»   » ಜಯಂತ್ ಬೊಗಸೆಯಲ್ಲಿ ಭರವಸೆಯ ಮಳೆ!

ಜಯಂತ್ ಬೊಗಸೆಯಲ್ಲಿ ಭರವಸೆಯ ಮಳೆ!

Subscribe to Filmibeat Kannada


'ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ.. ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ ' ಜಯಂತ್ ಹೀಗೆಲ್ಲ ಬರೆಯುವುದರಿಂದಲೇ, ಕೇಳುಗರು ಭೇಷ್ ಭೇಷ್ ಎನ್ನುತ್ತಿರುವುದು! ಸಿನಿಮಾ ಸಾಹಿತ್ಯ ಕೆಟ್ಟು ಗೊಬ್ಬರವಾಯಿತು ಅನ್ನುವಾಗಲೇ, ಜಯಂತ್ ತಮ್ಮ ಬೊಗಸೆಯಲ್ಲಿ ಭರವಸೆಯ ಮಳೆ ತಂದಿದ್ದಾರೆ. ಮಳೆ ಇನ್ನಷ್ಟು ಸುರಿಯಲಿ..

  • ಶಾಮಿ

ಜಯಂತ್ ಕಾಯ್ಕಿಣಿ ನಮ್ಮ ನಡುವಿನ ಒಬ್ಬ ಒಳ್ಳೆ ಕತೆಗಾರ. ಮನೋಜ್ಞ ಕಥೆಗಳನ್ನು ಮನೋಹರವಾದ ಗದ್ಯಕ್ಕಿಳಿಸಿದ್ದು ಅವರ ಲೇಖನಿಯ ಹೆಚ್ಚುಗಾರಿಕೆ. ಹೀಗಾಗಿ ಅವರ ಕಥೆಗಳು ಎಷ್ಟೋ ಮಂದಿ ಓದುಗರ ಮನ ಸೂರೆಗೊಂಡರೆ ಸಮಕಾಲೀನ ಕಥೆಗಾರರ ಹೊಟ್ಟೆಗೆ ಕಿಚ್ಚುಹಚ್ಚಿದ್ದೂ ಉಂಟು. ಸುಮಾರು ಮೂವತ್ತು ವರ್ಷಗಳಿಂದ ಅವರು ಕಥೆ ಕಾದಂಬರಿಗಳನ್ನು ಬರೆಯುತ್ತ, ಕನ್ನಡ ಅಕ್ಷರಗಳಲ್ಲಿ ಒಳನೋಟ ಅರಸುವ ಸಾಹಿತ್ಯ ಪ್ರೇಮಿಗಳ ಓದಿನ ಹಸಿವನ್ನು ತಣಿಸುತ್ತಲೇ ಬಂದಿದ್ದಾರೆ.

ಕನ್ನಡ ಸಾಹಿತಿ ಮತ್ತು ಸಾಹಿತ್ಯದ ಇತಿಮಿತಿಯೇ ಅಷ್ಟು. ಯಾಕೆಂದರೆ ಅದು ಎಲ್ಲರಿಗೂ ದಕ್ಕುವಂಥದಲ್ಲ. ಅಂತೆಯೇ ಕಾಯ್ಕಿಣಿ ಅವರ ದಗಡೂಪರಬನ ಅಶ್ವಮೇಧ, ತೂಫಾನ್ ಮೇಲ್, ಬೊಗಸೆಯಲ್ಲಿ ಮಳೆ, ಅಮೃತಬಳ್ಳಿ ಕಷಾಯ ಮುಂತಾದ ಕಥಾಸಂಕಲನಗಳನ್ನು ಅನೇಕರು ಓದುವುದು ಇನ್ನೂ ಬಾಕಿಯಿದೆ. ಇಂಥ ಕಾಲಘಟ್ಟದಲ್ಲಿ ಕಥೆಗಾರ ಜಯಂತ್ 'ಮುಂಗಾರು ಮಳೆ' ಚಿತ್ರಕ್ಕೆ ಹಾಡುಬರೆದ ನಂತರ, ಅವರ ಜನಪ್ರಿಯತೆಯ ಬಾವಿ ಹಲಸೂರು ಕೆರೆಯಷ್ಟು ಅಗಲವಾಗಿ ಊರಿಗೆ ಊರೇ ಅದರಲ್ಲಿ ಜಳಕಮಾಡಿತು. ಅದಕ್ಕೆಲ್ಲ ಹೊಣೆ ಪ್ರದರ್ಶನ ಕಲೆಯ ಪ್ರಖರತೆ.

ಮುಂಗಾರು ಮಳೆ ಹಾಡುಗಳ ಮಾಧುರ್ಯದ ಬಗೆಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅರಳುತಿರು ಜೀವದ ಗೆಳೆಯ ಪ್ರೇಮದಾ ಸಿಂಚನದಲ್ಲಿ.. ಎಂದು ಇವತ್ತು ಬೆಳಗ್ಗೆ ಸ್ನಾನಮಾಡುವಾಗ ನೀವು ಹಾಡಿಕೊಂಡಿದ್ದರೆ ನಮಗೆ ಆಶ್ಚರ್ಯವಿಲ್ಲ. ಯಾಕೆಂದರೆ ನಾನು ಗುನುಗಿದ್ದೂ ಅದೇ ಹಾಡನ್ನೇ. ಟಿವಿಯೊಳಗಿಂದ, ಎಫ್ ಎಂನೊಳಗಿಂದ,ಕಾರು ಸ್ಟೀರಿಯೋದೊಳಗಿಂದ ಮತ್ತು ತನ್ನಷ್ಟಕ್ಕೆ ತಾನು ಹಾಡಿಕೊಳ್ಳುವ ಪಕ್ಕದ ಮನೆಯ ಹುಡುಗಿಯ ಕಂಠದಿಂದ ತೇಲಿಬರುತ್ತಲೇ ಇರುವ ಮಳೆಗೀತಸಂಗೀತವನ್ನು ಸವಿಯದವರಿಲ್ಲ.

ಮೂವತ್ತು ವರ್ಷಗಳಿಂದ ಅಕ್ಷರ ವ್ಯವಸಾಯದಲ್ಲಿ ನಿರತರಾದ ಕಾಯ್ಕಿಣಿ 2007ರಲ್ಲಿ ಒಮ್ಮೆಗೆ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದು ಇತಿಹಾಸ. ಮುಂಗಾರು ಮಳೆಯಿಂದ ಅವರ ಚಿತ್ರಗೀತೆಗಳ ಅಶ್ವಮೇಧ ಆರಂಭವಾಗಿ ಕಳೆದ ಆರು ತಿಂಗಳ ಅವಧಿಯಲ್ಲಿ ಅವರು ಬರೆದ ಹಾಡುಗಳ ಸಂಖ್ಯೆ 50ದಾಟಿ ಮುಂದೆ ಸಾಗಿದೆ. ಅವರು ಇತ್ತೀಚೆಗೆ ರವಿ ಬೆಳಗೆರೆ ನಿರ್ದೇಶನದ ಮುಖ್ಯಮಂತ್ರಿ ಐ ಲವ್ ಯು ಚಿತ್ರಕ್ಕೆ ಹಾಡು ಬರೆಯುತ್ತಿದ್ದಾರೆ.

ಆ ಗೀತೆ ಪ್ರೇಮಗೀತೆಯೋ, ವಿರಹಗೀತೆಯೋ, ರೋಷಉಕ್ಕಿಸುವ ಗೀತೆಯೋ ತಿಳಿದುಬಂದಿಲ್ಲ. ಏಕೆಂದರೆ ಐ ಲವ್ ಯು ಚಿತ್ರದಲ್ಲಿ ನಾಯಕ ಕುಮಾರನಿಗೆ ಮದುವೆ ಆಗಿರುತ್ತದೆ. ಸಾಮಾಜಿಕ ಕ್ರಾಂತಿಯ ಕನಸನ್ನು ಕಾಣುತ್ತಿರುವಾಗ ಆತ ಆಗಾಗ ಬಿಡುವು ಮಾಡಿಕೊಂಡು ಮಾಯಾಂಗನೆಯೊಬ್ಬಳ ಸಂಗಕ್ಕೆ ಬೀಳುತ್ತಾನೆ. ನಾಯಕ ವಿಜಯ್ ಮತ್ತು ಪ್ರೇಯಸಿ ಭಾವನಾ ವಿಧಾನಸೌಧದ ಹಿಂದುಗಡೆಯಿರುವ ನೆಹರು ಪ್ರತಿಮೆಯನ್ನು ಸುತ್ತುವ ಹಾಡಿಗೆ, ಕಾಯ್ಕಿಣಿಯವರ ಪ್ರೇಮಗೀತೆ ಡ್ಯೂಯೆಟ್ ಆಗಿ ಫಿಟ್ ಆಗುವುದಾದರೆ ಎಂಥ ಮಧುರ ಯಾತನೆ? ಆಗಬಹುದಾ ಜಯಂತ್ ? ಪ್ಲೀಸ್ ಹೇಳಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada