»   » ಸತ್ಯಜಿತ್‌ ರೇಗೆ ಸಂದ ಆಸ್ಕರ್‌ ಭಾರತಕ್ಕೆ ಸಿಕ್ಕದ್ದಲ್ಲವೇ?

ಸತ್ಯಜಿತ್‌ ರೇಗೆ ಸಂದ ಆಸ್ಕರ್‌ ಭಾರತಕ್ಕೆ ಸಿಕ್ಕದ್ದಲ್ಲವೇ?

Posted By: Staff
Subscribe to Filmibeat Kannada

*ಇನ್ಫೋ ಇನ್‌ಸೈಟ್‌

ಭಾರತದ ಯಾವ ಚಿತ್ರಕ್ಕೂ ಆಸ್ಕರ್‌ ಬರಲಿಲ್ಲ ಎಂದು ಕೊರಗುತ್ತಿರುವ ಈ ಹೊತ್ತಲ್ಲಿ ಸತ್ಯಜಿತ್‌ ರೇ ಅವರನ್ನು ನೆನದರೆ ಮನಸ್ಸು ಹಗುರಾದೀತು. ಸಿನಿಮಾ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಗೆ 1992ರಲ್ಲಿ ಗೌರವ ಆಸ್ಕರ್‌ ಬಂದಿತ್ತು. ಅದು ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ರೇ ಅವರಿಗೆ ಸಿಕ್ಕ ಮನ್ನಣೆ. ಈಗ ಅಮೆರಿಕೆಯಲ್ಲಿ ಅವರ ನೆನೆಯಲು ಅಪರೂಪದ ಚಿತ್ರ ಸರಣಿ. ರೇ ಅವರ ಎಲ್ಲಾ ಚಿತ್ರಗಳ ನೋಡುವ ಅವಕಾಶ.

1955ರ 'ಪಥೇರ್‌ ಪಾಂಚಾಲಿ"ಯಿಂದ ಹಿಡಿದು 1991ರ 'ಆಗಂತುಕ್‌"ವರೆಗೆ ರೇ ನಿರ್ಮಾಣದ ಎಲ್ಲಾ 35 ಚಿತ್ರಗಳ ಪ್ರದರ್ಶನ. ರೇ ಅವರು ಮೃತರಾಗಿ ದಶಕ ಸಂದಿರುವುದರ ನೆವ. ರೇ ಚಿತ್ರಗಳ ತೋರುವ ಮೊದಲ ಜಾಗೆ ವಾಷಿಂಗ್ಟನ್‌. ಮುಂದೆ ಪ್ರಯಾಣ ಎಲ್ಲೆಲ್ಲಿಗೋ. ದಿ ಲೈಬ್ರರಿ ಆಫ್‌ ಕಾಂಗ್ರೆಸ್‌, ದಿ ನ್ಯಾಷನಲ್‌ ಜಿಯಾಗ್ರಫಿಕ್‌ ಸೊಸೈಟಿ ಮತ್ತು ಅಮೆರಿಕನ್‌ ಯೂನಿವರ್ಸಿಟಿ ಒಟ್ಟಾಗಿ ಈ ಅಭಿಯಾನದಲ್ಲಿ ಭಾಗವಹಿಸುತ್ತಿವೆ. ವಾಷಿಂಗ್ಟನ್‌ನಲ್ಲಿ ಈ ತಿಂಗಳು, ಲಾಸ್‌ ಏಂಜಲೀಸ್‌ ಕೌಂಟಿ ಮ್ಯೂಸಿಯಂ ಆರ್ಟ್ಸ್‌ನಲ್ಲಿ ಮುಂದಿನ ತಿಂಗಳು ರೇ ಚಿತ್ರಗಳ ಪ್ರದರ್ಶನ.

ಸ್ಮಿಥ್‌ಸೋನಿಯನ್‌ ಶಿಕ್ಷಣ ಸಂಸ್ಥೆಯ ಸೆಂಟರ್‌ ಫಾರ್‌ ಎಜುಕೆಶನ್‌ ಅಂಡ್‌ ಮ್ಯೂಸಿಯಂ ಸ್ಟಡೀಸ್‌ನ ಕಾರ್ಯಕ್ರಮ ನಿರ್ದೇಶಕಿ ಮಂಜುಳಾ ಕುಮಾರ್‌ ಈ ಅಭಿಯಾನದ ಉಸ್ತುವಾರಿ ವಹಿಸಿಕೊಂಡಿದ್ದಾರೆ. 'ದಿ ಕಂಪ್ಲೀಟ್‌ ಸತ್ಯಜಿತ್‌ ರೇ : ಸಿನಿಮಾ ತ್ರೂ ದಿ ಇನ್ನರ್‌ ಐ"- ಇದು ಅಭಿಯಾನದ ಶೀರ್ಷಿಕೆ. ತಮ್ಮ ಕಲಾ ಗುರು ಕಣ್ಣು ಕಾಣದಾಗಲೂ ಚಿತ್ರ ಬಿಡಿಸುವುದನ್ನು ಕಂಡು ದಂಗಾದ ಸತ್ಯಜಿತ್‌ ರೇ, ಇದನ್ನು ಕುರಿತು 'ದಿ ಇನ್ನರ್‌ ಐ" ಎಂಬ ಸಾಕ್ಷ್ಯಚಿತ್ರ ಮಾಡಿದ್ದರು. ಅದರಿಂದ ಹೆಕ್ಕಿದ ಶೀರ್ಷಿಕೆಯೇ ಈ ಚಿತ್ರ ಸರಣಿಯದ್ದು.

ಸತ್ಯಜಿತ್‌ ರೇ ನಿರ್ಮಾಣದ ಹದಿನೈದು ಸಿನಿಮಾಗಳಲ್ಲಿ ಹಾಗೂ ಖ್ಯಾತಿ ಗಳಿಸಿದ 'ಅಪು ಟ್ರೆೃಲಜಿ"ಯಲ್ಲಿ ಅಭಿನಯಿಸಿರುವ ಸೌಮಿತ್ರ ಚಟರ್ಜಿ ನ್ಯಾಷನಲ್‌ ಗ್ಯಾಲರಿ ಆಫ್‌ ಆರ್ಟ್‌ನಲ್ಲಿ ರೇ ಚಿತ್ರ ಸರಣಿಯ ಪರಿಚಯ ಮಾಡಿಕೊಟ್ಟರು. ರೇ ಅವರ ಬಹುತೇಕ ಚಿತ್ರಗಳು ಬಂಗಾಳಿ ಭಾಷೆಯವು. ಅವುಗಳನ್ನು ಒಟ್ಟಾಗಿ ತೋರಿಸುವ ಪ್ರಯತ್ನ ನಡೆದಿರಲಿಲ್ಲ. ಸಬ್‌ಟೈಟಲ್‌ಗಳಿರುವುದರಿಂದ ಅವುಗಳನ್ನು ಅರ್ಥ ಮಾಡಿಕೊಳ್ಳುವುದು ಸುಲಭ ಅಂದರು.

ರೇ ಒಬ್ಬ ಚಿಂತಕ, ಅನನ್ಯ ಚಿತ್ರೋದ್ಯಮಿ ಅಷ್ಟೇ ಅಲ್ಲ. ಅವರೊಬ್ಬ ಕಾದಂಬರಿಕಾರ, ಕಲಾವಿದ. ಕಂಪೋಸರ್‌ ಕೂಡ ಹೌದು. ಭಾರತದ ಸಿನಿಮಾಗೆ ಆಸ್ಕರ್‌ ಬಂದಿಲ್ಲದಿರಬಹುದು. ಆದರೆ ಬಂಗಾಳಿ ಪ್ರತಿಭೆ ಸತ್ಯಜಿತ್‌ ರೇ ಅವರಿಗೆ ಸಂದಿರುವ ಆಸ್ಕರ್‌ ಭಾರತಕ್ಕೇ ಸಂದದ್ದಲ್ಲವೇ?

English summary
America commemorates Satyajit Rays oeuvre

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada