'ಜಯಮ್ಮನ ಮಗ'ನ ಕೈಹಿಡಿದ ತಾರೆ ದೀಪಾ ಸನ್ನಿಧಿ
ಈಗಾಗಲೆ ತೆಲುಗು, ತಮಿಳು ಚಿತ್ರರಂಗದ ಬಾಗಿಲು ತಟ್ಟಿ ಬಂದಿರುವ ಮಲೆನಾಡ ಮಲ್ಲಿಗೆ ದೀಪಾ ಸನ್ನಿಧಿ ಈಗ 'ಜಯಮ್ಮನ ಮಗ'ನ ಕೈ ಹಿಡಿದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಲಕ್ಕಿ ಸ್ಟಾರ್ ಎನ್ನಿಸಿಕೊಂಡಿರುವ ದೀಪಾ ಸನ್ನಿಧಿ ಇದೀಗ ದುನಿಯಾ ವಿಜಯ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಲಿದ್ದಾರೆ.
ಸದ್ಯಕ್ಕೆ ಯಶ್ ಜೊತೆ ಅಭಿನಯಿಸುತ್ತಿರುವ 'ಜಾನೂ' ಚಿತ್ರೀಕರಣ ಮುಕ್ತಾಯ ಹಂತದಲ್ಲಿದೆ. ಒಂದೇ ಒಂದು ಹಾಡು ಮಾತ್ರ ಬಾಕಿ ಇದೆ. ಅಷ್ಟರಲ್ಲಾಗಲೆ ದುನಿಯಾ ವಿಜಯ್ ಮುಖ್ಯಭೂಮಿಕೆಯಲ್ಲಿರುವ 'ಜಯಮ್ಮನ ಮಗ' ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. 'ಜಯಮ್ಮನ ಮಗ'ನಿಗೆ ದುನಿಯಾ ಸೂರಿ ಶಿಷ್ಯ ವಿಜಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜಯಣ್ಣ ನಿರ್ಮಿಸುತ್ತಿರುವ ಚಿತ್ರವಿದು.
ಸುದೀಪ್ ಜೊತೆಗಿನ 'ಬಚ್ಚನ್' ಚಿತ್ರಕ್ಕೂ ದೀಪಾ ಸನ್ನಿಧಿ ಸಹಿ ಹಾಕಿದ್ದಾರೆ. 'ಜಯಮ್ಮನ ಮಗ' ಚಿತ್ರದ ಬಳಿಕಷ್ಟೇ ಬಚ್ಚನ್ ಚಿತ್ರದಲ್ಲಿ ದೀಪಾ ಸನ್ನಿಧಿ ಭಾಗಿಯಾಗಲಿದ್ದಾರೆ. "ಈ ವರ್ಷ ತನ್ನ ಪಾಲಿಗೆ ಅದೃಷ್ಟ ತಂದಿದೆ. ಎರಡು ಚಿತ್ರಗಳಲ್ಲಿ ಬಿಜಿಯಾಗಿದ್ದೇನೆ. ಕತೆ ಹಾಗೂ ಪಾತ್ರ ಇಷ್ಟವಾದರೆ ಒಪ್ಪಿಕೊಳ್ಳುತ್ತೇನೆ" ಎಂದಿದ್ದಾರೆ ದೀಪಾ. (ಏಜೆನ್ಸೀಸ್)


Click it and Unblock the Notifications











