»   » ಎಚ್‌.ಎಂ.ರಾಮಚಂದ್ರ ಶ್ರೇಷ್ಠ ಛಾಯಾಗ್ರಾಹಕ

ಎಚ್‌.ಎಂ.ರಾಮಚಂದ್ರ ಶ್ರೇಷ್ಠ ಛಾಯಾಗ್ರಾಹಕ

Posted By: Super
Subscribe to Filmibeat Kannada

ಬೆಂಗಳೂರು : 49ನೇ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಫಲಿತಾಂಶ ಹೊರಬಿದ್ದಿದ್ದು, ಕನ್ನಡದ ಹೆಮ್ಮೆಯ ಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ನಿರ್ದೇಶನದ 'ದ್ವೀಪ" ಸ್ವರ್ಣ ಕಮಲ ರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದೆ. ಇದೇ ಚಿತ್ರದ ಛಾಯಾಗ್ರಹಕ ಎಚ್‌. ಎಂ. ರಾಮಚಂದ್ರ ಅವರಿಗೆ ಉತ್ತಮ ಛಾಯಾಗ್ರಾಹಕ ಪುರಸ್ಕಾರ ದೊರೆತಿದೆ.

ಕೆ.ಎಸ್‌.ಸೇತುಮಾಧವನ್‌ ಅವರ ನೇತೃತ್ವದ 17 ಜ್ಯೂರಿಗಳ ಮಂಡಳಿ ಈ ಬಾರಿಯ ದೇಶದ ಶ್ರೇಷ್ಠ ಚಿತ್ರವನ್ನಾಗಿ ದ್ವೀಪವನ್ನು ಆಯ್ಕೆ ಮಾಡಿದೆ. ನಾ. ಡಿಸೋಜ ಅವರ 'ಮುಳುಗಡೆ" ಕಾದಂಬರಿ ಆಧಾರಿತ 'ದ್ವೀಪ" ಚಿತ್ರವನ್ನು ನಿರ್ಮಿಸುವ ಮೂಲಕ ನಟಿ ಸೌಂದರ್ಯ ತಮ್ಮ ನಿರ್ಮಾಣದ ಮೊದಲ ಚಿತ್ರದಲ್ಲೇ ಇತಿಹಾಸ ನಿರ್ಮಿಸಿದ್ದಾರೆ. ಕನ್ನಡದ ಮತ್ತೊಬ್ಬ ಹಿರಿಯ ನಟಿ ಜಯಮಾಲಾ ಅವರು ಕೂಡ ಕಾಸರವಳ್ಳಿ ನಿದೇಶನದಲ್ಲಿ 'ತಾಯಿ ಸಾಹೇಬ" ನಿರ್ಮಿಸಿ ಸ್ವರ್ಣಕಮಲ ಪ್ರಶಸ್ತಿ ಗಳಿಸಿದ್ದರು.

ದ್ವೀಪ ಚಿತ್ರದ ನಾಯಕ ಹಾಗೂ ನಾಯಕಿ ಪಾತ್ರದಲ್ಲಿ ಅವಿನಾಶ್‌ ಮತ್ತು ಸೌಂದರ್ಯ ಕಾಣಿಸಿಕೊಂಡಿದ್ದಾರೆ. ಮಳೆ ಚಿತ್ರದ ಮತ್ತೊಂದು ಪ್ರಮುಖ ಪಾತ್ರ. 'ಚೋಮನದುಡಿ" ವಾಸುದೇವ ರಾವ್‌ ಅವರ ಅಭಿನಯದ ಕೊನೆಯ ಚಿತ್ರ ಇದು. ಅಣೆಕಟ್ಟೊಂದನ್ನು ನಿರ್ಮಿಸುವುದರಿಂದ ಶಿವಮೊಗ್ಗದ ಮಲೆನಾಡು ಪರಿಸರದಲ್ಲಿ ಆಗುವ ಬದಲಾವಣೆಗಳ ಒಳಸುಳಿಗಳ ಹಿನ್ನೆಲೆಯೇ ದ್ವೀಪ ಚಿತ್ರದ ಕಥೆ.

ಘಟಶ್ರಾದ್ಧ , ತಬರನ ಕತೆ, ಬಣ್ಣದ ವೇಷ, ಮನೆ, ಕ್ರೌರ್ಯ ಹಾಗೂ ತಾಯಿ ಸಾಹೇಬ ಸಿನಿಮಾಗಳ ಮೂಲಕ ರಾಷ್ಟ್ರೀಯ, ಅಂತರರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿರುವ ಗಿರೀಶ್‌ ಕಾಸರವಳ್ಳಿ ಪ್ರಸ್ತುತ 'ಈ ಟೀವಿ"ಯಲ್ಲಿ ಪ್ರಸಾರವಾಗುತ್ತಿರುವ ಎಸ್‌.ಎಲ್‌.ಭೈರಪ್ಪನವರ ಕಾದಂಬರಿ ಆಧಾರಿತ 'ಗೃಹಭಂಗ" ಧಾರಾವಾಹಿ ನಿರ್ದೇಶಿಸುತ್ತಿದ್ದಾರೆ.

ನಟಿ ಸೌಂದರ್ಯ ಅವರದು ಇನ್ನೊಂದು ಬಗೆಯ ಸಂಭ್ರಮ. ಬೆಂಗಳೂರಿನ ಹನುಮಂತನಗರ ಬಡಾವಣೆಯ ಈ ಹುಡುಗಿ ನೆಲೆ ಕಂಡಿದ್ದು ತೆಲುಗು ಚಿತ್ರರಂಗದಲ್ಲಿ . ಒಂದಾನೊಂದು ಕಾಲದಲ್ಲಿ ತೆಲುಗು ಚಿತ್ರರಂಗದ ನಂ.1 ನಟಿಯಾಗಿದ್ದ ಸೌಂದರ್ಯ- ವರ್ಚಸ್ಸು ಇಳಿಮುಖವಾದ ಸಂದರ್ಭದಲ್ಲಿ ಕನ್ನಡದಲ್ಲಿ ಚಿತ್ರ ನಿರ್ಮಾಣಕ್ಕೆ ಮುಂದಾದರು. ಹೊಸತು ಏನನ್ನಾದರೂ ಸಾಧಿಸಬೇಕು ಎನ್ನುವ ಹುಮ್ಮಸ್ಸಿನಲ್ಲಿ ಕಾಸರವಳ್ಳಿ ಅವರ ನಿರ್ದೇಶನದಲ್ಲಿ 'ದ್ವೀಪ" ಸಿನಿಮಾ ನಿರ್ಮಿಸುವ ಮೂಲಕ ಈಗ ರಾಷ್ಟ್ರೀಯ ಗಮನ ಸೆಳೆದಿದ್ದಾರೆ.

ಮಲಯಾಳಂ ಚಿತ್ರ 'ಒರುಕ್ಕು ನೂರು ಪೇರ್‌"ನ ಅಭಿನಯಕ್ಕಾಗಿ ಮುರಳಿ ಉತ್ತಮ ನಟ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಈ ಬಾರಿಯ ಉತ್ತಮ ನಟಿ ಪ್ರಶಸ್ತಿ ಇಬ್ಬರ ನಡುವೆ ಹಂಚಿ ಹೋಗಿದ್ದು 'ಮಿತ್ರ್‌- ಮೈ ಫ್ರೆಂಡ್‌" ಚಿತ್ರದಲ್ಲಿನ ನಟನೆಗಾಗಿ ಶೋಭನಾ ಹಾಗೂ 'ಚಾಂದ್‌ನೀ ಬಾರ್‌" ಚಿತ್ರದ ಅಭಿನಯಕ್ಕಾಗಿ ತಬು ಅವರು ಶ್ರೇಷ್ಠ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಆಸ್ಕರ್‌ ಪ್ರಶಸ್ತಿಗೆ ಸೆಣಸಿದ 'ಲಗಾನ್‌" ಒಟ್ಟು ಮನರಂಜನೆ ನೀಡುವ ಅತ್ಯುತ್ತಮ ಚಿತ್ರವೆಂಬ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.ದ್ವೀಪದ ಒಳ ಹೊರಗೆ

English summary
Dweepa kannada film directed by Girish kasaravalli bags Swarnakamala

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada