»   » ತವರಲ್ಲಿ ಮಂಡಿನೋವು ಮರೆತ ಗಾಜನೂರ ವರಪುತ್ರ

ತವರಲ್ಲಿ ಮಂಡಿನೋವು ಮರೆತ ಗಾಜನೂರ ವರಪುತ್ರ

Posted By: Staff
Subscribe to Filmibeat Kannada

ಬಿಗಿ ಪೊಲೀಸ್‌ ಪಹರೆಯ ನಡುವೆಯೂ ಎರಡು ವರ್ಷಗಳ ನಂತರ ದೊಡ್ಡ ಗಾಜನೂರಿನಲ್ಲಿ ಅಣ್ಣಾವ್ರ ಮನಸ್ಸು ಸ್ವಚ್ಛಂದವಾಗೇ ಇತ್ತು. ಅದಕ್ಕೇ ಈ ಮಾತುಗಳು ಅವರಿಂದ ಹೊರಟಿದ್ದು. ಆಗಸ್ಟ್‌ 25ರ ಭಾನುವಾರ ರಾಜ್‌ ಪಾಲಿಗೆ ದೀರ್ಘ ಕಾಲದ ನಂತರ ತಾಯ ತವರನ್ನು ನೋಡುವ ಭಾಗ್ಯ. ವೀರಪ್ಪನ್‌ ಹೊತ್ತೊಯ್ದು, ಅವನಿಂದ ಬಂದ ನಂತರ ತನ್ನೂರಲ್ಲಿ ಮೊದಲ ಸಂಚಾರ. ಆದರೂ ಏನೋ ಮುಜುಗರ. ಮುಕ್ತವಾಗಿ ಓಡಾಡಲೂ ಬೇಲಿ. ಬಾಲ್ಯದ ನೆನಪುಗಳ ಗರಿ ಬಿಚ್ಚಲೂ ಅಡ್ಡಿ. ನಡುನಡುವೆ ಮಂಡಿ ನೋವಿನ ಉಸಾಬರಿ. ಹಾಗೂ ಅಣ್ಣಾವ್ರು ಹಟ ಹಿಡಿದೇ ಬಿಟ್ಟರು; ನಾನು ಸುತ್ತಲೇ ಬೇಕು.

ಕಾರಿನಲ್ಲೇ ಹೊರಟಿತು ಊರ ನೋಡಲು ಸವಾರಿ. ನಡುವೆಯೇ ಕಾರು ನಿಲ್ಲಿಸಿ ಬಯಲಿಗೆ ಅಣ್ಣಾವ್ರು ಬಯಲಿಗೇ ಇಳಿದೇ ಬಿಟ್ಟರು. ಆಗ ಮಂಡಿನೋವು ಮಟಾಮಾಯ ! ಅವರ ಹಿಂದೆ ಪೊಲೀಸರ ಬಂದೋಬಸ್ತಿನ ಇರುಸು ಮುರುಸು. ಅದರ ನಡುವೆಯೂ ಅಣ್ಣಾವ್ರ ತುಟಿ ಮೇಲೆ ಯಾವುದೋ ಹಾಡಿನ ಗುನುಗು. ತಮ್ಮ ಮೆಚ್ಚಿನ ಜಮೀನಿನಲ್ಲಿ ಮನತಣಿಯೆ ಓಡಾಡಿಯೇ ತೀರಿದರು.

ಅಣ್ಣಾವ್ರಿಗೆ ಮಂಡಿನೋವು ಶುರುವಾದದ್ದು ಯಾವಾಗ? ಅವರೇ ಹೇಳುತ್ತಾರೆ...

ಒಡಹುಟ್ಟಿದವರು ಸಿನಿಮಾ ಶೂಟಿಂಗಿನ ಟೈಮಲ್ಲೇ ಈ ನೋವು ಕಾಣಿಸಿಕೊಂಡಿತು. ಆಮೇಲೆ ಅವು ್ನ(ವೀರಪ್ಪನ್‌) ಹೊತ್ಕೊಂಡು ಹೋದಾಗ ಜಾಸ್ತಿ ಆಯಿತು. ಏನೋ ಮಸಾಜು ಅದೂ ಇದೂ ಮಾಡಿಸ್ಕೋತಾ ಇದೀನಿ. ಯೋಗ ಮಾತ್ರ ಬಿಟ್ಟಿಲ್ಲ. ನಾನು ಚೆನ್ನಾಗಿದೀನಿ !

ಹೆಚ್ಚು ಮಾತಿಗೆ ಪೊಲೀಸರ ಕಡಿವಾಣ. ತಮ್ಮೂರಿನ ಅಣ್ಣಾವ್ರ ನೋಡುವ ಭಾಗ್ಯ ಕೂಡ ಗಾಜನೂರಿನವರಿಗೆ ದಕ್ಕಲಿಲ್ಲ. ಅಣ್ಣಾವ್ರ ಒಂದೊಂದು ಕದಲಿಕೆಗೂ ಪೊಲೀಸ್‌ ಎಂಬ ಅಡೆತಡೆ. ಇಷ್ಟೆಲ್ಲ ಪೇಚಿನ ನಡುವೆಯೂ ಆತ್ಮೀಯರನ್ನು 'ಊಟ ಮಾಡೋಣ ಬನ್ನಿ..." ಅಂತ ಅಣ್ಣಾವ್ರು ಕರೆದಿದ್ದು ಅವರ ಆತ್ಮೀಯತೆಗೆ ಹಿಡಿದ ಕನ್ನಡಿ.

ಅಣ್ಣಾವ್ರು ಗಾಜನೂರಿಗೆ ಬಂದಿದ್ದಕ್ಕೇ ಮಾಜಿ ಸಚಿವ ನಾಗಪ್ಪನನ್ನು ವೀರಪ್ಪನ್‌ ಕಿಡ್ನ್ಯಾಪ್‌ ಮಾಡಿದ್ದು ಅಂತ ಯಾವುದೋ ಮೂಲೆಯಲ್ಲಿ ಕೇಳಿದ ಮಾತು ರಾಜ್‌ ಕಿವಿಗೆ ಬಿದ್ದಾಗ, ಏನೂ ತಪ್ಪು ಮಾಡದ ಅವರ ಮುಖದಲ್ಲಿ ಎಂಥದೋ ಸತಮತ !

ಗಾಜನೂರಿನಲ್ಲಿ ರಾಜ್‌ರ ಹಳೆಯ ಮನೆ ವಾಸ್ತುಭೂತಕ್ಕೆ ಬಲಿಯಾಗಿದೆ. ಹಾಗಾಗಿ ರಾಜ್‌ ಓಡಾಟವೆಲ್ಲ ನಡೆದದ್ದು ಹೊಸ ಬಂಗಲೆಯಲ್ಲಿ !

ಅಂದಹಾಗೆ, ಚಾಮರಾಜನಗರದಲ್ಲಿ ಸೋಮವಾರ ಅಪ್ಪು ಶತದಿನೋತ್ಸವದ ಖುಷಿ ಕಣ್ಣತುಂಬಿಕೊಳ್ಳುವ ಅವರ ಆಸೆಗೆ ತಣ್ಣೀರು ಬಿದ್ದಿದೆ. ಪೊಲೀಸ್‌ ಸುಪರ್ದಿಯಲ್ಲೇ ಅವರು ಬೆಂಗಳೂರಿಗೆ ವಾಪಸ್ಸು ಬಂದಿದ್ದಾರೆ.

English summary
After 2 years Rajkumar in Gajanur

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada