»   » ಕೆಎಫ್‌ಸಿಸಿ ಹೊಸ ಅಧ್ಯಕ್ಷ ತಲ್ಲಂ ಮುಂದೆ ರಾಶಿರಾಶಿ ಸವಾಲುಗಳು!

ಕೆಎಫ್‌ಸಿಸಿ ಹೊಸ ಅಧ್ಯಕ್ಷ ತಲ್ಲಂ ಮುಂದೆ ರಾಶಿರಾಶಿ ಸವಾಲುಗಳು!

Posted By:
Subscribe to Filmibeat Kannada


ಪರಭಾಷಾ ಚಿತ್ರಗಳಿಂದಾಗಿ ಕನ್ನಡ ಚಿತ್ರೋದ್ಯಮದಲ್ಲಿ ಇಂದು ಬರದ ಛಾಯೆ.. ಇಂಥ ಸಂದರ್ಭದಲ್ಲಿ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರ ಪಾತ್ರ ಹಿರಿದು.

  • ಶಾಮ್‌
ಬೆಂಗಳೂರು : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ತಲ್ಲಂ ನಂಜುಂಡ ಶೆಟ್ಟಿ (85) ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಮಂಡಳಿಯ ಉಪಾಧ್ಯಕ್ಷ ಸ್ಥಾನವೂ ಕೂಡ ಅವಿರೋಧವಾಗಿ ಇತ್ಯರ್ಥವಾಗಿದ್ದು, ಸತತ ಮೂರನೇ ಬಾರಿಗೆ ಸಾ.ರಾ. ಗೋವಿಂದು ಮರು ಆಯ್ಕೆ ಆಗಿದ್ದಾರೆ.

ಮಂಡಳಿಯ 52ನೇ ವರ್ಷದ ಮಹಾಸಭೆ ಮತ್ತು ವಾರ್ಷಿಕ ಚುನಾವಣೆಗಳು ಅಕ್ಟೋಬರ್‌ 28ರಂದು ನಡೆಯಲಿದೆ. ಆಡಳಿತ ಮಂಡಳಿಯ ಇನ್ನಿತರ ಹುದ್ದೆಗಳು ಮತಗಳಿಕೆ ಆಧಾರದ ಮೇಲೆ ಇತ್ಯರ್ಥಗೊಳ್ಳುತ್ತವೆ.

ಪ್ರಸಕ್ತ ಸಾಲಿನ ಅಧ್ಯಕ್ಷ ಸ್ಥಾನದ ಚುನಾವಣೆ ಕನ್ನಡ-ಕರ್ನಾಟಕ ಚಿತ್ರೋದ್ಯಮ ವಲಯಗಳಲ್ಲಿ ಭಾರೀ ಕುತೂಹಲ ಕೆರಳಿಸಿತ್ತು. ಆದರೆ, ಬಲಪ್ರದರ್ಶನ ನಡೆಯದೇ ಎರಡು ಪ್ರಮುಖ ಹುದ್ದೆಗಳಿಗೆ ಆಯ್ಕೆ ನಡೆದುಹೋಯಿತು.

ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಪೈಪೋಟಿ ಒಡ್ಡಿದ್ದ ವೀರೇಶ್‌ ಚಿತ್ರಮಂದಿರದ ಮಾಲೀಕ ಚಂದ್ರಶೇಖರ್‌ ಕೊನೆಯ ಕ್ಷಣದಲ್ಲಿ ನಾಮಪತ್ರ ಹಿಂತೆಗೆದುಕೊಂಡರು. ಚಂದ್ರಶೇಖರ್‌ ಸ್ಪಲ್ಪ ಕಟ್ಟುನಿಟ್ಟಿನ ಆಸಾಮಿ. ಅಂಥವರು ಪ್ರಮುಖ ಹುದ್ದೆಯಲ್ಲಿದ್ದರೆ ಇತರ ಪದಾಧಿಕಾರಿಗಳಿಗೆ ಇರಿಸುಮುರುಸು ಉಂಟಾಗುವುದು ಸ್ವಾಭಾವಿಕ. ಜತೆಗೆ ತಲ್ಲಂ ಅವರು ಹಿರಿಯರು. ಚಿತ್ರೋದ್ಯಮದ ಆಳ ಅಗಲಗಳನ್ನು ಬಲ್ಲ ಅನುಭವಿಗಳು. ಆದ್ದರಿಂದ ಅವರೇ ಇರಲಿ ಎನ್ನುವುದು ಮಂಡಳಿ ಚುನಾವಣೆಯ ಒಂದು ಪಾಳೆಯದ ಒಲವಾಗಿತ್ತು. ಈ ಪಾಳೆಯದಲ್ಲಿ ಇರುವ ಪ್ರಮುಖರೆಂದರೆ ಈಗಿನ ಅಧ್ಯಕ್ಷ ಗಂಗರಾಜು, ಸಾ.ರಾ. ಗೋವಿಂದು ಮತ್ತು ಮಂಜು.

ಕನ್ನಡ ಚಿತ್ರೋದ್ಯಮವನ್ನು ಕಾಡುತ್ತಿರುವ ಚೇಷ್ಟೆಗಳು ಒಂದೆರಡಲ್ಲ. ಅವುಗಳನ್ನು ಶಾಂತ ಮನಸ್ಸಿನಿಂದ, ಕನ್ನಡದ ಪ್ರೀತಿಯಿಂದ, ಕನ್ನಡಿಗರ ಸೃಜನಶೀಲತೆಯ ಬಗ್ಗೆ ಚೂರು ಗೌರವದಿಂದ ಮತ್ತು ಬಂಡವಾಳ ಹೂಡುವವರ ವ್ಯಾಪಾರ ಹಿತದೃಷ್ಟಿಯಿಂದ ನೋಡುವ ಹೊಣೆ ಮಂಡಳಿಯ ಮೇಲಿರುತ್ತದೆ. ಈ ಜವಾಬ್ದಾರಿಗಳನ್ನು ನಿರ್ವಹಿಸಿಸುವ ಕೌಶಲ್ಯ ಆಯ್ಕೆಯಾದ ಪದಾಧಿಕಾರಿಗಳಿಗೆ ಇದೆಯೇ? ಇದ್ದರೆ ಎಷ್ಟಿದೆ? ಎನ್ನುವುದು ಮುಖ್ಯವಾಗುತ್ತದೆ.

ಅಭಿನಯ್‌ ಚಿತ್ರಮಂದಿರದ ಮಾಲೀಕರೂ ಆಗಿರುವ ಇದೇ ತಲ್ಲಂ ನಂಜುಂಡ ಶೆಟ್ಟರು 2001ರಲ್ಲಿ (ಪ್ರದರ್ಶಕ ವಲಯ) ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಆಗಿದ್ದರು. ಆಗಿನ ಪರಿಸ್ಥಿತಿಯಲ್ಲಿ ತಲ್ಲಂ ಅವರು ಕೆಲವು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದಾಗ ಬಂಡೆದ್ದ ಬಸಂತ್‌ಕುಮಾರ್‌ ಪಾಟೀಲ್‌, ದಿವಂಗತ ಎಸ್‌. ರಮೇಶ್‌( ಅವರನ್ನು ಜನ ಪ್ರೀತಿಯಿಂದ ಸ್ಲಂ ರಮೇಶ್‌ ಅಂತಲೂ ಕರೆಯುತ್ತಿದ್ದರು) ಮುಂತಾದವರು ಒಡ್ಡಿದ ಸವಾಲುಗಳನ್ನು ( ಕಿರಿಕಿರಿ ಎಂದು ಓದಿ ಕೊಳ್ಳಬೇಕು) ಸಪಿಸಲಾರದೆ ತಲ್ಲಂ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಬಿಸಾಕಿ ಸೆಂಚುರಿ ಕ್ಲಬ್‌ಗೆ ಹೋಗಿಬಿಟ್ಟಿದ್ದರು.

ಅವರ ರಾಜಿನಾಮೆಯಿಂದ ತೆರವಾದ ಜಾಗದಲ್ಲಿ ಕುಳಿತು ಅಧ್ಯಕ್ಷಗಿರಿಯನ್ನು ಆಗ ನಿಭಾಯಿಸಿದವರು ಇದೀಗ ನಾಮಪತ್ರ ಹಿಂತೆಗೆದುಕೊಂಡಿರುವ ಚಂದ್ರಶೇಖರ್‌.

ಚಿತ್ರ ಮಂದಿರಗಳನ್ನು ಮಾಲೀಕರನ್ನು ಕಾಡುವ ಸರ್ವಿಸ್‌ ಟ್ಯಾಕ್ಸ್‌ ಸಮಸ್ಯೆ, ಕೆಲವರ ಸಿನಿಮಾಗಳಿಗೆ ಥಿಯೇಟರ್‌ ಸಿಗೋಲ್ಲ, ಕೆಲವು ಚಿತ್ರಮಂದಿರಗಳಲ್ಲಿ ಕುಳಿತು ಸಿನಿಮಾ ಅನುಭವಿಸುವ ವಾತಾವರಣನೇ ಇರಲ್ಲ ಮುಂತಾದ ದೂರುಗಳನ್ನು ಗಮನಿಸಿ ತಮ್ಮ ಆಡಳಿತ ಅವಧಿಯಲ್ಲಿ ಸನ್ಮಾನ್ಯ ತಲ್ಲಂ ಮತ್ತು ಮಾನ್ಯ ಗೋವಿಂದು ಅವರು ಕಾರ್ಯಪ್ರವೃತ್ತರಾಗುತ್ತಾರೆಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.. ನಮ್ಮ ನಿರೀಕ್ಷೆಗಳು ಈಡೇರಲಿ ಎಂದು ತಾಯಿ ಭುವನೇಶ್ವರಿಯಲ್ಲಿ ಹರಕೆ ಹೊತ್ತು ಕೊಳ್ಳೋಣ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada