»   » ರೀಮೇಕು ಹೇಗಿರಬೇಕು? ಹೀಗಿರಬೇಕು!

ರೀಮೇಕು ಹೇಗಿರಬೇಕು? ಹೀಗಿರಬೇಕು!

Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೋ
‘ನಾನು ಕಮಲ ಹಾಸನ್‌ ಅವರನ್ನ ಸ್ವಲ್ಪವೂ ಅನುಕರಿಸಿಲ್ಲ. ಅದು ನನ್ನ ಒರಿಜಿನಲ್‌ ನಟನೆ. ಕಮಲ ಹಾಸನ್‌ ಅವರನ್ನ ನೆನಪಲ್ಲಿಟ್ಟುಕೊಂಡು ನೀವು ಚಿತ್ರ ನೋಡಬೇಡಿ. ಅದು ನನ್ನ ನಟನೆ ಅನ್ನೋದನ್ನ ಗಮನಿಸಿ...’

- ರೀಮೇಕು ಮಾಡುವುದನ್ನು ದೊಡ್ಡ ಸಾಹಸ ಅಂತಲೇ ಸದಾ ಹೇಳುವ ಸುದೀಪ್‌ ತಮ್ಮ ಹೊಸ ಚಿತ್ರ ‘ಸ್ವಾತಿ ಮುತ್ತು’ ವಿಷಯದಲ್ಲಿ ನಿರೀಕ್ಷಣಾ ಜಾಮೀನು ಕೇಳುವವರಂತೆ ಮಾತಾಡುತ್ತಾರೆ. ಅವರ ಮಾತನ್ನು ಡಿ.ರಾಜೇಂದ್ರ ಬಾಬು ಸಮರ್ಥಿಸುತ್ತಾ ಭಾಷಣ ಹೊಡೆಯುತ್ತಾರೆ. ರಾಮಾಯಣ ಮಹಾಭಾರತದ ಕಥೆ ಎಷ್ಟು ಹಳೆಯದಾದರೂ, ಹೊಸದಾಗಿ ತೋರಿಸದರೆ ಅದು ರೀಮೇಕಾ ಅಂತ ಪೆದ್ದು ಮಾತಾಡಿ ದೊಡ್ಡ ಮಾತಾಡಿದೆ ಎಂದು ಭಾವಿಸುತ್ತಾರೆ.

ಗಮನಿಸಿ- ಹುಚ್ಚ ಗೆದ್ದಿತು. ವಾಲಿ ಸುಮಾರಾಗಿ ಓಡಿತು. ಕಿಚ್ಚ ತಾಚೊಂಡಿತು. ಅವಾರ್ಡ್‌ ತಂದುಕೊಟ್ಟ ನಂದಿಯೂ ತೋಪು. ಚಂದು ಚಿತ್ರದ ಸೊಂಟದ ಹಾಡು ಬಿಟ್ಟರೆ ಬೇರೆ ಏನೂ ಕ್ಲಿಕ್ಕಾಗಲಿಲ್ಲ. ಹಾಗಾಗಿ ಸುದೀಪ್‌ ಅಭಿನಯದ ಸ್ವಮೇಕ್‌ ಚಿತ್ರಗಳ ಬಗೆಗೆ ಖುದ್ದು ಅವರಿಗೇ ಈಗ ವಿಶ್ವಾಸವಿಲ್ಲ. ‘ಇವತ್ತು ಜನ ಐವತ್ತು ವರ್ಷ ಹಿಂದಿನ ಚಿತ್ರದ ಮೇಲೆ ಕಣ್ಣು ಹಾಕ್ತಿದಾರೆ ಸ್ವಾಮಿ’ ಅಂತ ಉಪೇಂದ್ರ ಕುರಿತು ವ್ಯಂಗ್ಯವಾಡುವ ಸುದೀಪ್‌, ಗೆದ್ದಿರುವ ಕಮಲ ಹಾಸನ್‌ ಚಿತ್ರಗಳತ್ತಲೇ ಯಾಕೆ ಕಣ್ಣು ಹಾಯಿಸಿದರು? ಉತ್ತರ-ಯಶಸ್ಸಿನ ಸಿದ್ಧ ಸೂತ್ರಗಳು ಅವರಿಗೆ ರೆಡಿಮೇಡಾಗೇ ಬೇಕು !

‘ಸ್ವಾತಿ ಮುತ್ಯಂ ಅಪ್ಪನಿಗೆ ಇಷ್ಟವಾಗಿತ್ತು. ಅದರಲ್ಲಿ ಭಾವನಾತ್ಮಕ ಸೆಳಕು ಇದೆ. ಆ್ಯಕ್ಷನ್‌ ಇಲ್ಲ. ಕತೆಯೇ ದೊಡ್ಡ ತಾಕತ್ತು. ಅಬ್ಬರದ ಹಾಡಿಲ್ಲ, ಜೋರು ಕುಣಿತ ಇಲ್ಲ. ಹಾಗಿದ್ದೂ ಅದು ಗೆಲ್ಲುತ್ತೆ ಎಂಬುದು ನನ್ನ ನಿರೀಕ್ಷೆ. ಬರೀ 2 ತಿಂಗಳು 5 ದಿನದಲ್ಲಿ ಚಿತ್ರ ಮುಗಿಸಿದ್ದೇನೆ. ಅಮ್ಮನ ಹುಟ್ಟುಹಬ್ಬಕ್ಕೆ ಇದು ನನ್ನ ಗಿಫ್ಟ್‌’ ಅಂತ ನಗುವ ಸುದೀಪ್‌ಗೆ ಸ್ವಾತಿ ಮುತ್ತು ಹೊಳೆಯುತ್ತದೋ ಇಲ್ಲವೋ ಎಂಬ ಬಗೆಗೆ ಸಣ್ಣ ಅನುಮಾನ ಇದ್ದೇ ಇದೆ. ಯಾಕೆಂದರೆ, ಇದೇ ಚಿತ್ರ ಹಿಂದಿಯಲ್ಲಿ ಬಾರೀ ಸೋಲುಂಡಿತ್ತು. ಅನಿಲ್‌ ಕಪೂರ್‌ ಚೆನ್ನಾಗಿ ನಟಿಸಿಯೂ ಚಿತ್ರ ಫೇಲಾಗಿತ್ತು.

ಸ್ವಾತಿಮುತ್ತು ಅಕ್ಷರಶಃ ಕಾಪಿ ಚಿತ್ರ. ಹಾಡುಗಳ ಸಾಲಿನ ಅರ್ಥ, ಟ್ಯೂನುಗಳು, ಸಂಭಾಷಣೆ, ಮ್ಯಾನರಿಸಂ- ಸಕಲವೂ ಅಚ್ಚಚ್ಚು ರೀಮೇಡ್‌. ಆದರೆ ಕಮಲ್‌ ಕೈಯಿ ಮೋಟು, ಸುದೀಪ್‌ದು ಉದ್ದುದ್ದ ಎಂಬುದು ಮಹತ್ವದ ವ್ಯತ್ಯಾಸ ! ಕೊಡೋದು ಕೊಟ್ಟರು, ಅಮ್ಮನ ಹುಟ್ಟುಹಬ್ಬಕ್ಕೆ ರೀಮೇಕ್‌ ಗಿಫ್ಟ್‌ ಬಿಟ್ಟರೆ ಸುದೀಪ್‌ಗೆ ಬೇರೇನೂ ಹೊಳೆಯಲೇ ಇಲ್ಲವೇ?

ಒಂದು ವೇಳೆ ಸ್ವಾತಿ ಮುತ್ತು ಗೆದ್ದರೆ ನಾಯಗನ್‌ ಚಿತ್ರದ ರೀಮೇಕೂ ಬೇಗ ತೆರೆ ಕಾಣುವುದಂತೂ ದಿಟ. ಸದ್ಯಕ್ಕೆ ಚಿತ್ರದ ಕಲೆಕ್ಷನ್‌ ಲೆಕ್ಕಾಚಾರದಲ್ಲಿ ಸುದೀಪ್‌ ತಮ್ಮ ಕುರುಚಲು ಗಡ್ಡ ಕೆರೆದುಕೊಳ್ಳುತ್ತಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada