ಚಿತ್ರೋದ್ಯಮದ ಆತ್ಮೀಯ ಸನ್ಮಾನಕ್ಕೆ ಸಿಎಂ ಪುಳಕ

By Staff

ಪೈರಸಿ ತಡೆಗೆ ಗೂಂಡಾ ಕಾಯಿದೆ ಜಾರಿಗೆ ತಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕನ್ನಡ ಚಿತ್ರೋದ್ಯಮ ಮಂಗಳವಾರ ಆತ್ಮೀಯವಾಗಿ ಸನ್ಮಾನಿಸಿತು. ಹಾಡು ಕುಣಿತದೊಂದಿಗೆ ಹೃದಯ ಸ್ಪರ್ಶಿ ಕೃತಜ್ಞತೆಗಳನ್ನು ಮುಖ್ಯಮಂತ್ರಿಗಳಿಗೆ ತಿಳಿಸಲಾಯಿತು. ಅರಮನೆ ಮೈದಾನದ ಗಾಯತ್ರಿ ವಿಹಾರ ಮಂಗಳವಾರ ಸಂಜೆ ರಂಗೇರಿತ್ತು.

ಈ ಸಂದರ್ಭದಲ್ಲಿ ಚಲನ ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ ಮಾತನಾಡುತ್ತಾ, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಾಮಧೇನು ಕಲ್ಪವೃಕ್ಷ ಎಂದು ಹಾಡಿ ಹೊಗಳಿದರು. ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿಗಳು ಮನೆಮಂದಿ ನೋಡುವಂಥ ಆರೋಗ್ಯಕರವಾದ ಚಿತ್ರಗಳನ್ನು ನಿರ್ಮಿಸಿ. ಹೊಸಬರನ್ನು ಪ್ರೋತ್ಸಾಹಿಸಿ. ಅವರಿಗೆ ಹಿರಿಯರು ಉತ್ತಮ ಮಾರ್ಗದರ್ಶನ ನೀಡಿ ಎಂದರು.

ನಕಲಿ ಸಿಡಿ, ಡಿವಿಡಿ ಮತ್ತು ಧ್ವನಿಸುರುಳಿಗಳನ್ನು ಉಪಯೋಗಿಸುವವರ ಜೊತೆಗೆ ಮಾರಾಟ ಮಾಡುವವರನ್ನು ಶಿಕ್ಷಿಸಿ ಎಂದು ಮುಖ್ಯಮಂತ್ರಿಗಳಿಗೆ ಜಯಮಾಲಾ ಅವರು ವಿನಯಪೂರ್ವಕವಾಗಿ ಮನವಿ ಮಾಡಿಕೊಂಡರು. ಮುಂದೆಯೂ ಕನ್ನಡ ಚಿತ್ರೋದ್ಯಮಕ್ಕೆ ಸರಕಾರದ ಕಡೆಯಿಂದ ಏನೆಲ್ಲಾ ಸಾಧ್ಯವೋ ಅವೆಲ್ಲವನ್ನೂ ನೀಡುವ ಭರವಸೆಯನ್ನು ಯಡಿಯೂರಪ್ಪ ನೀಡಿದರು.

ಕನ್ನಡ ಚಲನಚಿತ್ರ ಕಲಾವಿದರ ಸಂಘದ ಭವನಕ್ಕೆ ಆರ್ಥಿಕ ನೆರವು ನೀಡುವ ಭರವಸೆಯನ್ನು ಮಾಹಿತಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನೀಡಿದರು. ಕಲಾವಿದರ ಸಂಘದ ಕಟ್ಟಡವನ್ನು ನಿರ್ಮಿಸಿ ಎಂಬ ನಟ ಅಂಬರೀಷ್ ಅವರ ಬೇಡಿಕೆಯನ್ನು ಈಡೇರಿಸುವ ವಿಶ್ವಾಸವನ್ನು ಸಚಿವ ಕಟ್ಟಾ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳೊಂದಿಗೆ ಗೃಹ ಸಚಿವ ವಿ ಎಸ್ ಆಚಾರ್ಯ, ಮಾಹಿತಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಸಾರಿಗೆ ಸಚಿವ ಆರ್ ಅಶೋಕ್, ನಗರಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್ ಸುರೇಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸರಕಾರದ ಮುಖ್ಯ ಕಾರ್ಯದರ್ಶಿ ಸುಧಾಕರ್, ಕನ್ನಡ ಮತ್ತು ಸಂಸ್ಕೃತಿ ಕಾರ್ಯದರ್ಶಿ ಜಯಚಾಮರಾಜೇ ಅರಸ್, ಮಾಹಿತಿ ನಿರ್ದೇಶಕ ವಿಶುಕುಮಾರ್ ಅವರನ್ನು ಕೆಎಫ್ ಸಿಸಿ ಸನ್ಮಾನಿಸಿತು.

ಒಂದೂವರೆ ಗಂಟೆ ಕಾಲ ನಡೆದ ಈ ಹೃದಯಸ್ಪರ್ಶಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಮೂಕ ವಿಸ್ಮಿತರಾಗಿದ್ದರು. ''ನಿಮ್ಮಿಂದಲೇ ನಿಮ್ಮಿಂದಲೇ ಕನಸೊಂದು ಶುರುವಾಗಿದೆ...ನಮ್ಮೆದೆಯಲ್ಲಿ ಇದ್ದಂತಹ ಕೋಲಾಹಲ ತನ್ನಿಂತಾನೆ ದೂರಾಯ್ತು ನಿಮ್ಮಿಂದಲೇ...'' ಎಂದು ಹಾಡಿ ಮುಖ್ಯಮಂತ್ರಿಗಳನ್ನು ಹೊಗಳಲಾಯಿತು.

ಮುಖ್ಯಮಂತ್ರಿಗಳನ್ನು ''ಓಂಕಾರ ನಾದರೂಪಿ'' ಎಂದರು, ''ಶಿವಪ್ಪ ಕಾಯೊ ತಂದೆ'' ಎಂದರು... ಚಿತ್ರೋದ್ಯಮದ ಈ ಆತ್ಮೀಯ ಸನ್ಮಾನಕ್ಕೆ ಮುಖ್ಯಮಂತ್ರಿಗಳು ತಲೆದೂಗಿದರು. ಒಂದು ಕ್ಷಣ ಯಡಿಯೂರಪ್ಪ ಅವರ ಕಣ್ಣುಗಳು ತೇವಗೊಂಡವು. ಧನ್ಯತಾ ಭಾವವನ್ನು ಅವರ ಕಣ್ಣುಗಳು ಸೂಸುತ್ತಿದ್ದವು.

ಮುಖ್ಯಮಂತ್ರಿಗಳು ಮತ್ತು ಸಚಿವ ಸಂಪುಟದ ಜತೆ ವೇದಿಕೆಯನ್ನು ಅಂಬರೀಷ್, ಜಗ್ಗೇಶ್, ಮುಖ್ಯಮಂತ್ರಿ ಚಂದ್ರು, ಪಾರ್ವತಮ್ಮ ರಾಜ್ ಕುಮಾರ್, ಡಾ.ಸರೋಜಾ ದೇವಿ ಸೇರಿದಂತೆ ಸರಕಾರಿ ಅಧಿಕಾರಿಗಳು ಹಂಚಿಕೊಂಡಿದ್ದರು. ನಟ ರಮೇಶ್ ಅರವಿಂದ್ ಮತ್ತು ಅಪರ್ಣಾ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರೂಪಿಸಿದರು.

ಹಿರಿಯ ನಟ ದೊಡ್ಡಣ್ಣ ವಂದನಾರ್ಪಣೆ ಸಲ್ಲಿಸುವ ವೇಳೆಗೆ ವೇದಿಕೆ ಖಾಲಿಯಾಗಿತ್ತು. ಎಲ್ಲಾ ಎಲ್ಲಿ ಎಂದು ನೋಡಿದರೆ ಎಲ್ಲರೂ ಗುಂಡು ಪಾರ್ಟಿ ಹಾಗೂ ಔತಣಕೂಟದಲ್ಲಿ ಅದಾಗಲೇ ಮೀಯುತ್ತಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಚ್ಚುಕಟ್ಟಾದ ಕಾರ್ಯಕ್ರಮ ಇದಕ್ಕೆ ಸಾಕ್ಷಿಯಾಗಿತ್ತು.

(ದಟ್ಸ್ ಕನ್ನಡ ಚಿತ್ರವಾರ್ತೆ)

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X