»   » 'ಸರಿಗಮಪ' ಲಿಟ್ಲ್ ಚಾಂಪ್ಸ್ ಟಾಪ್4 ಜುಗಲ್‌ಬಂದಿ

'ಸರಿಗಮಪ' ಲಿಟ್ಲ್ ಚಾಂಪ್ಸ್ ಟಾಪ್4 ಜುಗಲ್‌ಬಂದಿ

Posted By:
Subscribe to Filmibeat Kannada

ಜೀ ಕನ್ನಡ ವಾಹಿನಿಯ ಯಶಸ್ವಿ ಸಂಗೀತ ಕಾರ್ಯಕ್ರಮ'ಸರಿಗಮಪ' ಲಿಟ್ಲ್ ಚಾಂಪ್ಸ್ ಸೆಮಿಫೈನಲ್ ಹಂತ ತಲುಪಿದೆ.ಕನ್ನಡ ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಜೀ ಸರಿಗಮಪ ಪ್ರಾರಂಭವಾದಾಗ ಮೊದಲು ಯುವ ಗಾಯಕರಿಗೆ ಸ್ಪರ್ಧೆ ಏರ್ಪಡಿಸಿತ್ತು. ನಂತರ ಕರ್ನಾಟಕದ ವಿವಾಹಿತ ಗಾಯಕಿಯರಿಗೆ ವೇದಿಕೆಯನ್ನು ಒದಗಿಸಿಕೊಟ್ಟು ಉತ್ತಮ ಗಾಯಕರನ್ನು ಕರ್ನಾಟಕಕ್ಕೆ ಪರಿಚಯಿಸಿತ್ತು. ಈಗ ಕರ್ನಾಟಕದ ಪುಟಾಣಿ ಪ್ರತಿಭೆಗಳಿಗೆ ವೇದಿಕೆ ಒದಗಿಸಿಕೊಟ್ಟಿದೆ.

ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ರಿಂದ 10 ಗಂಟೆಯವರೆಗೆ ಪ್ರಸಾರವಾಗುವ ಸಂಗೀತ ಸ್ಪರ್ಧೆಯ ನಿರೂಪಣೆಯನ್ನು ಗಾಯಕಿ ಎಂ.ಡಿ. ಪಲ್ಲವಿ ಅರುಣ್ ಅವರು ಮಾಡುತ್ತಿದ್ದಾರೆ. ಖಾಯಂ ತೀರ್ಪುಗಾರರಾಗಿ ಗಾಯಕ ರಾಜೇಶ್ ಕೃಷ್ಣನ್ ಹಾಗೂ ಅತಿಥಿ ತೀರ್ಪುಗಾರರಾಗಿ ಚಿತ್ರರಂಗ ಹಾಗೂ ಸಂಗೀತಲೋಕದ ಗಣ್ಯರನ್ನು ಕಾರ್ಯಕ್ರಮಕ್ಕೆ ಕರೆತರಲಾಗುತ್ತದೆ. ಪುಟಾಣಿ ಪ್ರತಿಭೆಗಳ ಸಂಗೀತ ಸುಧೆಯ ಸರಿಗಮಪ ಲಿಟ್ಲ್ ಚಾಂಪ್ಸ್ ಕಾರ್ಯಕ್ರಮಕ್ಕೆ ಕರ್ನಾಟಕದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ಪುಟ್ಟ ಗಾಯಕರು ಕಿರುತೆರೆಯಲ್ಲಿ ತಮ್ಮ ಅದ್ಭುತ ಗಾಯನದಿಂದ ಕರ್ನಾಟಕದ ಜನತೆಯನ್ನು ಮಂತ್ರ ಮುಗ್ಧಗೊಳಿಸಿದ್ದಾರೆ. ಸೆಮಿಫೈನಲ್ ಹಂತಕ್ಕೆ ತಲುಪಿರುವ ಓಹಿಲೇಶ್ವರಿ, ಅಜಯ್, ಸಹನಾ ಮತ್ತು ಆದರ್ಶ ಇವರಲ್ಲಿ ಯಾರು ವಿಜೇತರಾಗುತ್ತಾರೆ ? ಎಂಬುದು ಎಲ್ಲರ ಕುತೂಹಲವಾಗಿದೆ.

ಕರ್ನಾಟಕದಾದ್ಯಂತದಿಂದ ಆಯ್ಕೆಗೊಂಡ 1220 ಪುಟಾಣಿ ಪ್ರತಿಭೆಗಳಲ್ಲಿ 64 ಪುಟಾಣಿಗಳನ್ನು ಮೊದಲ ಹಂತದಲ್ಲಿ ರಾಜು ಅನಂತಸ್ವಾಮಿ ಮತ್ತು ಸುಮಾ ಶಾಸ್ತ್ರಿ ಅವರು ಆಯ್ಕೆ ಮಾಡಿದರು. ಮುಂದಿನ ಹಂತದಲ್ಲಿ ಗಾಯಕಿ ಬಿ.ಜಯಶ್ರೀ ಮತ್ತು ಹೇಮಂತಕುಮಾರ್ ಅವರು ಇವರಲ್ಲಿ 9 ಹುಡುಗ ಹಾಗೂ 9 ಹುಡುಗಿಯರನ್ನು ಆಯ್ಕೆ ಮಾಡಿದ್ದರು.

ಆಯ್ಕೆಗೊಂಡ ಪ್ರತಿ ಪುಟಾಣಿಯೂ ಅದ್ಭುತ ಪ್ರತಿಭೆಯ ತುಣುಕು. ಸಂಗೀತ ಲೀಲಾಜಾಲವಾಗಿ ಅವರ ಕಂಠದಿಂದ ಹೊರ ಹೊಮ್ಮುತ್ತಿದ್ದರೆ ಎಲ್ಲರೂ ಮಂತ್ರ ಮುಗ್ಧ. ಈಗ ಪ್ರಚಂಡ ಪುಟಾಣಿಗಳ ಸರಿಗಮಪ ಲಿಟ್ಲ್ ಚಾಂಪ್ಸ್ ಸೆಮಿಫೈನಲ್ ಹಂತಕ್ಕೆ ಬಂದು ತಲುಪಿದೆ.

ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಸ್ಪರ್ಧೆಗೆ ಮರು ಪ್ರವೇಶ ಪಡೆದ ಇಬ್ಬರು ಪ್ರತಿಭೆಗಳಾದ ಹಿರಣ್ಮಯಿ ಮತ್ತು ಸಿದ್ದಾರ್ಥ ಸ್ಪರ್ಧೆಯಿಂದ ಮತ್ತೆ ಹೊರನಡೆದಿದ್ದಾರೆ. ಅಂತಿಮ ಸ್ಪರ್ಧೆಯಲ್ಲಿ ಓಹಿಲೇಶ್ವರಿ, ಅಜಯ್, ಸಹನಾ ಮತ್ತು ಆದರ್ಶ ಇದ್ದಾರೆ. ಪ್ರತಿಯೊಬ್ಬರೂ ಕೂಡ ಉತ್ತಮ ಪ್ರತಿಭೆಯ ಅದ್ಭುತ ಗಾಯಕರಾಗಿದ್ದಾರೆ. ಫೈನಲ್‌ಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಮಾರ್ಚ್ 29 ಮತ್ತು 30ರ ಸಂಚಿಕೆಯಲ್ಲಿ ನಾಲ್ಕೂ ಪುಟ್ಟ ಪ್ರತಿಭೆಗಳ ಗಾನದ ಸವಿಯನ್ನು ವೀಕ್ಷಕರು ಸವಿಯಬಹುದಾಗಿದೆ.
(ದಟ್ಸ್ ಕನ್ನಡವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada