»   » ನಾಗತಿಹಳ್ಳಿಯಿಂದ ‘ಅಮೃತಧಾರೆ’

ನಾಗತಿಹಳ್ಳಿಯಿಂದ ‘ಅಮೃತಧಾರೆ’

Subscribe to Filmibeat Kannada
  • ಸಿನಿಡೆಸ್ಕ್‌, ದಟ್ಸ್‌ಕನ್ನಡ
ಕಿರುತೆರೆಯಲ್ಲಿ ಕಳೆದು ಹೋಗಿದ್ದ ನಾಗತಿಹಳ್ಳಿ ಚಂದ್ರಶೇಖರ್‌ ಈಗ ಮತ್ತೆ ಬೆಳ್ಳಿತೆರೆಗೆ ಬಂದಿದ್ದಾರೆ. ‘ಅಮೃತಧಾರೆ’ ಚಿತ್ರದ ಮೂಲಕ ಅವರು ನಿರ್ದೇಶಕರಾಗಿ ಮಾತ್ರವಲ್ಲ ನಿರ್ಮಾಪಕರಾಗಿ ಗಾಂಧಿನಗರಕ್ಕೆ ಕಾಲಿಟ್ಟಿದ್ದಾರೆ.

ಪಾಲುದಾರಿಕೆಯಲ್ಲಿ ಚಿತ್ರ ನಿರ್ಮಾಣದ ಅನುಭವ ಹೊಂದಿರುವ ನಾಗತಿಹಳ್ಳಿ ಈಗ ಪೂರ್ಣ ಪ್ರಮಾಣದ ನಿರ್ಮಾಪಕರಾಗುತ್ತಿದ್ದಾರೆ. ‘ಪ್ಯಾರೀಸ್‌ ಪ್ರಣಯ ’ಚಿತ್ರದ ಸೋಲಿನಿಂದ ಕಂಗೆಟ್ಟು, ಕಳೆದ ಎರಡು ವರ್ಷಗಳಿಂದ ಅವರು ಚಿತ್ರರಂಗದಿಂದ ದೂರವುಳಿದಿದ್ದರು. ಇತ್ತ ಕಿರುತೆರೆಯಲ್ಲಿ ‘ವಠಾರ ’ ಸಾವಿರ ಕಂತುಗಳ ದಾಖಲೆ ಬರೆದಿದ್ದರೆ, ‘ಬೆಳ್ಳಿಚುಕ್ಕಿ’ ಮಿಂಚಿರಲಿಲ್ಲ. ಈ ಎಲ್ಲದರ ನಡುವೆ ಪ್ರೀತಿಯ ಹೊಳೆ ಹರಿಸುವ ‘ಅಮೃತಧಾರೆ’ ತಯಾರಾಗುತ್ತಿದೆ.

ಪ್ಯಾರೀಸ್‌ ಪ್ರಣಯ ಕಲಿಸಿದ ಪಾಠದಿಂದಾಗಿ ‘ಅಮೃತಧಾರೆ’ ಯಲ್ಲಿ ಪರಿಚಿತ ಮುಖಗಳನ್ನೇ ನಾಗತಿಹಳ್ಳಿ ನೆಚ್ಚಿಕೊಂಡಿದ್ದಾರೆ. ವಾಕಿಂಗ್‌ ಗೆಳೆಯ ರಮೇಶ್‌ ಹೇಳಿದ ನೈಜ ಘಟನೆಯನ್ನು ಹಿಡಿದು ನಾಗತಿಹಳ್ಳಿ ಚೆಂದದ ಕತೆ ಹೊಸೆದಿದ್ದಾರೆ. ಇದು ಎಳೆಯ ದಂಪತಿಗಳ ಏಳು-ಬೀಳಿನ ಕಥೆ. ಹೀಗಾಗಿ ಇಲ್ಲಿ ಸಂಬಂಧ-ಭಾವನೆಗಳನ್ನು ಹರಿಬಿಡಲು ನಾಗತಿಗೆ ಒಳ್ಳೆಯ ಅವಕಾಶ ಸಿಕ್ಕಿದೆ.

ಮನೆ ಬಿಟ್ಟು ಪುಟ್ಟ ಗೂಡನ್ನು ಕಟ್ಟುವ ಯುವ ಜೋಡಿಯ ದಾಂಪತ್ಯದ ವಿವಿಧ ಘಟ್ಟಗಳನ್ನು ಅಮೃತಾಧಾರೆಯಲ್ಲಿ ನಿರೀಕ್ಷಿಸಬಹುದು. ಇದು ಪ್ರೀತಿಸಿ ಮದುವೆಯಾಗಿರುವ ಬಹು ಮಂದಿಯ ಕಥೆ.

ವಿದೇಶದಲ್ಲಿ ಚಿತ್ರೀಕರಿಸುವ ಬಯಕೆ ಸದ್ಯಕ್ಕೆ ಇಲ್ಲ ಎನ್ನುವ ನಾಗತಿಹಳ್ಳಿ ಚಂದ್ರಶೇಖರ್‌, ಹಾಡುಗಳನ್ನು ಕಾಶ್ಮೀರದಲ್ಲಿ ಹಾಗೂ ಆಗ್ರದ ತಾಜಮಹಲ್‌ನಲ್ಲಿ ಚಿತ್ರದ ಕ್ಲೈಮ್ಯಾಕ್ಸ್‌ ಚಿತ್ರೀಕರಿಸುವುದಾಗಿ ತಿಳಿಸಿದ್ದಾರೆ.

‘ನನ್ನ ಪ್ರೀತಿಯ ಹುಡುಗಿ’ ಖ್ಯಾತಿಯ ಮುಂಬೈನ ಹುಡುಗ ಧ್ಯಾನ್‌ಗೆ ನಾಯಕಿಯಾಗಿ ರಮ್ಯಾ ನಟಿಸುತ್ತಿದ್ದಾರೆ. ಅಂದ ಹಾಗೇ ನಾಯಕಿ ಹೆಸರು -ಅಮೃತಾ. ಚಿತ್ರದಲ್ಲಿ ಐದು ಹಾಡುಗಳಿದ್ದು, ಮನೋಮೂರ್ತಿ ಸಂಗೀತ ನೀಡಿದ್ದಾರೆ.

ಅವಿನಾಶ್‌, ಭವ್ಯ, ಮಂಡ್ಯ ರಮೇಶ್‌, ಯಶವಂತ್‌ ಸರದೇಶಪಾಂಡೆ, ರಾಜು ಅನಂತಸ್ವಾಮಿ, ಗಣೇಶ್‌, ಕರಿಬಸವಯ್ಯ ತಾರಾಂಗಣದಲ್ಲಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada