twitter
    For Quick Alerts
    ALLOW NOTIFICATIONS  
    For Daily Alerts

    ಯಾವ ಸಿನಿಮಾದಲ್ಲೂ ಗ್ಲಿಸರಿನ್‌ ಬಳಸಲೇ ಇಲ್ಲ !

    By Super
    |

    ಕಾಲಕ್ರಮೇಣ ಸಿನಿಮಾ ಕಲೆಯಲ್ಲೂ ಕೆಲ ಬದಲಾವಣೆಗಳಾಗಿವೆ. ಮೊದಲು ಪಾತ್ರಗಳಲ್ಲಿ ತನ್ಮಯಗೊಳ್ಳುವ ಪರಿಪಾಠ ಇರುತ್ತಿತ್ತು. ಹಾಗಾಗಿ ಅಳುವ ದೃಶ್ಯಗಳಿಗೆ ಗ್ಲಿಸರಿನ್‌ ಬಳಸುವ ಪ್ರಮೇಯವೇ ಬರುತ್ತಿರಲಿಲ್ಲ. ಆದರೆ, ಗ್ಲಿಸರಿನ್‌ ಇಲ್ಲದೆ ಅಳುವುದು ಕಷ್ಟ ಎಂಬುದು ಈಗಿನವರ ಮಾತು...! ಈ ಕುರಿತು ಹಿರಿಯ ನಟ ಶ್ರೀನಿವಾಸಮೂರ್ತಿ ಮಾತು ಕೇಳೋಣ ಬನ್ನಿ...

  • ಮಣಿಕಾಂತ
  • 'ಚಿತ್ರರಂಗದಲ್ಲಿ ಎಲ್ಲರೂ ಅಷ್ಟೆ. ದುಃಖಪೂರಿತ ಸನ್ನಿವೇಶಗಳಲ್ಲಿ ಗ್ಲಿಸರಿನ್‌ ಹಾಕ್ಕೊಂಡು ಅಳ್ತಾರೆ. ಸಿನಿಮಾದವರ ನಗು ಮಾತ್ರವಲ್ಲ, ಅಳುವೂ ನಾಕಟದ್ದೇ..." ಇಂಥ ಮಾತು ಬಹುಮಂದಿಯಿಂದ ಆಗಿಂದಾಗ್ಗೆ ಕೇಳಿ ಬರುತ್ತಲೇ ಇರ್ತವೆ. ಆದರೆ ಬೇರೆಯವರು ಹೇಗಾದರೂ ಆಗಿರಲಿ, ನಾನಂತೂ ಈವರೆಗಿನ ನನ್ನ ಚಿತ್ರ ಜೀವನದಲ್ಲಿ ಶೇ. 99, 999 ಸಂದರ್ಭಗಳಲ್ಲಿ 'ಗ್ಲಿಸರಿನ್‌ ಇಲ್ಲದೇ ಅತ್ತ ಕ್ಷಣ"ದ ಬಗ್ಗೆ ವಿವರಿಸ್ತೀರಾ ಸರ್‌ ಅಂದಾಗ ಹಿರಿಯ ನಟ ಶ್ರೀನಿವಾಸಮೂರ್ತಿ ಅವರು ಪ್ರಕ್ರಿಯಿಸಿದ್ದು ಹೀಗೆ...

    ಮುಂದುವರಿದು ಮೂರ್ತಿ ಹೇಳಿದರು: ನಾನು ಮಾತ್ರವೇ ಅಲ್ಲ, ವರನಟ ರಾಜ್‌ಕುಮಾರ್‌, ಕೆ.ಎಸ್‌.ಅಶ್ವತ್ಥ್‌, ಲೀಲಾವತಿ, ಪಂಢರಿಬಾಯಿ ಇವರ್ಯಾರೂ ಯಾವ ಸಿನಿಮಾಕ್ಕೂ, ಯಾವ ಸಂದರ್ಭದಲ್ಲೂ ಗ್ಲಿಸರಿನ್‌ ಹಾಕಿಕೊಂಡವರೇ ಅಲ್ಲ. ಬಣ್ಣ ಹಚ್ಚಿಸಿಕೊಂಡ ನಂತರ ಇವರೆಲ್ಲ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿರುತ್ತಿದ್ದರು. ಹೀಗಾಗಿ, ನಗು, ರೋಷ ಮತ್ತು ದುಃಖ ಆಯಾ ಸಂದರ್ಭದ ವಿವರ ಕೇಳ್ತಾ ಇದ್ದಂತೆಯೇ ತಂತಾನೇ ಬಂದು ಬಿಡ್ತಿತ್ತು..."

    ಇದಕ್ಕೆ ಒಂದು ಉದಾಹರಣೆ ಕೊಡ್ತೀನಿ. ಕವಿರತ್ನ ಕಾಳಿದಾಸ ಸಿನಿಮಾ ನೋಡಿದ್ದೀರಲ್ಲ- ಅವರಲ್ಲಿ ಡಾ.ರಾಜ್‌ ಕಾಳಿದಾಸನ ಪಾತ್ರದಲ್ಲಿದ್ದಾರೆ. ನಾನು ಭೋಜರಾಜನ ಪಾತ್ರ ಮಾಡಿದ್ದೀನಿ. ಕಾಳಿದಾಸ ಮತ್ತು ಭೋಜರಾಜ ಒಂದೇ ಜೀವ, ಎರಡು ದೇಹ ಅನ್ನುವ ಹಾಗಿರ್ತಾರೆ. ಹೀಗಿರುವಾಗ- ಅದೊಮ್ಮೆ ವೇಶ್ಯಯಾಬ್ಬಳು ಕಾಳಿದಾಸನಿಗೆ ವಿಷ ಕುಡಿಸುತ್ತಾಳೆ. ಸುದ್ದಿ ತಿಳಿದ ತಕ್ಷಣ ಕಾಳಿದಾಸನ ದೇಹವನ್ನು ಕಾಳಿಕಾದೇವಿಯ ಗುಡಿಗೆ ತರಿಸುವ ಭೋಜರಾಜ, ದೇವಿಯನ್ನು ಪ್ರಾರ್ಥಿಸಿ, ಬದುಕಿಸಿಕೊಳ್ಳುತ್ತಾನೆ. ಕಾಳಿದಾಸ ಎಚ್ಚರವಾಗುವ ಮೊದಲೇ- ಆತನಿಂದ ಚರಮಗೀತೆ ಹಾಡಿಸಬೇಕು. ನಾನು ಸತ್ತಾಗ ಆತ ಹೇಗೆ ದುಃಖಿಸುತ್ತಾನೋ ನೋಡಬೇಕು. ಆತ ಎದ್ದ ತಕ್ಷಣ 'ಪ್ರಭುಗಳು ನಿಧನರಾದರು" ಎಂದು ಸುಳ್ಳು ಹೇಳಿ ಅನ್ನುತ್ತಾನೆ. ತಾನು ಕಂಬದ ಮರೆಯಲ್ಲಿ ಅಡಗಿ ನಿಲ್ಲುತ್ತಾನೆ.

    ಎಚ್ಚರವಾಗಿ ಮೇಲೆದ್ದ ಕಾಳಿದಾಸನಿಗೆ ಪರಿವಾರದವರು 'ರಾಜ ಹೇಳಿದ್ದಂತೆಯೇ" ಹೇಳುತ್ತಾರೆ. ಇದನ್ನೇ ನಿಜವೆಂದು ನಂಬಿದ ಕಾಳಿದಾಸ, ಗೆಳೆಯ-ಧಣಿ ಭೋಜರಾಜನನ್ನು ನೆನೆದು ಚರಮಗೀತೆ ಹಾಡುತ್ತಾನೆ. ಅದನ್ನು ಮರೆಯಲ್ಲಿ ನಿಂತು ಕೇಳುತ್ತಿದ್ದ ರಾಜ, ಕುಸಿದು ಪ್ರಾಣ ಬಿಡುತ್ತಾನೆ. ನಿಜ ಏನೆಂದು ತಿಳಿದ ಕಾಳಿದಾಸ ಚರಮಗೀತೆಯನ್ನೇ ಬದಲಿಸಿ- ಹೇಗಿದ್ದ ಭೋಜರಾಜ ಹೇಗಾಗಿ ಬಿಟ್ಟ ಎಂದು ಕಾಳಿಕಾ ದೇವಿಯ ಎದುರು ಅಳುತ್ತಾ ಹಾಡುತ್ತಾನೆ" ನಂತರ ಭೋಜರಾಜನಿಗೆ ಮರಳಿ ಜೀವ ಬರುತ್ತದೆ...

    ಕವಿರತ್ನ ಕಾಳಿದಾಸ ಸಿನಿಮಾ ನೋಡಿರುವವರಿಗೆ ಇದೆಲ್ಲ ಚೆನ್ನಾಗಿ ನೆನಪಿರುತ್ತದೆ. ಈ ಸನ್ನಿವೇಶ ಕೇಳುತ್ತಿದ್ದಂತೆಯೇ ಅಳು ಬರುತ್ತಿತ್ತು. ಉಹುಂ, ಗ್ಲಿಸರಿನ್‌ ಹಾಕಬೇಕಾದ ಪ್ರಮೇಯ ಬರಲೇ ಇಲ್ಲ, ಇದು ಒಂದು ಉದಾಹರಣೆ ಅಷ್ಟೆ. ಬಹುಪಾಲು ಎಲ್ಲ ಸಿನಿಮಾಗಳಲ್ಲೂ ನಾನು ಪಾತ್ರದಲ್ಲಿ ಲೀನವಾಗಿ ಬಿಟ್ಟಿರ್ತೀನಿ. ಹಾಗಾಗಿ ಗ್ಲಿಸರಿನ್‌ ಹಾಕಬೇಕಾದ ಪ್ರಮೇಯವೇ ಈವರೆಗೂ ಬಂದಿಲ್ಲ...

    ಉಳಿದಂತೆ ನಿಜ ಬದುಕಿನ ವಿಷಯಕ್ಕೆ ಬಂದರೆ ಅನಿರೀಕ್ಷಿತವಾಗಿ ಕೈ ಹಿಡಿವ ನೋವು, ಮಕ್ಕಳ ಗೆಲುವುಗಳೆಲ್ಲ ಕಂಬನಿ ಹಾಕಿಸಿವೆ. ಆ ಮಟ್ಟಿಗೆ ನನಗೆ ರೀಲು ಮತ್ತು ರಿಯಲ್‌ ಲೈಫ್‌ ನಡುವೆ ವ್ಯತ್ಯಾಸವೇನೂ ಕಾಣುತ್ತಿಲ್ಲ ಎನ್ನುತ್ತ ಮಾತು ಮುಗಿಸಿದರು ಶ್ರೀನಿವಾಸಮೂರ್ತಿ.

    English summary
    Crying in Cinema : Without glycerin it is too difficult...!?
    Tuesday, July 2, 2013, 14:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X