»   » ಫೂಂಕ್ ನೋಡಿದ ಕೊಡಗಿನ ಕಲಿಗೆ ಸಿಗುವುದೇ 5 ಲಕ್ಷ ?

ಫೂಂಕ್ ನೋಡಿದ ಕೊಡಗಿನ ಕಲಿಗೆ ಸಿಗುವುದೇ 5 ಲಕ್ಷ ?

Subscribe to Filmibeat Kannada

ತನ್ನ ಭಯಾನಕ ಚಿತ್ರ 'ಫೂಂಕ್'ನ್ನು ರಾತ್ರಿ ಒಬ್ಬರೇ ಕುಳಿತು ವೀಕ್ಷಿಸಿದರೆ ಅವರಿಗೆ 5 ಲಕ್ಷ ರು.ಗಳನ್ನು ಬಹುಮಾನವಾಗಿ ನೀಡುವುದಾಗಿ ಬಾಲಿವುಡ್‌‌ನ ಖ್ಯಾತ ನಿರ್ದೇಶಕ ರಾಮ್‍ಗೋಪಾಲ್ ವರ್ಮಾ ಘೋಷಿಸಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ ಕೊಡಗಿನ ಅರೆಯಡ ಪವಿನ್ ಪೊನ್ನಣ್ಣ(30)ಚಿತ್ರವನ್ನು ಏಕಾಂಗಿಯಾಗಿ ವೀಕ್ಷಿಸಿ ಹೊರಬಂದಿದ್ದಾರೆ.

ಭಾನುವಾರ ರಾತ್ರಿ 9.45ರ ಪ್ರದರ್ಶನವನ್ನು ಬೆಂಗಳೂರಿನ ಗರುಡಮಾಲ್‌ನ ಇನೋಕ್ಸ್ ಚಿತ್ರಮಂದಿರದಲ್ಲಿ ಒಬ್ಬರೆ ಕುಳಿತು ಚಿತ್ರ ಮುಗಿಯುವವರೆಗೂ ವೀಕ್ಷಿಸಿ 12 ಗಂಟೆಗೆ ನಗುಮುಖದಿಂದ ಹೊರಬಂದರು. ''ಆರಂಭದ ಒಂದು ದೃಶ್ಯ ಕೊಂಚ ಭಯಹುಟ್ಟಿಸಿದ್ದನ್ನು ಬಿಟ್ಟರೆ ಉಳಿದಂತೆ ನಾನು ಇಡೀ ಚಿತ್ರವನ್ನು ಎಂಜಾಯ್ ಮಾಡಿದೆ. 5 ಲಕ್ಷ ರು.ಗಳ ಬಹುಮಾನದ ಆಸೆಗಾಗಿ ಈ ಸಾಹಸಕ್ಕೆ ಕೈಹಾಕಲಿಲ್ಲ, ಕೊಡವರ ಧೈರ್ಯ ಏನು ಎಂಬುದನ್ನು ಇಡೀ ದೇಶಕ್ಕೆ ತೋರಿಸುವ ಛಲದಿಂದ ಈ ಸವಾಲನ್ನು ಸ್ವೀಕರಿಸಿದೆ'' ಎನ್ನುತ್ತಾರೆ ಪವಿನ್.

ಚಿತ್ರ ನೋಡಬೇಕಾದರೆ ಕೆಲವು ಷರತ್ತುಗಳನ್ನು ಹೇರಲಾಗಿತ್ತು. ಮೊದಲು ಅವರು ಚಿತ್ರಮಂದಿರದ 227 ಆಸನಗಳ ಟಿಕೆಟ್ ದರ 47,500 ರು.ಗಳನ್ನು ಭರಿಸಬೇಕಿತ್ತು. ಒಂದು ವೇಳೆ ಅರ್ಧದಲ್ಲೇ ಫೂಂಕ್ ನೋಡಿ ಭಯಭೀತರಾಗಿ ಚಿತ್ರಮಂದಿರದಿಂದ ಹೊರಬಂದಿದ್ದರೆ ಅಷ್ಟೂ ದುಡ್ಡನ್ನು ಕಳೆದುಕೊಳ್ಳುಬೇಕಾಗುತ್ತದೆ. ಆದರೆ ಪವಿನ್ ಚಿತ್ರವನ್ನು ಕೊನೆತನಕ ಧೈರ್ಯವಾಗಿ ವೀಕ್ಷಿಸಿ ಕೂಲಾಗಿ ಹೊರಬಂದಿದ್ದಾರೆ. ಇಷ್ಟಕ್ಕೂ ಆ ಚಿತ್ರ ಊಹಿಸಿದಷ್ಟು ಭಯಾನಕ ಅಲ್ಲ ಎನ್ನುವುದು ಪವಿನ್ ಅಭಿಮತ.

ಪವಿನ್‌ಗೆ ಐದು ಲಕ್ಷ ರುಪಾಯಿ ಸಿಗುತ್ತಾ?
ಚಿತ್ರದ ಷರತ್ತುಗಳನ್ನೊಮ್ಮೆ ಗಮನಿಸಿದರೆ, 57333 ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸಿದವರಲ್ಲಿ ಐದು ಮಂದಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿತ್ತು. ನಂತರ ಈ ಐದು ಮಂದಿಯನ್ನು ಮುಂಬೈಗೆ ಕರೆಸಿಕೊಂಡು ಅವರ ಧೈರ್ಯವನ್ನು ಪರೀಕ್ಷಿಸಲಾಗುತ್ತದೆ. ಚಿತ್ರವನ್ನು ಆರಂಭದಿಂದ ಅಂತ್ಯದವರೆಗೂ ಮಧ್ಯಂತರದ ತಡೆಯಿಲ್ಲದೆ ವೀಕ್ಷಿಸಬೇಕು. ಮೊಬೈಲ್ ಫೋನನ್ನು ಅನುಮತಿಸುವುದಿಲ್ಲ. ಸ್ಪರ್ಧಿಯನ್ನು ಗಮನಿಸಲು ಚಿತ್ರಮಂದಿರ ಒಳಗೆ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಚಿತ್ರ ವೀಕ್ಷಿಸುವುದಕ್ಕೂ ಮುನ್ನ ಸ್ಪರ್ಧಿಗೆ ವೈದ್ಯಕೀಯ ಪರೀಕ್ಷೆ ಮಾಡಲಾಗುತ್ತದೆ. ನಷ್ಟ ಪರಿಹಾರ ಕೊಡುವುದಾಗಿ ಜಾಮೀನು ಪತ್ರ ಬರೆದುಕೊಡಬೇಕು ಎಂಬ ಕಟ್ಟುಪಾಡುಗಳನ್ನು ವಿಧಿಸಿದ್ದರು.

ಈ ಮೇಲಿನ ಷರತ್ತುಗಳನ್ನು ಗಮನಿಸಿದರೆ ಪವಿನ್ ಗೆ ಐದು ಲಕ್ಷ ರು.ಗಳ ಬಹುಮಾನ ಬರುವುದು ಅನುಮಾನಾಸ್ಪದವಾಗಿದೆ. ಏಕೆಂದರೆ ಈಗಾಗಲೇ ಆಯ್ಕೆಯಾದ ಐದು ಮಂದಿ ಪಟ್ಟಿಯಲ್ಲಿ ಪವಿನ್ ಹೆಸರು ಇದೆಯೋ ಇಲ್ಲವೋ ಗೊತ್ತಾಗಿಲ್ಲ. ಚಿತ್ರವನ್ನು ಮುಂಬೈನಲ್ಲಿ ಅಲ್ಲದೆ ಬೆಂಗಳೂರಿನಲ್ಲಿ ನೋಡಿದ್ದಾರೆ ಪವಿನ್. ಈ ಬಗ್ಗೆ ಫೂಂಕ್ ಚಿತ್ರದ ನಿರ್ಮಾಪಕರಾಗಲಿ, ಸ್ವ್ವತಃ ಪವೀನ್ ಆಗಲಿ ತಮಗೆ ಬಹುಮಾನ ಸಿಕ್ಕ ಬಗ್ಗೆ ದೃಢಪಡಿಸಿಲ್ಲ. ಸುದೀಪ್ ಮಾತ್ರ ಪವೀನ್ ಗೆ ಅಭಿನಂದನೆ ಸಲ್ಲಿಸಿ, ವರ್ಮಾರನ್ನು ಭೇಟಿ ಮಾಡಿಸುವುದಾಗಿ ಹೇಳಿದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಸುದೀಪ್ ಅಭಿನಯದ ಫೂಂಕ್ ಚಿತ್ರದ ಟ್ರೇಲರ್
ವರ್ಮಾರ ಹೊಸ ಬೇಟೆ ಅಮೃತಾ ಖಾನ್ವಿಲ್ಕರ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada