»   » ಮಹೇಶ್‌ ಸುಖಧರೆಯ ‘ಸಾರ್ವಭೌಮ’

ಮಹೇಶ್‌ ಸುಖಧರೆಯ ‘ಸಾರ್ವಭೌಮ’

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಹೊಸದಾಗಿ ಯೋಚಿಸುವ ಸಿನಿಮಾ ಮನಸ್ಸುಗಳ ಪೈಕಿ ಮಹೇಶ್‌ ಸುಖಧರೆ ಹೆಸರೂ ಗಾಂಧಿನಗರದಲ್ಲಿ ಕೇಳಿ ಬರುತ್ತದೆ. ಇದಕ್ಕೆ ಕಾರಣ ಅವರ ಚಿತ್ರಗಳು ಸ್ವ- ಮೇಕ್‌ ಆಗಿರುತ್ತವೆ ಹಾಗೂ ಕ್ಯಾನ್‌ವಾಸ್‌ ದೊಡ್ಡದಾಗಿರುತ್ತದೆ. ಸುಖಧರೆ ದೊಡ್ಡದಾಗಿ ಯೋಚಿಸುತ್ತಾರೆ ಅನ್ನೋದಂತೂ ದಿಟ. ಅವರ ನಿರ್ದೇಶನದ ‘ಸೈನಿಕ’ ಚಿತ್ರವನ್ನು ಅನೇಕರು ಮೆಚ್ಚಿಕೊಂಡಿರುವುದರಿಂದ ಯೋಧನ ವಿಚಾರ ಅವರ ಮನಸ್ಸಲ್ಲಿ ಇನ್ನೂ ಸುಳಿದಾಡುತ್ತಿದೆ. ಅದರ ಫಲವೇ ‘ಸಾರ್ವಭೌಮ’.

ಎಂಟು ತಿಂಗಳು ಚಕ್ಕಳ ಮಕ್ಕಳ ಹಾಕಿ ಕೂತು ಸುಖಧರೆ ಹೊಸೆದಿರುವ ಯೋಧನ ಕಥೆಯೇ ಸಾರ್ವಭೌಮ. ಸೈನಿಕ ಚಿತ್ರಕ್ಕೆ ಚಿತ್ರಕತೆ, ಸಂಭಾಷಣೆ ಬರೆದುಕೊಟ್ಟಿದ್ದ ಬಿ.ಎ.ಮಧು ಕೂಡ ಸುಖಧರೆಯ ಎಂಟು ತಿಂಗಳ ಕಥಾ ಪ್ರಸವದಲ್ಲಿ ಭಾಗಿಯಾಗಿದ್ದರು. ಹೊಸೆದ ಕಥೆಗೆ ಕಾಸು ಹಾಕಲು ನಿರ್ಮಾಪಕ ಜಗದೀಶ್‌ ಮುಂದಾದರು. ಬ್ಯುಸಿಯಾಗಿದ್ದ ಶಿವರಾಜ್‌ಕುಮಾರ್‌ ಕಥೆ ಕೇಳಿದೊಡನೆ ನಟಿಸಲು ಸಮ್ಮತಿ ಸೂಚಿಸಿದರು.

ಪಾಕಿಸ್ತಾನದ ಜೈಲಿನಿಂದ ಈಗ ತಾನೆ ಬಿಡುಗಡೆಯಾಗಿರುವ 55 ವರ್ಷ ವಯಸ್ಸಿನ ಸೆರೆಯಾಳು ಯೋಧ (ಪ್ರಿಸನರ್‌ ಆಫ್‌ ವಾರ್‌) ಹಾಗೂ ಚೆಲ್ಲುಚೆಲ್ಲು ಯುವಕ- ಈ ಎರಡೂ ವಿಭಿನ್ನ ಪಾತ್ರಗಳು ಚಿತ್ರದಲ್ಲಿದ್ದು, ಎರಡನ್ನೂ ಶಿವರಾಜ್‌ ಕುಮಾರ್‌ ನಟಿಸುತ್ತಿದ್ದಾರೆ. ಇದೊಂದು ಚಾಲೆಂಜ್‌ ಎನ್ನುವ ಶಿವರಾಜ್‌ಗೆ ಚಿತ್ರ ಗೆದ್ದೇ ಗೆಲ್ಲುತ್ತದೆಂಬ ವಿಶ್ವಾಸವಿದೆ. ಸಾಕ್ಷಿ ತಂಗಿ ಶಿಲ್ಪ ಶಿವಾನಂದ್‌ ಚಿತ್ರದ ನಾಯಕಿ.

ಒಬ್ಬ ಮೀನುಗಾರ ಅಕಸ್ಮಾತ್ತಾಗಿ ಗಡಿ ರೇಖೆ ಮೀರಿ ನಡೆದು, ಪಾಕಿಸ್ತಾನದಲ್ಲಿ ಸಿಕ್ಕಿಹಾಕಿಕೊಂಡಿದ್ದ. ಅವನನ್ನು ಬಿಡಿಸುವ ವಿಷಯದಲ್ಲಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುತ್ತಿತ್ತು. ಆ ವೇಳೆಯಲ್ಲಿ ಸಾರ್ವಭೌಮ ಕಥೆ ಮೊಳಕೆಯಾಡೆಯಿತು. 21 ವರ್ಷಗಳ ಕಾಲ ಪಾಕಿಸ್ತಾನದ ಜೈಲಿನಲ್ಲಿದ್ದ ನಾರಾಯಣ ಎಂಬಾತ ಇತ್ತೀಚೆಗೆ ಬಿಡುಗಡೆಯಾಗಿ ಬಂದದ್ದು ನನ್ನ ಕಥೆಗೆ ಹೆಚ್ಚಿನದೇನನ್ನೂ ಕೊಡಲಿಲ್ಲ. ನನ್ನ ಚಿತ್ರದ ಕಥೆ ನಾರಾಯಣನ ಕಥೆಗೆ ಹೋಲುವುದು ಕಾಕತಾಳೀಯ ಅಷ್ಟೆ ಎನ್ನುತ್ತಾರೆ ಸುಖಧರೆ.

‘ನಂಜುಂಡಿ’ಗೆ ಒಳ್ಳೆ ಓಪನಿಂಗ್‌ ಸಿಕ್ಕಿದೆ. ನಾಗಾಭರಣ ನಿರ್ದೇಶನದ ಕಾರಂತರ ಕಾದಂಬರಿ ಆಧಾರಿತ ನಿರೀಕ್ಷೆಯ ಚಿತ್ರ ಚಿಗುರಿದ ಕನಸು ಪೈಪ್‌ಲೈನ್‌ನಲ್ಲಿದೆ. ಶಿವರಾಜ್‌ಕುಮಾರ್‌ಗೆ ಸೋಲಿನ ಮರುಭೂಮಿಯಲ್ಲಿ ಸಾಕಷ್ಟು ಓಯಸಿಸ್ಸುಗಳು ಸಿಗುತ್ತಿವೆ ಎಂದಾಯಿತು. ಆ ಪೈಕಿ ಸಾರ್ವಭೌಮ ಕೂಡ ಒಂದು ಅನ್ನೋದು ಸುಖಧರೆ ವಿಶ್ವಾಸ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada