»   » ಇಂದ್ರ: ಚಿರಂಜೀವಿ ಅಭಿಮಾನಿಗಳ ಉತ್ಸಾಹಕ್ಕೆಲಾಠಿಯೇಟು!

ಇಂದ್ರ: ಚಿರಂಜೀವಿ ಅಭಿಮಾನಿಗಳ ಉತ್ಸಾಹಕ್ಕೆಲಾಠಿಯೇಟು!

Posted By: Super
Subscribe to Filmibeat Kannada

ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್‌ ಚಿರಂಜೀವಿ ಅಭಿನಯದ ಬಹು ನಿರೀಕ್ಷೆಯ ಅದ್ದೂರಿ ಚಿತ್ರ 'ಇಂದ್ರ" ತೆರೆ ಕಂಡಿದ್ದು , ಬಹಳ ದಿನಗಳ ನಂತರ ತೆರೆಕಂಡ ನೆಚ್ಚಿನ ನಾಯಕನ ಸಿನಿಮಾ ಚಿಕ್ಕಬಳ್ಳಾಪುರದ ಅಭಿಮಾನಿಗಳಲ್ಲಿ ಉತ್ಸಾಹದ ಚಿಲುಮೆ ಉಕ್ಕಿಸಿದೆ.

ರಾಷ್ಟ್ರೀಯ ಹೆದ್ದಾರಿ 7 ಕ್ಕೆ ಹೊಂದಿಕೊಂಡಿರುವ 'ವಾಣಿ" ಥಿಯೇಟರ್‌ ಮುಂದೆಯಂತೂ ಜನ ಸಾಗರವೋ ಸಾಗರ. ಇತ್ತೀಚಿನ ದಿನಗಳಲ್ಲಿ ತೆಲುಗು ಸಿನಿಮಾವೊಂದು ಜನರನ್ನು ಸೂಜಿಗಲ್ಲಿನಂತೆ ಈ ಪಾಟಿ ಸೆಳೆದದ್ದೇ ಇಲ್ಲ . ಎಲ್ಲಿ ನೋಡಿದರೂ- ಚಿರಂಜೀವಿ ಭಾವಚಿತ್ರಗಳು, ಕಟೌಟ್‌ಗಳು, ಬ್ಯಾನರ್‌ಗಳು ! ಇದರ ಜೊತೆಗೆ ಅಭಿಮಾನಿಗಳ ಹರ್ಷೋದ್ಘಾರ.

ಸಿನಿಮಾ ಬಿಡುಗಡೆಯ ದಿನ ಮಾರ್ನಿಂಗ್‌ ಷೋ ಶುರುವಾದದ್ದು ಬೆಳಗ್ಗೆ 6 ಗಂಟೆಗೆ. ಟಿಕೇಟ್‌ಗಾಗಿ ಅಭಿಮಾನಿಗಳು ಇಡೀ ರಾತ್ರಿ ಸರತಿ ಸಾಲಿನಲ್ಲಿ ಕಾದು ನಿಂತಿದ್ದರು. ಟಿಕೆಟ್‌ ಸಿಕ್ಕವರಿಗೆ ಹಬ್ಬದ ಸಂತೋಷ. ಸಿಗದವರಿಗೆ ನಿರಾಶೆ. ಕಾಳಸಂತೆಯಲ್ಲೂ ಟಿಕೆಟ್‌ ಸಿಗದ ಪರದಾಟ.

ಅಭಿಮಾನಿಗಳ ಉತ್ಸಾಹ- ಸಂಭ್ರಮ ಮೇರೆ ಮೀರಿದಾಗ ಮಧ್ಯ ಪ್ರವೇಶಿಸಿದ್ದು - ಪೊಲೀಸರು. ಥಿಯೇಟರ್‌ ಮುಂದೆ ಜಮಾಯಿಸಿದ್ದ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿ ಪ್ರಯೋಗಿಸಿದರು.

ಬಳ್ಳಾರಿಯಲ್ಲಿ ಪ್ರಾಣಿ ಬಲಿ !
ಚಿಕ್ಕಬಳ್ಳಾಪುರ ಅಭಿಮಾನಿಗಳ ಅಭಿಮಾನದ ಪ್ರದರ್ಶನ ಕಟೌಟು-ಬ್ಯಾನರ್‌ಗಳಿಗೆ ಸೀಮಿತವಾದರೆ, ಬಳ್ಳಾರಿಯ ಅಭಿಮಾನಿಗಳ ಉತ್ಸಾಹ ಹೊರಹೊಮ್ಮಿರುವುದು ಪ್ರಾಣಿ ಬಲಿಯ ಮೂಲಕ.

ಬಳ್ಳಾರಿಯ ನಟರಾಜ್‌ ಚಿತ್ರಮಂದಿರದಲ್ಲಿ ಈಗ ಇಂದ್ರನದೇ ದರ್ಬಾರು. ಬಿಡುಗಡೆಯ ದಿನ ಮಧ್ಯರಾತ್ರಿಯಿಂದಲೇ ನಟರಾಜ್‌ ಥಿಯೇಟರ್‌ ಮುಂದೆ ಚಿರು ಅಭಿಮಾನಿಗಳ ಜಾತ್ರೆ. ಥಿಯೇಟರ್‌ ಮುಂಭಾಗ 2 ಕುರಿಗಳನ್ನು ಕತ್ತರಿಸಿದ ಅಭಿಮಾನಿಗಳು ನೆಚ್ಚಿನ ನಾಯಕನ ಕಟೌಟ್‌ಗೆ ರಕ್ತ ತಿಲಕವಿಟ್ಟರು. ನೂರಾರು ಮಂದಿ ನಾಗರಿಕರು ಹಾಗೂ ಪೊಲೀಸರು ಅಭಿಮಾನಿಗಳ ಈ ಅತಿರೇಕಕ್ಕೆ ಮೌನ ಸಾಕ್ಷಿಯಾಗಿದ್ದರು. 'ಇಂದ್ರ" ಸಿನಿಮಾದ ಯಶಸ್ಸಿನ ಓಟ ಮುಂದುವರಿದಿದೆ!

English summary
Police beatings for Chiranjeevi fans of Chikballapur

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada