»   » ಓಂ ಚಿತ್ರದ ನೆರಳಲ್ಲಿ ಪುನೀತ್ ಹೊಸ ಚಿತ್ರ ವಂಶಿ

ಓಂ ಚಿತ್ರದ ನೆರಳಲ್ಲಿ ಪುನೀತ್ ಹೊಸ ಚಿತ್ರ ವಂಶಿ

Posted By:
Subscribe to Filmibeat Kannada

ಇದೇ ಮೊದಲ ಬಾರಿಗೆ ಡಾ.ರಾಜ್‌ಕುಮಾರ್ ಮತ್ತವರ ಸಹೋದರ ವರದಪ್ಪನವರ ಅನುಪಸ್ಥಿತಿಯಲ್ಲಿ ವಜ್ರೇಶ್ವರಿ ಕಂಬೈನ್ಸ್ ಹೊಸ ಚಿತ್ರ ಸೆಟ್ಟೇರಿದೆ. ಸದಾಶಿವನಗರದ ರಾಜ್‌ಕುಮಾರ್ ಅವರ ನಿವಾಸದಲ್ಲಿ ಏನೋ ಕಲರವ. ಹೊಸ ಉತ್ಸಾಹ, ಕನಸು. ಈ ಕನಸಿಗೆ ಕನಸುಗಾರ ರವಿಚಂದ್ರನ್ ಕ್ಲಾಪ್ ಮಾಡುವ ಮೂಲಕ ಮಾ.24ರಂದು 'ವಂಶಿ' ಚಿತ್ರ ಸೆಟ್ಟೇರಿತು.

1995ರಲ್ಲಿ ಕನ್ನಡ ಚಿತ್ರಜಗತ್ತಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ,ಭೂಗತ ಜಗತ್ತಿನ ಕಥಾ ಹಂದರದ 'ಓಂ' ಚಿತ್ರ ರೂಪಗೊಂಡಿದ್ದು ಸದಾಶಿವನಗರದ ರಾಜ್‌ ಮನೆಯಲ್ಲಿ.ಈಗ "ವಂಶಿ" ಈ ಮನೆಯಲ್ಲಿ ಕಣ್ಣುಬಿಡುತ್ತಿದೆ. 9 ಚಿತ್ರಗಳ ಶತಕವೀರ ಪುನೀತ್ ಹೊಸ ಮಿಂಚಾಗಿ ಬರಲಿದ್ದಾರೆ. ಇದೊಂದು ಭೂಗತ ಜಗತ್ತಿನ ಕಥೆ. ಚಿತ್ರಕಥೆ ಹಾಗೂ ನಿರೂಪಣೆಯಲ್ಲಿ ಹೊಸತವಿದೆ. 'ವಂಶಿ' ಪುನೀತ್‌ರ 11ನೇ ಚಿತ್ರ.

ಸಕುಂಟುಂಬ ಸಪರಿವಾರ ಸಮೇತ ಬಂದು ಚಿತ್ರ ನೋಡಬಹುದು. ಭೂಗತ ಜಗತ್ತಿನ ಕಥೆ ಎಂದು ಹಿಂಜರಿಯಬೇಕಾಗಿಲ್ಲ. ವಂಶಿ ರೌಡಿಯ ನೆರಳುಳ್ಳ ಚಿತ್ರ. ಸಹಜ ಎನ್ನುವಷ್ಟು ಡಿಶುಂ ಡಿಶುಂಗೆ ಒತ್ತು ನೀಡಲಾಗಿದೆ. ಚಿತ್ರದಲ್ಲಿ ಯಾವುದೂ ಅತಿಯಾಗಿಲ್ಲ. ಎಲ್ಲಾ ಹಿತಮಿತ ಎನ್ನುತ್ತಾರೆ ವಂಶಿಯ ನಾಯಕ ಪುನೀತ್.

ಒಂದು ಕಡೆ ಮಾತೃಪ್ರೇಮ, ಮತ್ತೊಂದು ಕಡೆ ಪ್ರಿಯತಮೆ. ಇದು ವಂಶಿಯ ಮತ್ತೊಂದು ಮಗ್ಗುಲು. ಹಾಗಾಗಿ ಈ ಚಿತ್ರವನ್ನು ತುಂಬು ಜಾಗರೂಕತೆಯಿಂದ ತೆರೆಗೆ ತರುತ್ತಿದ್ದೇವೆ. ಚಿತ್ರದಲ್ಲಿನ ಇತರೆ ಕಥಾವಸ್ತುವಿಗಿಂತ ತಾಯಿ, ಮಗನ ನಡುವಿನ ವಾತ್ಸಲ್ಯ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಇದು ನನಗೂ ಮತ್ತು ಪುನೀತ್‌ಗೆ ಹೊಸ ವಸ್ತು. ಇದುವರೆಗೂ ಬಂದ ತಾಯಿ-ಮಗನ ಚಿತ್ರಗಳ ನೆರಳು 'ವಂಶಿ'ಯಲ್ಲಿ ಹುಡುಕಿದರೂ ಸಿಗುವುದಿಲ್ಲ. ನಟನೆಗೆ, ಹಾಸ್ಯಕ್ಕೆ ಕೊರತೆ ಇಲ್ಲದ ಚಿತ್ರ ಎನ್ನುತ್ತಾರೆ ನಿರ್ದೇಶಕ ಪ್ರಕಾಶ್.

ತಾಯಿ, ಅಣ್ಣ, ತಂಗಿ ಕಥಾವಸ್ತುವುಳ್ಳ ಚಿತ್ರಗಳು ಬಹಳಷ್ಟು ಬಂದಿವೆ. ಹೇಗೆ ಆ ಪಾತ್ರಗಳನ್ನು ವಿಭಿನ್ನವಾಗಿ ತೋರಿಸಬಹುದು ಎನ್ನುವುದಕ್ಕೆ ನಮ್ಮ 'ವಂಶಿ'ಯೇ ಸಾಕ್ಷಿ. 'ಗಾಳಿಗೋಪುರ' ಮತ್ತು 'ಬಂಗಾರದ ಪಂಜರ'ದಲ್ಲಿ ಡಾ.ರಾಜ್ ತಾಯಿ ಹೃದಯದ ಪಾತ್ರಗಳನ್ನು ಪೋಷಿಸಿದ್ದರು. 'ವಂಶಿ'ಯಲ್ಲೂ ಆ ನೆರಳು ಕಾಣಿಸುತ್ತದೆ ಎಂದರು ವಂಶಿ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್. ಮೈಸೂರು ಮತ್ತು ಬೆಂಗಳೂರಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ. ವಂಶಿಯ ನಾಯಕಿಗಾಗಿ ಶೋಧ ನಡೆಯುತ್ತಿದೆ. ಹೊಸ ಮುಖದ ಅನ್ವೇಷಣೆಯಲ್ಲಿದ್ದೇವೆ ಎನ್ನುತ್ತಾರೆ ನಿರ್ದೇಶಕ ಪ್ರಕಾಶ್. ಕೆಕೆ ಎಂದೇ ಹೆಸರಾದ ಕೃಷ್ಣಕುಮಾರ್ ಕ್ಯಾಮೆರಾ ಹಿಂದಿರುತ್ತಾರೆ. ಈ ಚಿತ್ರಕ್ಕ್ಕೆ ಸಂಗೀತ ಮನೋಮೂರ್ತಿ. ಏಪ್ರಿಲ್ 25ರಿಂದ ಚಿತ್ರೀಕರಣ ಶುರುವಾಗಲಿದೆ. ತಾಯಿ ಪಾತ್ರದಲ್ಲಿ ಲಕ್ಷ್ಮಿ ಹೃದಯ ತಟ್ಟಲಿದ್ದಾರೆ.

ವಂಶಿ ಚಿತ್ರದ ಮುಹೂರ್ತದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ(ಕೆ‌ಎಫ್‌ಸಿಸಿ) ಅಧ್ಯಕ್ಷ ತಲ್ಲಂ ನಂಜುಂಡಶೆಟ್ಟಿ, ಮಾಜಿ ಕೆ‌ಎಫ್‌ಸಿಸಿ ಅಧ್ಯಕ್ಷ ಎಚ್.ಡಿ.ಗಂಗರಾಜು, ಕೆ‌ಎಫ್‌ಸಿಸಿ ಉಪಾಧ್ಯಕ್ಷ ಸಾ.ರಾ.ಗೋವಿಂದು, ನಿರ್ದೇಶಕರಾದ ಎಸ್.ನಾರಾಯಣ್, ನಾಗಣ್ಣ, ಪ್ರೇಮ್, ಶಿವಮಣಿ, ಪಿ.ಸತ್ಯಾ, ನಿರ್ಮಾಪಕರಾದ ರಮೇಶ್ ಬಾಬು, ಸೂರಪ್ಪ ಬಾಬು, ಗುರುದತ್ ಮುಂತಾದವರು ಉಪಸ್ಥಿತರಿದ್ದರು.

(ದಟ್ಸ್‌ಕನ್ನಡ ವಾರ್ತೆ)

ಪುನೀತ್ ಅಭಿನಯದ 'ವಂಶಿ' ಮುಹೂರ್ತದ ಗ್ಯಾಲರಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada