»   » ಗೋವಾದಲ್ಲಿ ತಾರಾ ಓ ತಾರಾ

ಗೋವಾದಲ್ಲಿ ತಾರಾ ಓ ತಾರಾ

Subscribe to Filmibeat Kannada
actress tara
ಗೋವಾದಲ್ಲಿ ನಡೆಯುತ್ತಿರುವ ಸಿನಿಮಾ ಹಬ್ಬದಲ್ಲಿ ಕನ್ನಡ ಚಿತ್ರರಂಗದ ಪ್ರತಿನಿಧಿಗಳು ಎಲ್ಲಿದ್ದಾರೆ ಎಂದು ಹುಡುಕುವ ಪರಿಸ್ಥಿತಿ. ಈ ಬರದ ನಡುವೆ ಚಿಲುಮೆಯ ಉತ್ಸಾಹದಲ್ಲಿ ನಟಿ ತಾರಾ ಓಡಾಡುತ್ತಿದ್ದಾರೆ.

ಅದೇನು ಉತ್ಸಾಹವೋ ಏನೋ, ಚಿತ್ರೋತ್ಸವದ ಉದ್ದಗಲಕ್ಕೂ ತಾರಾ ಓಡಾಡುತ್ತಿದ್ದಾರೆ. ಒಮ್ಮೆ ಥಿಯೇಟರ್‌ನಲ್ಲಿ ಕಾಣಿಸಿಕೊಂಡರೆ, ಮತ್ತೊಮ್ಮೆ ಸಂಕಿರಣವೊಂದರ ಪ್ರೇಕ್ಷಕರ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ.

ಇತರ ನಟಿಯರ ಧೋರಣೆಯಲ್ಲಿ ಯಾವುದೋ ಗತ್ತು ಕಾಣಿಸಿಕೊಂಡರೆ ತಾರಾ ವರ್ತನೆಯಲ್ಲಿ ಕಾಣಿಸುವುದು ಅಪ್ಪಟ ಸಿನಿಮಾ ಪ್ರೇಮ ಮಾತ್ರ. ಅಲ್ಲೆಲ್ಲೊ ಬಯಲಿನಲ್ಲಿನ ಕಲ್ಲಿನ ಮೇಲೆ ಕೂತು ಚಪಾತಿ ತಿನ್ನಲಿಕ್ಕೆ ತಾರಾ ಹಿಂಜರಿಯುವುದಿಲ್ಲ. ಯುವ ನಿರ್ದೇಶಕ ಹರ್ಷ ನಿರ್ದೇಶನದ 'ಬಿರುಗಾಳಿ" ಚಿತ್ರದಲ್ಲಿ ಅಭಿನಯಿಸುತ್ತಿರುವ ತಾರಾ, ಆ ಚಿತ್ರದ ಡಬ್ಬಿಂಗ್ ಮುಗಿದದ್ದೇ ತಡ ಗೋವಾಗೆ ಹಾರಿಬಂದಿದ್ದಾರೆ.

ಉತ್ಸವವೊಂದರಲ್ಲಿ ತಾರಾ ಉತ್ಸಾಹದಿಂದ ಓಡಾಡುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಸಾಹಿತ್ಯ ಸಮ್ಮೇಳನಗಳಲ್ಲೂ ಆಕೆ ಕಾಣಿಸಿಕೊಂಡಿದ್ದುಂಟು, ಆಸಕ್ತಿಯಿಂದ ಭಾಷಣಗಳನ್ನು ಕೇಳಿಸಿಕೊಂಡಿದ್ದುಂಟು. ಸಾಹಿತ್ಯ-ಸಂಸ್ಕೃತಿಯ ಬಗ್ಗೆ ಆಸಕ್ತಿ ಹೊಂದಿರುವ ಕಲಾವಿದರು ಅಪರೂಪವೇನಲ್ಲ. ಆದರೆ ತಾರಾ ವರ್ಚಸ್ಸು ಕಳಚಿಟ್ಟು ಸಾಮಾನ್ಯರಂತೆ ಉತ್ಸವಗಳಲ್ಲಿ ಭಾಗವಹಿಸುವವರು ಅಪರೂಪ. ಅಂಥ ಅಪರೂಪದ ಕಲಾವಿದೆ ತಾರಾ. ಇಂಥವರ ಮುಂದೆ 'ಆತಿಥ್ಯ ಸರಿಯಿಲ್ಲ" ಎಂದು ಮುನಿಸಿಕೊಳ್ಳುವ ಹಿರಿಯ ಕಲಾವಿದರೂ ಇರುತ್ತಾರೆ ಎನ್ನುವುದನ್ನು ಗಮನಿಸಬೇಕು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada