ಭರ್ಜರಿ ಯಶಸ್ಸಿನತ್ತ 'ಎರಡನೆ ಮದುವೆ'
ಕೃಷ್ಣನ್ ಲವ್ ಸ್ಟೋರಿ ಗೆಲುವಿನ ಪಟ್ಟಿ ಸೇರಿದ ಬೆನ್ನಲ್ಲೇ ಇನ್ನೊಂದು ಚಿತ್ರ ಭರ್ಜರಿ ಗಳಿಕೆ ಗಳಿಸುತ್ತಿದ್ದು ಗಾಂಧಿನಗರ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಅನಂತನಾಗ್, ಸುಹಾಸಿನಿ ಮುಖ್ಯ ಭೂಮಿಕೆಯಲ್ಲಿರುವ 'ಎರಡನೆ ಮದುವೆ' ಚಿತ್ರ 25 ದಿನ ಪೂರೈಸಿದ್ದು, ಚಿತ್ರಕ್ಕೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹಾಸ್ಯ ಪ್ರಧಾನವಾಗಿರುವ ಈ ಚಿತ್ರದಲ್ಲಿ ಅನಂತನಾಗ್, ಸುಹಾಸಿನಿ, ಪ್ರೇಂ, ಜೆನ್ನಿಫರ್, ಶರಣ್, ತಾರಾ, ರಂಗಾಯಣ ರಘು ಪ್ರಮುಖ ಭೂಮಿಕೆಯಲ್ಲಿದ್ದರು. ಕಲಾವಿದರು ಪೈಪೋಟಿಗೆ ಬಿದ್ದಂತೆ ನಟಿಸಿದ್ದ ಚಿತ್ರವನ್ನು ಪ್ರೇಕ್ಷಕ ಒಪ್ಪಿಕೊಂಡಿದ್ದಾನೆ. ಬೆಂಗಳೂರು, ಮೈಸೂರು ಮತ್ತು ಉತ್ತರ ಕರ್ನಾಟಕ ಪ್ರದೇಶದಲ್ಲಿ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮಧ್ಯೆ ಜಗ್ಗೇಶ್ ಅಭಿನಯದ 'ಲಿಫ್ಟ್ ಕೊಡ್ಲಾ' ಚಿತ್ರ ಕೂಡಾ ಗಳಿಕೆಯಲ್ಲಿ ಆರಂಭಿಕ ಮುನ್ನಡೆ ಸಾಧಿಸಿದೆ.
ಎರಡನೇ ಮದುವೆ ಚಿತ್ರದ ಯಶಸ್ಸಿಗೆ ಪ್ರಮುಖರಲ್ಲೊಬ್ಬರಾದ ಸಂಭಾಷಣೆಕಾರ ರಾಜೇಂದ್ರ ಕಾರಂತ್, ತನಗರಿವಿಲ್ಲದಂತೆ ಚಿತ್ರದಲ್ಲಿ ಕೆಲವು ಸಂಭಾಷಣೆ ಸೇರಿಸಿರುವ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ದ್ವಂದ್ವಾರ್ಥ ಬರುವ ಸಂಭಾಷಣೆಗೆ ನಾನು ಪೆನ್ ಹಿಡಿದಿಲ್ಲವೆಂದು ಕಾರಂತ್ ಸ್ಪಷ್ಟ ಪಡಿಸಿದ್ದಾರೆ. ಬಹಳ ದಿನಗಳ ನಂತರ ಕನ್ನಡ ಚಿತ್ರವೊಂದು ಹಿಟ್ ಆಗುತ್ತಿರುವುದರಿಂದ ನಾನು ಈ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸುತ್ತಿಲ್ಲ ಎಂದು ಕಾರಂತ್ ಹೇಳಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಚಿತ್ರವನ್ನು ವೀಕ್ಷಿಸಿ ಭೇಷ್ ಅಂದಿದ್ದರು. ಎರಡನೆ ಮದುವೆ ಚಿತ್ರ ಹಿಂದಿ ಭಾಷೆಗೂ ರೀಮೇಕ್ ಆಗುತ್ತಿದೆ. ಅಂತೂ ಚಿತ್ರದ ಯಶಸ್ಸಿನಿಂದ ದಿನೇಶ್ ಬಾಬು ಮತ್ತೆ ನಿಟ್ಟುಸಿರು ಬಿಡುವಂತಾಗಿದೆ. ಎರಡನೆ ಮದುವೆಯ ಗೆಲುವು ಅನಂತನಾಗ್ ರ ವೃತ್ತಿ ಬದುಕಿನಲ್ಲಿ ಮತ್ತೊಂದು ತಿರುವು ನೀಡಿದೆ.


Click it and Unblock the Notifications











