»   » ಕನ್ನಡದಲ್ಲಿ ಆಲ್ಬಂ ತರಲು ಸೋನು ಉತ್ಸಾಹ

ಕನ್ನಡದಲ್ಲಿ ಆಲ್ಬಂ ತರಲು ಸೋನು ಉತ್ಸಾಹ

Subscribe to Filmibeat Kannada


ಬೆಂಗಳೂರು, ಜ.26: ಗಾಯಕ ಸೋನು ನಿಗಮ್ ಸಂಗೀತ ಧ್ವನಿ ಸುರುಳಿಯ ಸಂಗ್ರಹ(ಆಲ್ಬಂ) ಒಂದನ್ನು ಕನ್ನಡದಲ್ಲಿ ತರುವುದಾಗಿ ತಿಳಿಸಿದ್ದಾರೆ. ಈಗಾಗಲೇ ಅವರ ಕಂಠಸಿರಿಯ ಹಿಂದಿ ಪಾಪ್ ಗೀತೆಗಳು ಕೇಳುಗರ ಮನಸೂರೆಗೊಂಡಿದ್ದವು. ಈಗ ಕನ್ನಡದ ಶ್ರೋತೃಗಳಿಗೆ ಅದೇ ಉಲ್ಲಾಸ ತರಲಿದ್ದಾರೆ. ಶೀಘ್ರದಲ್ಲೇ ಅದರ ವಿವರಗಳನ್ನು ತಿಳಿಸುವುದಾಗಿ ಅವರು ಹೇಳಿದ್ದಾರೆ.

ಅದೇ ಭೂಮಿ ಅದೇ ಭಾನು, ನೀ ಶೀತಲ ನೀ ಕೋಮಲ, ಓ ಗುಣವಂತ, ಏನೋ ಒಂಥರಾ, ಅನಿಸುತಿದೆ ಯಕೋ ಇಂದು, ಮುಂಗಾರು ಮಳೆಯೆ ಏನು ನಿನ್ನಯ ಲೀಲೆ...ಮುಂತಾದ ಇತ್ತೀಚಿನ ಹಾಡುಗಳು ಕೇಳುಗರ ಮನ ತಣಿಸಿದ್ದವು. ಈಗ ಅವರ ಕಂಠಸಿರಿಯಲ್ಲಿ ಹೊರ ಬರುವ ಆಲ್ಬಂ ಹೇಗಿರುತ್ತದೋ ಏನೋ ಎಂದು ಅಭಿಮಾನಿಗಳಲ್ಲಿ ಸಹಜವಾಗಿಯೇ ಕುತೂಹಲ ಉಂಟಾಗಿದೆ.

ಗೆಳೆಯ, ಮುಂಗಾರು ಮಳೆ, ಗಾಳಿಪಟ, ಈ ಬಂಧನ...ಚಿತ್ರಗಳಲ್ಲಿ ಅವರು ಹಾಡಿದ ಹಾಡುಗಳು ಸಾಕಷ್ಟು ಜನಪ್ರಿಯತೆ ಗಳಿಸಿದ್ದವು. ಈಗವರು ಕನ್ನಡದ ಮನೆಮಾತಾಗಿ ಹೋಗಿದ್ದಾರೆ. ತಮಿಳು, ತೆಲುಗು, ಪಂಜಾಬಿ, ಮರಾಠಿ, ಬೆಂಗಾಲಿ, ಹಿಂದಿ ಭಾಷೆಗಳಲ್ಲಿ ಸಹಾ ಅವರು ಹಾಡಿದ ಹಾಡುಗಳು ಜನಪ್ರಿಯವಾಗಿವೆ.

ಮುಂಗಾರು ಮಳೆಯ ಅನಿಸುತಿದೆ ಯಾಕೋ ಇಂದು... ಹಾಡಂತೂ ಮೊಬೈಲ್‌ಗಳಲ್ಲಿ, ದೂರದರ್ಶನ, ಆಕಾಶವಾಣಿ, ಬಸ್ಸು, ಅಂಗಡಿ, ಆಟೋ, ಜಾತ್ರೆ, ಉತ್ಸವಗಳಲ್ಲಿ...ಎಲ್ಲೆಲ್ಲಿ ನೋಡಿದರೂ ಅದೇ ಹಾಡು. ಈಗ ಬರಲಿರುವ ಅವರ ಕನ್ನಡದ ಆಲ್ಬಂ ಅದೇ ರೀತಿ ಮೋಡಿ ಮಾಡಲಿದೆಯೆ ಎಂಬುದನ್ನು ಕಾದು ನೋಡಬೇಕಾಗಿದೆ.

(ದಟ್ಸ್‌ಸಿನಿ ವಾರ್ತೆ)

Please Wait while comments are loading...