»   » ಮುಂದಿನ ಬಿಡುಗಡೆ : ಉಪ್ಪಿ ‘ಗೋಕರ್ಣ’

ಮುಂದಿನ ಬಿಡುಗಡೆ : ಉಪ್ಪಿ ‘ಗೋಕರ್ಣ’

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಸದ್ದೇ ಇಲ್ಲದೆ ಉಪೇಂದ್ರ ಅಭಿನಯದ ಇನ್ನೊಂದು ಚಿತ್ರ ಡಬ್ಬಿಂಗ್‌ ಹಂತಕ್ಕೆ ಬಂದು ನಿಂತಿದೆ. ಚಿತ್ರದ ಹೆಸರು ‘ಗೋಕರ್ಣ’. ಇದು ಶಿವನ ಆತ್ಮಲಿಂಗ ಇರುವ ಊರು ಗೋಕರ್ಣ ಕುರಿತ ಕಥೆಯಲ್ಲ ಎಂಬುದು ಉಪೇಂದ್ರ ಕೊಡುವ ಮೊದಲ ಸ್ಪಷ್ಟೀಕರಣ.

ಸ್ವಂತ ಕಥೆಗಳ ವಿಷಯದಲ್ಲಿ ಉಪೇಂದ್ರ ಖಾಲಿಯಾಗಿದ್ದಾರೆ ಎಂಬ ಆರೋಪಕ್ಕೆ ‘ಗೋಕರ್ಣ’ ಮತ್ತೊಂದು ಸಮರ್ಥನೆ. ತಮಿಳಿನ ‘ಅಣ್ಣಾ ಮಲೈ’ ಚಿತ್ರವನ್ನು ಕನ್ನಡದ ನೇಟಿವಿಟಿಗೆ ಹೊಂದಿಸಿಕೊಂಡಿದ್ದೇವೆ ಅಂತ ನಿರೀಕ್ಷಣಾ ಜಾಮೀನು ತೋರಿಸಿಕೊಂಡೇ ಮಾತಿಗೆ ಕೂರುವ ಉಪೇಂದ್ರ ಈ ಚಿತ್ರದ ಅನೇಕ ವಿಶೇಷಗಳನ್ನು ಹೇಳುತ್ತಾ ಕೂರುತ್ತಾರೆ. ಆ ವಿಶೇಷಗಳನ್ನು ಹೀಗೆ ಹೇಳಬಹುದು-

  • ಉಪ್ಪಿ ಸೋದರ ಸುಧೀಂದ್ರ ಕುಮಾರ್‌ ಈ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ಇವರ ಪ್ರೊಡಕ್ಷನ್‌ ಕಂಪನಿಯ ಹೆಸರು- ಆನೇಗುಡ್ಡ ವಿನಾಯಕ ಪ್ರೊಡಕ್ಷನ್ಸ್‌. ಅದರಲ್ಲಿ ನಿಮ್ಮ ಹಣ ಎಷ್ಟು ಅಂತ ಕೇಳಿದರೆ ಉಪ್ಪಿ ನಕ್ಕು ಸುಮ್ಮನಾಗುತ್ತಾರೆ.
  • ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಸ್‌.ರಮೇಶ್‌ ಈ ಚಿತ್ರದ ಮೂಲಕ ನಟರಾಗಿದ್ದಾರೆ. ಅವರ ನಟನೆಯನ್ನು ಉಪ್ಪಿ ಬಹುವಾಗಿ ಮೆಚ್ಚಿಕೊಂಡಿರುವುದು ಅನೇಕರಿಗೆ ಅಸಮಾಧಾನದ ವಿಷಯವಾಗಿದೆ.
  • ಬಂಗಾರಪ್ಪನವರ ಇನ್ನೊಂದು ಕೂಸು ಮಧು ಬಂಗಾರಪ್ಪ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.
  • ‘ಉಪ್ಪಿಯ ಜೊತೆ ನಟಿಸಿದರೆ ನೀನು ಕೆಟ್ಟಂತೆ’ ಎಂಬ ಅಪ್ಪನ ಆಣತಿಯನ್ನು ಬದಿಗಿಟ್ಟು, ರಕ್ಷಿತಾ ತೆಲುಗು ದೇಶದಿಂದ ಇಲ್ಲಿಗೆ ಪಾದ ಬೆಳಿಸಿ ಉಪ್ಪಿ ನಾಯಕಿಯಾಗಿ ನಟಿಸಿದ್ದಾರೆ.
  • ನಿರ್ಮಾಪಕ ಶೈಲೇಂದ್ರ ಬಾಬು ಹೊರತುಪಡಿಸಿದಂತೆ ಕುಟುಂಬ ಚಿತ್ರದ ತಂಡವೇ ಇಲ್ಲಿ ಕೆಲಸ ಮಾಡಿದೆ. ಎ.ನಂಜುಂಡ ಭಾರೀ ಪಂಚ್‌ ಡೈಲಾಗ್‌ಗಳನ್ನು ಬರೆದಿದ್ದಾರಂತೆ. ನಾಗಣ್ಣ ನಿರ್ದೇಶನ ಕುಟುಂಬ ಚಿತ್ರದ ತಲೆ ಮೇಲೆ ಹೊಡೆದ ಹಾಗಿದೆಯಂತೆ. ಜಿ.ಪಿ.ರಾಜರತ್ನಂ ‘ಅವರ ಬ್ರಹ್ಮ ನಿಂಗೆ ಜೋಡಿಸ್ತಾನಿ ಎಂಡ ಮುಟ್ಟಿದ್‌ ಕೈನ’ ಹಾಡನ್ನು ಸಿನಿಮಾಗೆ ಮಟ್ಟು ಹಾಕಿ ಕೊಟ್ಟಿದ್ದಾರೆ ಗುರುಕಿರಣ್‌. 150 ಮಂದಿಯ ಜೊತೆ ಉಪ್ಪಿಗೆ ಏಕಕಾಲದಲ್ಲಿ ಹೊಡೆದಾಡುವ ವಿಲಕ್ಷಣ ಅವಕಾಶ ಕಲ್ಪಿಸಿ, ತಾನು ಚರಿತ್ರೆ ನಿರ್ಮಿಸಿದ್ದೇನೆ ಎಂದು ಬೀಗುತ್ತಿದ್ದಾರೆ ಸಾಹಸ ನಿರ್ದೇಶಕ ಥ್ರಿಲ್ಲರ್‌ ಮಂಜು !
‘ಗೋಕರ್ಣ’ ಚಿತ್ರ ಪ್ರೇಕ್ಷಕರಿಗೆ ಕ್ರಿಸ್‌ಮಸ್‌ ಉಡುಗೊರೆ ಎಂದು ಹೇಳುವ ಮೂಲಕ ಉಪ್ಪಿ ಕ್ರಿಶ್ಚಿಯನ್‌ ಅಭಿಮಾನಿಗಳನ್ನೂ ಸಂಪಾದಿಸಿಕೊಳ್ಳುವ ಇರಾದೆ ತೋಡಿಕೊಂಡಿದ್ದಾರೆ. ‘ಎಲ್ಲ ಸರಿ, ಇನ್ನೂ ಯಾಕೆ ಸ್ವಾಮಿ ರೀಮೇಕು’ ಅಂತ ಉಪ್ಪಿಯನ್ನು ಕೆಣಕಿದರೆ, ‘ಸ್ವಲ್ಪ ದಿವಸ ಸುಮ್ಮನಿರಿ, ಆಮೇಲೆ ನೋಡಿ’ ಅಂತ ಬಾಯಿ ಮುಚ್ಚಿಸುತ್ತಾರೆ.
Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada