»   » ಈಗ ಸಿಮ್ರಾನ್‌ ಟೈಮೆಲ್ಲಾ ಕಮಲ್‌ಗೇ ಮೀಸಲಾಗಿದೆ

ಈಗ ಸಿಮ್ರಾನ್‌ ಟೈಮೆಲ್ಲಾ ಕಮಲ್‌ಗೇ ಮೀಸಲಾಗಿದೆ

Posted By: Staff
Subscribe to Filmibeat Kannada

*ಶಮ್ಮಿ, ಚೆನ್ನೈ

ಮನೆಯಂಗಳದಲ್ಲಿ ಸಿಮ್ರಾನ್‌ ತಲೆ ಮೇಲೆ ಕೈಹೊತ್ತು ಕೂರಬೇಕಾದ ಪರಿಸ್ಥಿತಿ ಬಂದಿದೆ ಅನ್ನುತ್ತಿದೆ ಚೆನ್ನೈನ ಸಿನಿಮೋದ್ಯಮ.

ಅದಕ್ಕೆ ಕಾರಣವಿಷ್ಟೆ- ಸಿಮ್ರಾನ್‌ಗೆ ಹೊರಗಡೆ ಕೆಲಸ ಕಡಿಮೆ. ಯಾಕೆಂದರೆ, ಕೈಲಿರುವ ಸಿನಿಮಾಗಳೇ ಅಷ್ಟು. ಇನ್ನು ಮನೆಯಲ್ಲಿ ಕೂತರೆ ಕಾಡುವುದು ಸದಾ ರಿಂಗಿಸುವ ಫೋನು. ಈ ಫೋನಲ್ಲಿ ಬರುವ ಕರೆಗಳಲ್ಲಿ ಬಹುತೇಕ ಸಿಮ್ರಾನ್‌ಗೆ ಅಪ್ರಿಯವಾದವು. ನೆಂಟರಿಷ್ಟರು ಕರೆ ಮಾಡಿದರೆ, 'ಕಮಲ್‌ ಜೊತೆ ಯಾಕೆ ಈಗಲೂ ಓಡಾಡಿ ಹಾಳಾಗ್ತೀಯ" ಅಂತ ತರಾಟೆಗೆ ತೆಗೆದುಕೊಳ್ಳುತ್ತಾರೆ. ಸಿನಿಮಾ ನಿರ್ಮಾಪಕರು ಮಾಡಿದರೆ, 'ನಿಮ್ಮ ಕಾಲ್‌ಶೀಟನ್ನು ಕ್ಯಾನ್ಸಲ್‌ ಮಾಡಿದ್ದೇವೆ. ನಮಸ್ಕಾರ" ಅನ್ನುತ್ತಾರೆ.

'ಪಂಬಲ್‌ ಕೆ ಸಂಬಂಧಂ" ತಮಿಳು ಚಿತ್ರದ ನಂತರ ಸಿಮ್ರಾನ್‌ ಹಾಗೂ ಕಮಲ್‌ ಇನ್ನೂ ಎರಡು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದರು. ಆಗ ತುಟ್ಟ ತುದಿಯಲ್ಲಿದ್ದ ಸಿಮ್ರಾನ್‌ ಯಶಸ್ಸಿನ ಗ್ರಾಫಿಕ್ಸು, ಈ ಮೂರೂ ಚಿತ್ರಗಳ ನಂತರ ಪಾತಾಳ ತೋರತೊಡಗಿತು. ತೆಲುಗು ಸಿನಿಮಾ ಕೂಡ 'ನಿನ್ನ ಸಹವಾಸವೇ ಬೇಡಮ್ಮಾ" ಅಂದಿತು. ಈಗ ಸಿಮ್ರಾನ್‌ ಕೈಲಿರುವ ಎರಡೋ ಮೂರೋ ಚಿತ್ರಗಳೂ ಕೂಡ ಅಂಥಾ ಹೇಳಿಕೊಳ್ಳುವ ಬ್ಯಾನರ್‌ಗಳದ್ದಲ್ಲ.

ಹಿಂದೆ ರಾಜು ಸುಂದರಂ ಜೊತೆಗೆ ಲಲ್ಲೆ ಹೊಡೆಯುತ್ತಿದ್ದಾಳೆ ಎಂಬ ಸುದ್ದಿ ಹಬ್ಬಿದಾಗಲೂ ಸಿಮ್ರಾನ್‌ ಯಶಸ್ಸಿಗೆ ಏನೇನೂ ಅಡ್ಡಿಯಾಗಲಿಲ್ಲ. ಆದರೆ ಕಮಲ್‌ ಸಹವಾಸ ಮಾಡಿದ ಮೇಲೆ ಸಿಮ್ರಾನ್‌ ವರಸೆಯೇ ಬದಲಾಯಿತು ಅನ್ನುತ್ತಿದೆ ಚಿತ್ರೋದ್ಯಮ. ಇದ್ದಕ್ಕಿದ್ದಂತೆ ಶೂಟಿಂಗ್‌ಗೆ ಬರೋಕಾಗಲ್ಲ ಅನ್ನುವುದು, ಶೆಡ್ಯೂಲ್‌ ನಡುವೆಯೇ ಕೈಕೊಟ್ಟು ಕಮಲ ಹಾಸನ್‌ ಜೊತೆ ತಿರುಗುವುದು, ಎಂಥದೋ ದೊಡ್ಡ ಕೆಲಸದ ನೆಪವೊಡ್ಡಿ ಕಮಲ್‌ ಜೊತೆ ಹೊಟೇಲಲ್ಲಿ ಕೂತು ಸಿಕ್ಕಿ ಬೀಳುವುದು ಮಾಮೂಲಾದ ಮೇಲೆ ನಿರ್ಮಾಪಕರು ಎಚ್ಚೆತ್ತುಕೊಂಡರು. ಅದಕ್ಕೇ ಈಗ ಸಿಮ್ರಾನ್‌ ಸಾಕಷ್ಟು ಬಿಡುವಾಗಿದ್ದಾರೆ.

ಈ ಬಿಡುವಿನ ವೇಳೆಯನ್ನು ಅವರು ಕಮಲ ಹಾಸನ್‌ ಜೊತೆ ನಿಸೂರಾಗಿ ಕಳೆಯುತ್ತಿದ್ದಾರಂತೆ. ಇಬ್ಬರೂ ಕೈ ಕೈ ಹಿಡಿದುಕೊಂಡು ಸುತ್ತಾಡುವ ದೃಶ್ಯ ಈಗ ತಮಿಳರಿಗೆ ಮಾಮೂಲು. ಈ ಬೆಸೆದ ಹೊಸ ಸಂಬಂಧದಿಂದ ಸಿಮ್ರಾನ್‌ ಹಾಗೂ ಆಕೆಯ ಅಮ್ಮನ ನಡುವಿನ ಕರಳು ಬಳ್ಳಿಯ ಸಂಬಂಧ ಕಳಚಿದೆಯಂತೆ. ಮಗಳ ಹೆಸರೆತ್ತಿದರೆ ಸಾಕು, ಸಿಮ್ರಾನ್‌ ಅಮ್ಮ ಕೆಂಡಾಮಂಡಲಾಗುತ್ತಿರುವುದೇ ಇದಕ್ಕೆ ಸಾಕ್ಷಿ!

English summary
Shimmering Simran under strain !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada