twitter
    For Quick Alerts
    ALLOW NOTIFICATIONS  
    For Daily Alerts

    ನಟನೆ ಬಿಟ್ಟರೆ ಬೇರೆ ಗೊತ್ತಿಲ್ಲ.. ನೀವು ಕೈಹಿಡಿದಿರಿ -ಗಣೇಶ್‌

    By Staff
    |


    ಈಗಂತೂ ಗಣೇಶ್‌ ಬಿಜಿ. ಈ ಮಧ್ಯೆಯೂ ಬಿಡುವು ಮಾಡಿಕೊಂಡು ‘ದಟ್ಸ್‌ ಕನ್ನಡ’ಕ್ಕೆ ಅವರು ಸಂದರ್ಶನ ನೀಡಿದ್ದಾರೆ. ಮಾತುಕತೆಯ ವಿವರ ನಿಮ್ಮ ಮುಂದೆ.

    ಟ್ವಿಂಕಲ್‌ ಟ್ವಿಂಕಲ್‌ ಲಿಟ್ಟಲ್‌ ಸ್ಟಾರ್‌... ಗಣೇಶ್‌ ಈಗ ಸೂಪರ್‌ ಸ್ಟಾರ್‌’ ಅಂದರೆ ತಪ್ಪಾಗುತ್ತದೆ! ಹೌದು. ‘ಮುಂಗಾರು ಮಳೆ’ಯಿಂದ ಗಣೇಶ್‌ ‘ಸ್ಟಾರ್‌’ಆದರು ಅನ್ನುವಂತಿಲ್ಲ! ಕಾರಣ; ಗಣೇಶ್‌ ಮೊದಲೂ ಸ್ಟಾರ್‌ ಆಗಿದ್ದವರೇ...

    ಉದಯ ಟೀವಿಯ ‘ಕಾಮಿಡಿ ಟೈಂ’ ಮೂಲಕ ಗಣೇಶ್‌, ನಾಡಿನ ಮನೆಮನೆಯಲ್ಲೂ ಅಭಿಮಾನಿಗಳ ಸೃಷ್ಟಿಸಿಗೊಂಡವರು. ಸೂರ್ಯಕಾಂತಿ ಹೂವಿನಂತೆ ಮುಖವರಳಿಸಿ, ಚಿನಕುರುಳಿಯಂತೆ ಮಾತು ಪೋಣಿಸುವ ಈ ಗಣೇಶ್‌ ಇಷ್ಟವಾಗಲು ಕಾರಣಗಳು ಅನೇಕ. ಪಕ್ಕದ ಮನೆ ಹುಡುಗನಂತೆ, ಈ ಹುಡುಗ ನಗ್ತಾನೆ. ಮಾತಾಡ್ತಾನೆ. ಹೀರೋಯಿಸಂನಿಂದ ಹೊರಬಂದು ಎಲ್ಲರೊಂದಿಗೆ ಬೆರೆಯುತ್ತಾನೆ. ಇದು ಅವರನ್ನು ಹತ್ತಿರದಿಂದ ಕಂಡವರು ಹೇಳುವ ಮಾತು.

    ಆದರೆ ಒಂದಂತೂ ನಿಜ. ಶ್ರದ್ಧೆ-ಛಲ ಇದ್ದರೆ ಯಾರು ಬೇಕಾದರೂ ನಾಯಕನಾಗಬಹುದು ಅನ್ನುವುದಕ್ಕೆ ಗಣೇಶ್‌ ನಮ್ಮ ಮುಂದಿನ ಉದಾಹರಣೆ. ಗಾಂಧಿನಗರದಲ್ಲಿ ಅವರು ತುಳಿದ ಸೈಕಲ್‌ ವೆಸ್ಟ್‌ಆಗಿಲ್ಲ. ಅವರಿಗೀಗ ಕಾದದ್ದಕ್ಕೆ ಬಡ್ಡಿ ರೂಪದಲ್ಲಿ... ಚಕ್ರಬಡ್ಡಿ ರೂಪದಲ್ಲಿ ಪ್ರತಿಫಲ ಸಿಕ್ಕಿದೆ. ಅದೃಷ್ಟ ಬಾಗಿಲಿಗೆ ಬಂದು ತಗೋತಗೋ ಎಂದಿದೆ.

    ಗಣೇಶ್‌ರ ಇನ್ನೊಂದು ಆಸ್ತಿ ನಗೆ. ಈ ಹುಡುಗನ ನಗೆಗೆ ಸೋಲದವರ್ಯಾರು... (ಯೋಗರಾಜ್‌ ಭಟ್‌ಗೆ ಗಣೇಶ್‌ರ ನಗೆಮೊಗ ತುಂಬಾ ಇಷ್ಟವಾಯಿತಂತೆ! ).

    ಈಗಂತೂ ಗಣೇಶ್‌ ಬಿಜಿ. ಈ ಮಧ್ಯೆಯೂ ಬಿಡುವು ಮಾಡಿಕೊಂಡು ‘ದಟ್ಸ್‌ ಕನ್ನಡ’ಕ್ಕೆ ಅವರು ಸಂದರ್ಶನ ನೀಡಿದ್ದಾರೆ. ಮಾತುಕತೆಯ ವಿವರ ನಿಮ್ಮ ಮುಂದೆ.

    ನೀವು ಹೀರೋ ಆಗಲಿಲ್ಲ ಅಂದ್ರೆ ಏನ್‌ ಆಗ್ತಾಯಿದ್ರಿ?

    ಏನೂ ಇಲ್ಲ. ಗಣೇಶ್‌ ಆಗಿಯೇ ಇರ್ತಾಯಿದ್ದೆ! ಸಿನಿಮಾಗೆ ಯಾಕೆ ಬಂದೆ ಅಂದ್ರೆ, ನನಗೆ ಅಭಿನಯ ಬಿಟ್ರೆ ಬೇರೇನೂ ಗೊತ್ತಿಲ್ಲ..

    ‘ಮುಂಗಾರು ಮಳೆ’ ಬಗ್ಗೆ ಹೇಳಿ? ನಿಮಗೆ ಇಷ್ಟವಾದ ಹಾಡು-ಸನ್ನಿವೇಶ- ಯಾವುದು?

    ಹೇಳೋದು ಅಂದ್ರೆ, ಸಕತ್ತು ಖುಷಿಯಾಗುತ್ತಿದೆ. ನಾನು ಹೇಳೋದನ್ನು ಪ್ರೇಕ್ಷಕರು ಹೇಳುತ್ತಿದ್ದಾರೆ. ಸಾಕಲ್ವಾ? ನನಗೆ ಎಲ್ಲಾ ಹಾಡು ಇಷ್ಟ. ಅದರಲ್ಲೂ ‘ಅನಿಸುತಿದೆ ಯಾಕೋ ಇಂದು.. ’ ಸಕತ್ತು ಇಷ್ಟ. ಇಷ್ಟದ ಸನ್ನಿವೇಶ -ಹೆಂಡ ಕುಡೀತಾ, ಮಳೆಯಲ್ಲಿ ನೆನೆಯುತ್ತಾ, ಮನದ ಮಾತುಗಳ ಹೇಳುವುದು...

    ನಿಮ್ಮ ಊರು? ನಿಮ್ಮ ಹಿನ್ನೆಲೆ.. ವಿದ್ಯಾಭ್ಯಾಸ ಇತ್ಯಾದಿ.. ಬಗ್ಗೆ ಒಂದೆರಡು ಮಾತು...

    ನನ್ನೂರು, ನೆಲಮಂಗಲ ಬಳಿಯ ಅಡಕೆಮಾರನಹಳ್ಳಿ. ತಂದೆ -ಕಿಷನ್‌, ತಾಯಿ-ಸುಲೋಚನಾ. ನಾನು ಮೂರನೆಯವನು. ನನ್ನ ತಮ್ಮಂದಿರ ಹೆಸರು ಮಹೇಶ್‌ ಮತ್ತು ಉಮೇಶ್‌. ನಮ್ಮಜ್ಜಿ ಸೀತಮ್ಮ. ಈಗ ಬೆಂಗಳೂರಿನ ವಿಜಯನಗರದಲ್ಲಿ ವಾಸ.

    ಸಿನಿಮಾಗೆ ಯಾಕೆ ಬಂದ್ರಿ?

    ವಿದ್ಯೆ ಅರ್ಧಕ್ಕೆ ನೈವೇದ್ಯೆ ಆಯಿತು. ಬಲವಂತಕ್ಕೆ ನೆಲಮಂಗಲದಲ್ಲಿ ಡಿಪ್ಲೋಮೋ ಇನ್‌ ಎಲೆಕ್ಟ್ರಾನಿಕ್ಸ್‌ ಮಾಡ್ತೆ. ಅಲ್ಲಿಗೆ ಸುಸ್ತಾದೆ. ಬಣ್ಣದ ಬದುಕಲ್ಲಿ ಅನ್ನ ಹುಡುಕಿಕೊಳ್ಳೋದು ಅನಿವಾರ್ಯ ವಾಯಿತು. ಸೈಕಲ್‌ ತುಳಿಯೋದು ಮುಂದುವರೆಯಿತು.

    ನಿಮ್ಮ ಮೊದಲ ಸಿನಿಮಾ?

    ‘ಠಪೋರಿ’ . ಈ ಚಿತ್ರದಲ್ಲಿ ಖಳನಟನ ಪಾತ್ರ ನನ್ನದು. ಖಳನಟ ಹಾಸ್ಯನಟನಾಗಿ, ನಾಯಕನಟನಾದ. ಎಲ್ಲವೂ ಅಭಿಮಾನಿ ದೇವರ ಆಶೀರ್ವಾದ. ಈ ಗಣೇಶ್‌ನ ಅಭಿಮಾನಿಗಳು ಮುಂದೇನು ಮಾಡ್ತಾರೋ ನೋಡೋಣ...

    ಹೊಸ ಟ್ರೆಂಡ್‌ ಬರ್ತಾಯಿದೆ... ಇದರ ಬಗ್ಗೆ ಹೇಳಿ?

    ಬರಲಿ. ಇದು ಒಂದು ಥರಹಾ ಒಳ್ಳೆಯದು ಅಲ್ವಾ ಸಾರ್‌... ‘ಹಳೇ ಬೇರು, ಹೊಸ ಚಿಗುರು ಸೇರಿರಲು ...’ಅನ್ನೋ ಕವಿವಾಣಿಯೇ ಇದೆ.

    ‘.. ಮಳೆ ’ ಯಶಸ್ಸಿನಲ್ಲಿ ನಿಮ್ಮ ಪಾತ್ರವೆಷ್ಟು? ಮಳೆ ಪಾತ್ರವೆಷ್ಟು? ಯೋಗರಾಜ ಭಟ್‌ ಪಾತ್ರವೆಷ್ಟು? ಹಾಡುಗಳ ಪಾತ್ರವೆಷ್ಟು?

    (ನಗು) ಹೀಗೆ ಪರ್ಸೆಂಟೇಚ್‌ ಲೆಕ್ಕದಲ್ಲಿ ಹಂಚೋದು ಕಷ್ಟ. ಒಟ್ಟಾರೆ ಇದು ಟೀಮ್‌ ವರ್ಕ್‌.

    ‘ಮುಂಗಾರು ಮಳೆ’ ಯಶಸ್ಸಿಗೆ ಕಾರಣ?

    ಕಾರಣ ಗೊತ್ತಿಲ್ಲ. ಇದೊಂದು ಮ್ಯಾಜಿಕ್‌ ಇರಬಹುದಾ? ಸಾಧಿಸಲೇ ಬೇಕು ಎಂದು ಹೊರಟವರ ಯಶಸ್ಸಿದು. ಯಶಸ್ಸಿನ ಕಾರಣ ಗೊತ್ತಾಗಿ ಬಿಟ್ಟರೆ, ಇಂಥ ಚಿತ್ರಗಳು ಇನ್ನಷ್ಟು ಬರುತ್ತೆ! ಸೋಲಿಗೆ ಕಾರಣ ಇರುತ್ತೆ. ಗೆಲುವಿಗೆ ಕಾರಣ ಇರೋದಿಲ್ಲ. ಸಿನಿಮಾ ಗೆದ್ದಿದೆ. ಪ್ರೇಕ್ಷಕರಿಗೆ ಇಷ್ಟವಾಗಿದೆ. 76ಸೆಂಟರ್‌ನಲ್ಲಿ ಮುನ್ನುಗ್ಗುತ್ತಿದೆ. ನನಗಂತೂ ಸಕತ್ತು ಖುಷಿ.

    ಸಿನಿಮಾ ಆರಂಭಿಸಿದಾಗ ಏನನ್ನಿಸಿತು?

    ಸಿನಿಮಾ ಸ್ಕಿೃೕಪ್ಟ್‌ ಕಂಡಾಗಲೇ, ಗೆಲುವಿನ ವಾಸನೆ ಬಡಿದಿತ್ತು... ಪ್ರೇಕ್ಷಕರು ನಮ್ಮ ಕೈಬಿಡಲಿಲ್ಲ. ನಿರೀಕ್ಷೆ ನಿಜವಾಯಿತು.

    ಸಿನಿಮಾದಲ್ಲಿ ದೇವದಾಸ(ಮೊಲ) ಸತ್ತ... ಆಮೇಲೆ ಏನಾಯ್ತು?

    ಈಗ ನಮ್ಮ ಫಾರಂ ಹೌಸ್‌ನಲ್ಲಿದ್ದಾನೆ. ಎಂಟು ಮಕ್ಕಳಿಗೆ ಜನ್ಮ ನೀಡಿ ಆರಾಮವಾಗಿದ್ದಾನೆ. ಸಂಸಾರ ನಡೆದಿದೆ.

    ಮದುವೆ ಯೋಚನೆ ಇದೆಯಾ? ಪ್ರೀತಿ-ಪ್ರೇಮ-ಪ್ರಣಯ ಏನಾದರೂ ಉಂಟಾ...?

    ಮದುವೆ ಸದ್ಯಕ್ಕಿಲ್ಲ. ಅಯ್ಯಾಯ್ಯೋ, ಪ್ರೀತಿ-ಪ್ರೇಮ-ಪ್ರಣಯ ಅವೆಲ್ಲ ಏನಿಲ್ಲ ಬಿಡಿ.. (ಮಾತಲ್ಲಿ ನಾಚಿಕೆ).

    ಮುಂದಿನ ಚಿತ್ರಗಳು?

    ರೇಖಾ ಜೊತೆ ‘ಹುಡುಗಾಟ’ ಚಿತ್ರೀಕರಣ ನಡೆದಿದೆ. ಎಸ್‌. ನಾರಾಯಣ್‌ರ ‘ಚೆಲುವಿನ ಚಿತ್ತಾರ’ ಮತ್ತು ರಮೇಶ್‌ ಯಾದವ್‌ರ ‘ಕೃಷ್ಣ’ ಚಿತ್ರಗಳನ್ನು ಸದ್ಯಕ್ಕೆ ಒಪ್ಪಿಕೊಂಡಿದ್ದೇನೆ. ಮುಂದೆ ನೋಡೋಣ.

    ತೆಲುಗು-ತಮಿಳಿನಿಂದ ಆಫರ್‌ ಬಂದ್ರೆ, ಗಣೇಶ್‌ ಹೋಗ್ತಾರಾ?

    ಯಾಕೆ ಹೋಗಬೇಕು ಸಾರ್‌.. ಕನ್ನಡದವರು ನನ್ನನ್ನು ಚೆನ್ನಾಗಿಯೇ ನೋಡಿಕೊಂಡಿದ್ದಾರಲ್ಲ.. ಊಟಕ್ಕಂತೂ ಕೊರತೆಯಿಲ್ಲ. ಅಲ್ವಾ?

    ನಿಮ್ಮ ಯಶಸ್ಸಿನ ಬಗ್ಗೆ ತವರೂರು ಅಡಕೆಮಾರನಹಳ್ಳಿ ಜನ ಏನ್‌ ಅಂತಾರೆ?

    ಅವರಿಗೆ ಸಕತ್ತು ಖುಷಿಯಾಗಿದೆ. ಆ ಜನ ತೋರಿಸಿದ ಅಕ್ಕರೆಗೆ ನಾನು ಋಣಿ.

    ನಮ್ಮ ದಟ್ಸ್‌ ಕನ್ನಡ ಓದುಗರಿಗಂತೂ ನೀವು ಮೋಡಿ ಮಾಡಿದ್ದೀರಾ? ಗಣೇಶ್‌ ಬಗ್ಗೆ ಅವರಿಗೆ ಸಕತ್ತು ಒಲವು. ನಮ್ಮ ಓದುಗರು ಮತ್ತು ನಿಮ್ಮ ಅಭಿಮಾನಿಗಳಿಗೆ ಏನ್‌ ಹೇಳ್ತೀರಾ?

    ನಗಿಸುತ್ತಾ ಇರಿ.. ಯಾರನ್ನೂ ನೋಯಿಸಬೇಡಿ.. ಬದುಕಿನಲ್ಲಿ ಏನಾದರೂ ಸಾಧನೆ ಮಾಡಿ... ಗಣೇಶ್‌ ನಿಮ್ಮವನು... ನಿಮ್ಮ ಹುಡುಗ...

    Thursday, April 25, 2024, 9:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X