ಪ್ರಾಣ ಹೋದರೂ ಅಭಿಮಾನ ಮರೆಯಲ್ಲ: ಶಿವಣ್ಣ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈಗ ಅಭಿಮಾನಿಗಳ ಪಾಲಿನ ಆರಾಧ್ಯ ದೈವ. ಶಿವರಾಜ್ ಕುಮಾರ್ ತಮ್ಮ ವೃತ್ತಿ ಜೀವನದಲ್ಲಿ 25 ವಸಂತಗಳನ್ನು ಹಾಗೂ 100 ಚಿತ್ರಗಳನ್ನು ಪೂರೈಸುವ ಮೂಲಕ ಸೆಂಚುರಿ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಸೇನಾ ಸಮಿತಿ ಶಿವಣ್ಣನನ್ನು ಸೋಮವಾರ (ಜು.25) ಅಭಿನಂದಿಸಿತು.
ಅಭಿನಂದನೆ ಸ್ವೀಕರಿಸಿದ ಬಳಿಕ ಚೌಡಯ್ಯ ಸ್ಮಾರಕ ಭವನದಲ್ಲಿ ಶಿವಣ್ಣ ಮಾತನಾಡುತ್ತಾ, ಇಷ್ಟು ದಿನ ಅಭಿಮಾನಿಗಳು ನನ್ನ ಮೇಲೆ ತೋರಿದ ಪ್ರೀತಿಗೆ ಚಿರಋಣಿಯಾಗಿದ್ದೇನೆ. ಪ್ರಾಣ ಹೋದರೂ ಈ ಅಭಿಮಾನವನ್ನು ಮರೆಯುವುದಿಲ್ಲ. ಅಭಿಮಾನಿಗಳು ಬಯಸುವ ಚಿತ್ರಗಳಲ್ಲಿ ಅಭಿನಯಿಸಿ ಒಳ್ಳೆಯ ಚಿತ್ರಗಳನ್ನು ನೀಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶಿವಣ್ಣನ ಮೊದಲ ಚಿತ್ರ ಆನಂದ್ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್, 25ನೇ ಚಿತ್ರ ಮನ ಮಿಡಿಯಿತು ನಿರ್ದೇಶಕ ಎಂ ಎಸ್ ರಾಜಶೇಖರ್, 50ನೇ ಚಿತ್ರ ಎಕೆ 47 ನಿರ್ಮಾಪಕ ರಾಮು, 75ನೇ ಚಿತ್ರ ಶ್ರೀರಾಮ್ ನಿರ್ದೇಶಕ ಎಂ ಎಸ್ ರಮೇಶ್, ನಿರ್ಮಾಪಕ ಆರ್ ಶ್ರೀನಿವಾಸ್ ಅವರನ್ನೂ ಸನ್ಮಾನಿಸಲಾಯಿತು.
ಶಿವಣ್ಣ ತಮ್ಮ ಕಲಾ ಬದುಕಿನಲ್ಲಿ 25 ವಸಂತಗಳನ್ನು ಪೂರೈಸಿದ್ದು 100 ಚಿತ್ರಗಳಲ್ಲಿ ಅಭಿನಯಿಸಿದ್ದು ಈ ವರ್ಷದ ಹೆಗ್ಗಳಿಕೆ. ಈ ವಿಶೇಷ ಸಂದರ್ಭದಲ್ಲಿ ಅಪ್ಪಾಜಿ ಅವರ ನೆನಪು ಕಾಡುತ್ತಿದೆ ಎಂದರು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಹಿರಿಯ ನಟಿ ಅಂಬಿಕಾ ಮಾತನಾಡುತ್ತಾ, ಇಂದು ನಾನು ಕನ್ನಡದಲ್ಲಿ ಮಾತನಾಡುತ್ತಿದ್ದೇನೆ ಎಂದರೆ ಅದಕ್ಕೆ ಅಪ್ಪಾಜಿ ಅವರೆ ಕಾರಣ. ಅವರಿಂದಲೇ ನಾನು ಅಲ್ಪ ಸ್ವಲ್ಪ ಕನ್ನಡ ಕಲಿತಿದ್ದು. ಶಿವಣ್ಣನ ಮೇಲಿನ ಪ್ರೀತಿಯಿಂದನಾನು ಇಲ್ಲಿಗೆ ಬಂದಿದ್ದೇನೆ ಎಂದರು.
ಈ ಮನಮಿಡಿಯುವ ಕಾರ್ಯಕ್ರಮದಲ್ಲಿ ನಟ ರಾಘವೇಂದ್ರ ರಾಜ್ ಕುಮಾರ್, ನಟಿ ಸುಧಾರಾಣಿ, ಪೂಜಾಗಾಂಧಿ, ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ನಟ ಶ್ರೀನಾಥ್, ಗೀತಾ ಶಿವರಾಜ್ ಕುಮಾರ್ ಉಪಸ್ಥಿತರಿದ್ದರು. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











