»   » ಮಾರುಕಟ್ಟೆಯಲ್ಲಿ ಬಂದಿವೆ ಹೊಸ ಧ್ವನಿಸುರುಳಿಗಳು

ಮಾರುಕಟ್ಟೆಯಲ್ಲಿ ಬಂದಿವೆ ಹೊಸ ಧ್ವನಿಸುರುಳಿಗಳು

Posted By:
Subscribe to Filmibeat Kannada

ಜನಪ್ರಿಯ ಭಕ್ತಿಗೀತೆ, ಜನಪದಗೀತೆ ಹಾಗೂ ಚಿತ್ರಗೀತೆಗಳ ಧ್ವನಿಸುರುಳಿಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿರುವ 'ಜಂಕಾರ್' ಸಂಸ್ಥೆ ಈ ವಾರ ಕರುನಾಡ ಸಿರಿ ಶ್ರೀಮೈಲಾರಲಿಂಗ ಎಂಬ ಭಕ್ತಿಗೀತೆಯ ಧ್ವನಿಸುರುಳಿ ಹಾಗೂ ಪಲ್ಲಕ್ಕಿ ಮತ್ತು ನೀಲಕಂಠ ಚಿತ್ರದ ಗೀತೆಗಳನ್ನೊಳಗೊಂಡ ಚಿತ್ರಗೀತೆಗಳ ಧ್ವನಿಸುರುಳಿ ಸೇರಿದಂತೆ ಒಟ್ಟು ಎರಡು ಧ್ವನಿಸುರುಳಿಯನ್ನು ಬಿಡುಗಡೆ ಮಾಡಿದೆ.

ಕರುನಾಡ ಸಿರಿ ಶ್ರೀಮೈಲಾರಲಿಂಗ : ಹೇಮಂತ್ ಹಾಡಿರುವ 'ಶಿವನೇ ಮಲ್ಲಾರ' ಎಂಬ ಗೀತೆಯೊಂದಿಗೆ ಶುರುವಾಗುವ ಈ ಭಕ್ತಿ ಸಂಪುಟ ಅಜಯ್ ಹಾಡಿರುವ 'ಬಾರೋ ಬಾರೋ' ಗೀತೆಯೊಂದಿಗೆ ಮುಕ್ತಾಯವಾಗುತ್ತದೆ. ಉಳಿದಂತೆ 'ದೇವರು ಎಂದರೆ', 'ಮೈಲಾರದಯ್ಯ' ಹಾಗೂ 'ಕುದುರೆಯನೇರಿ' ಗೀತೆಗಳನ್ನು ಅಜಯ್, 'ಬ್ರಹ್ಮ ಬಂಡಾರ ತಂದ', 'ಪಂಚಾನನಾ' ಗೀತೆಗಳನ್ನು ಹೇಮಂತ್ ಹಾಗೂ 'ಮಣ್ಣ ಮಲಾರದಲ್ಲಿ' ಗೀತೆಯನ್ನು ಮಾಧವಿ ಹಾಡಿದ್ದಾರೆ. ವೀರೇಶ್‌ಬೆಳಗಾಲಪೇಟೆ ಬರೆದಿರುವ ಭಕ್ತಿಸಾಹಿತ್ಯಕ್ಕೆ ಹಂಸಲೇಖ, ವಿ.ರವಿಚಂದ್ರನ್, ಎಸ್.ಎ.ರಾಜಕುಮಾರ್ ಹಾಗೂ ನಾಗೇಂದ್ರಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ.ಈ ಕ್ಯಾಸೆಟ್ ಬಿಡಿ ಮಾರಾಟದರ 30ರೂ.

ಪಲ್ಲಕಿ -ನೀಲಕಂಠ : ಸಂಪುಟದ ಮೊದಲಬದಿಯಲ್ಲಿ ಲವ್ಲಿಸ್ಟಾರ್ ಪ್ರೇಮ್ ಅಭಿನಯದ 'ಪಲ್ಲಕ್ಕಿ' ಚಿತ್ರದ ಐದು ಗೀತೆಗಳಿದೆ. ಈ ಪೈಕಿ 'ಕಣ್ಣಲ್ಲೂ ನೀನೇನೆ' ಗೀತೆಯನ್ನು ಗುರುಕಿರಣ್, 'ಬಿಡು ಬಿಡು' ಗೀತೆಯನ್ನು ರಾಜೇಶ್, ಚೈತ್ರಾ, 'ಓ ಪ್ರಿಯಾ' ಗೀತೆಯನ್ನು ಚಿತ್ರಾ, 'ಅವ್ವ ಕಣೋ ಕನ್ನಡ' ಗೀತೆಯನ್ನು ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ 'ಗೋಲಿಮಾರೊ' ಗೀತೆಯನ್ನು ಕಾರ್ತಿಕ್ ಹಾಡಿದ್ದಾರೆ. ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ.

ಎರಡನೇ ಬದಿಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ನೀಲಕಂಠ' ಚಿತ್ರದ ಐದು ಗೀತೆಗಳಿವೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ನಂದಿತಾ ಹಾಡಿರುವ 'ಅಮ್ಮಮ್ಮಮ್ಮಮ್ಮೋ' ಗೀತೆಯೊಂದಿಗೆ ಸುರುಳಿ ಬಿಚ್ಚಿಕೊಳ್ಳುವ ಈ ಸಂಪುಟ ಚೈತ್ರಾ ಹಾಡಿರುವ 'ಮಲ್ಲಮಲ್ಲ' ಗೀತೆಯೊಂದಿಗೆ ಮುಗಿಯುತ್ತದೆ. ಉಳಿದಂತೆ 'ಹೆಣ್ಣಿಗೆ' ಗೀತೆಯನ್ನು ಶ್ರೀನಿವಾಸ್, ಸುಮಾಶಾಸ್ತ್ರಿ, 'ಅಂದದ ಬೊಂಬೆಗೆ' ಗೀತೆಯನ್ನು ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ 'ದೇವರು ಬರೆದಾ' ಗೀತೆಯನ್ನು ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ನಂದಿತಾ ಹಾಡಿದ್ದಾರೆ. ಸಾಯಿಪ್ರಕಾಶ್ ನಿರ್ದೇಶಿಸಿರುವ ಈ ಚಿತ್ರಕ್ಕೆ ರವಿಚಂದ್ರನ್ ಅವರೇ ಸಂಗೀತ ಸಂಯೋಜಿಸಿದ್ದಾರೆ.ಈ ಕ್ಯಾಸೆಟ್ ಬಿಡಿ ಮಾರಾಟದರ 30ರೂ.

ಶ್ರೀ ಭುವನೇಶ್ವರಿ ಮೇಕರ್ಸ್ ಅವರ 'ಮರುಭೂಮಿ': ಗಾಯಕ ಗಂಗೋತ್ರಿ ರಂಗಸ್ವಾಮಿ ಹಾಡಿರುವ 'ಮರುಭೂಮಿಯಲ್ಲಿ ಬೀಜವ' ಗೀತೆಯೊಂದಿಗೆ ಶುರುವಾಗುವ ಈ ಸಂಪುಟದಲ್ಲಿ ಶ್ರೀ ಭುವನೇಶ್ವರಿ ಮೂವೀ ಮೇಕರ್ಸ್ ಅವರ 'ಮರುಭೂಮಿ' ಚಿತ್ರದ ಹನ್ನೊಂದು ಗೀತೆಗಳಿವೆ. ಚಿತ್ರದ ನಿರ್ದೇಶಕ ಋಷಿ ಅವರೇ ಸಾಹಿತ್ಯ ರಚಿಸಿ ಮಧುರ ಅವರು ಸಂಗೀತ ಸಂಯೋಜಿಸಿರುವ ಈ ಗೀತೆಗಳನ್ನು ಹಾಡಿರುವ ಇತರ ಗಾಯಕರು ಶೃಂಗಾರ್, ರಾಜೇಶ್‌ಕೃಷ್ಣನ್, ಎಲ್.ಎನ್.ಶಾಸ್ತ್ರಿ, ಸಿ.ಅಶ್ವಥ್, ನಂದಿತಾ, ಬದ್ರಿಪ್ರಸಾದ್, ಹಾಗೂ ಗುರುರಾಜಹೊಸಕೋಟೆ.

ಸಿ.ಅಶ್ವಥ್ ಹಾಡಿರುವ 'ಒಳಿತು ಮಾಡುವ ಮನುಷ' ಹಾಗೂ ಗುರುರಾಜ ಹೊಸಕೋಟೆ, ಬದ್ರಿಪ್ರಸಾದ್ ಹಾಗೂ ಎಲ್.ಎನ್.ಶಾಸ್ತ್ರಿ ಹಾಡಿರುವ 'ಹಾಕು ಮಜ್ಜೀ ಹಾಕು' ಗೀತೆಗಳು ವಿಶೇಷ ಗಮನ ಸೆಳೆಯುತ್ತದೆ. ಗಂಗೋತ್ರಿ ರಂಗಸ್ವಾಮಿ ಹಾಡಿರುವ 'ಮರುಭೂಮಿಯಲ್ಲಿ' ಗೀತೆಯೊಂದಿಗೆ ಈ ಸಂಪುಟ ಮುಕ್ತಾಯವಾಗುತ್ತದೆ. ಮಯೂರಿ ಆಡಿಯೋ ಅವರು ಹೊರತಂದಿರುವ ಈ ಸಿಡಿಯ ಬೆಲೆ - 40ರೂ ಮಾತ್ರ


ಶ್ರೀ ಮಲೆ ಮಹದೇಶ್ವರ ಕ್ಷೇತ್ರ ದರ್ಶನ ಡಿಯೋ : ಮಹಾಶಿವರಾತ್ರಿ ಸಮೀಪಿಸುತ್ತಿದ್ದಂತೆ ಸುಪ್ರಸಿದ್ದ ಶೈವಕ್ಷೇತ್ರ ಮಲೆ ಮಹದೇಶ್ವರ ಬೆಟ್ಟ ಹಾಗೂ ಅಲ್ಲಿನ ಜಾತ್ರೆಯ ದೃಶ್ಯಗಳನ್ನು ಕಣ್ಣಮುಂದೆ ನಿಲ್ಲಿಸುವ ಹಾಗೂ ಭಕ್ತಿಗೀತೆಗಳನ್ನು ಆಲಿಸುವ ವಿಡಿಯೋ ಸಿಡಿಯನ್ನು 'ಹೃಷಿ ಆಡಿಯೋ' ಸಂಸ್ಥೆ ಹೊರತಂದಿದೆ. ಪ್ರತೀಕ್ಷಾ ಡಿಜಿಟಲ್ ರೆಕಾರ್ಡಿಂಗ್ ಸಂಸ್ಥೆ ನಿರ್ಮಿಸಿರುವ ಈ ವಿಸಿಡಿಯಲ್ಲಿ ಮಲೆಮಹದೇಶ್ವರ ಬೆಟ್ಟ ಹಾಗೂ ದೇವಸ್ಥಾನದ ರಮಣೀಯ ದೃಶ್ಯಗಳನ್ನು ಕಾಣಬಹುದು.

ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿರುವ 'ಉಘೇ ಮಾದಪ್ಪ ಹೋಗುವ ಬನ್ನಿ ಏಳು ಮಲೆಗೆ' ಗೀತೆಯೊಂದಿಗೆ ಭಕ್ತಿಗೀತೆಗಳ ಸಮಾರಾಧನೆ ಪ್ರಾರಂಭವಾಗುತ್ತದೆ. ಉಳಿದ ಗೀತೆಗಳನ್ನು ಬಿ.ಆರ್.ಛಾಯಾ, ಸುಜಾತಾದತ್, ಹೇಮಂತ್, ಅಜೇಯ್ ಹಾಗೂ ದಿನೇಶ್ ಹಾಡಿದ್ದಾರೆ. 'ಮಲೆಯೊಡೆಯ ಮಾದಪ್ಪನ ಜಾತ್ರೆಗೆ ಬನ್ನಿ' ಗೀತೆಯೊಂದಿಗೆ ಈ ಸಂಪುಟ ಮುಕ್ತಾಯವಾಗುತ್ತದೆ.

ಆನೆಮಲೆ, ನಾಗಮಲೆ, ರುದ್ರಾಕ್ಷಿಮಲೆ, ಗುಲಗಂಜಿಮಲೆ ಮುಂತಾದ ಏಳು ಬೆಟ್ಟಗಳನ್ನೊಳಗೊಂಡ ಈ ಕ್ಷೇತ್ರದ ಮನಮೋಹಕ ದೃಶ್ಯ ಹಾಗೂ ಇಂಪಾದ ಭಕ್ತಿಗೀತೆಗಳ ರಸದೌತಣ ನೀಡುವ ನಿರೂಪಣೆಯನ್ನು ಮಾರುತೇಶ್ ಮಾಡಿದ್ದಾರೆ. ಶ್ರೀಚಂದ್ರು ಹಾಗೂ ಕೆರೆಹಳ್ಳಿ ಮಹದೇವಸ್ವಾಮಿ ಬರೆದಿರುವ ಭಕ್ತಿಸಾಹಿತ್ಯಕ್ಕೆ ಎಂ.ಎನ್.ಮಾರುತಿ, ಸುಜಾತಾದತ್ ಮತ್ತು ಸಿಬಿನ್ ಬರುವತ್ತೂರ್ ರಾಗ ಸಂಯೋಜಿಸಿದ್ದಾರೆ. ಮಹದೇಶ್ವರನ ಭಕ್ತರಿಗೆ ಬಹಳ ಉಪಯುಕ್ತವಾದ ಈ ವಿಸಿಡಿಯ ಬೆಲೆ 65ರೂ ಮಾತ್ರ.

(ದಟ್ಸ್ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada