾಣಾಗಿಸಿದ್ದವು. ಕೊನೆಗೆ ಇವೆಲ್ಲವನ್ನೂ ಆತ್ಮಹತ್ಯೆಯಲ್ಲಿ ಮರೆಯುವ ಪ್ರಯತ್ನಕ್ಕೆ ಕೈಹಾಕಿದರು ಎನ್ನಲಾಗಿದೆ.

(ದಟ್ಸ್‌ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada