twitter
    For Quick Alerts
    ALLOW NOTIFICATIONS  
    For Daily Alerts

    ಎಂಟು ವರ್ಷಕ್ಕೆ ದಂಟಾದ ಚಿತ್ರಲೋಕ.ಕಾಂ

    By Staff
    |

    ಕನ್ನಡ ಚಿತ್ರರಂಗದ ಆಗುಹೋಗುಗಳ ಕುರಿತು ಆಂಗ್ಲಭಾಷೆಯಲ್ಲಿ ಮಿತವಾಗಿ ಮಾಹಿತಿ ಛಾಪಿಸುವ ಚಿತ್ರಲೋಕ ಅಂತರ್ಜಾಲತಾಣಕ್ಕೆ ಎಂಟು ವರ್ಷ ತುಂಬಿತು. ಈ ಸಂದರ್ಭದ ಸವಿನೆನಪಿಗಾಗಿ ಜೂನ್ 26ರ ಗುರುವಾರ ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಸಂತಸಕೂಟ ಏರ್ಪಡಿಸಲಾಗಿತ್ತು. ಕನ್ನಡ ಚಿತ್ರ ಕರ್ಮಿಗಳು, ಕಲಾವಿದರು ಮತ್ತು ತಂತ್ರಜ್ಞರ ಸಂದರ್ಶನ, ಕನ್ನಡ ಚಿತ್ರಗಳ ಮೈಕ್ರೋಸೈಟ್, ಫೋಟೋ ಗ್ಯಾಲರಿ ಹಾಗೂ ಗಾಂಧೀನಗರದಿಂದಾಯ್ದ ಸುದ್ದಿತುಣುಕುಗಳನ್ನು ಯಥಾವಕಾಶ ಪ್ರಕಟಿಸುವುದು ಈ ಡಾಟ್ ಕಾಂ ತಾಣದ ಹೂರಣ. ಚಿತ್ರೋದ್ಯಮದ ಪ್ರೋತ್ಸಾಹದ ಕೊರತೆಯ ನಡುವೆಯೂ "ಅಂತೂ ಇಂತೂ ಕನ್ನಡ ಚಿತ್ರಗಳ ಈ ಇಂಗ್ಲಿಷ್ ವೆಬ್‌ಸೈಟು ಎಂಟು ವರ್ಷಕ್ಕೆ ದಂಟಾಯಿತು' ಎಂಬ ಗಾದೆಗೆ ದನಿಯಾಯಿತು.

    ಮೂಲತಃ ಛಾಯಾಚಿತ್ರಗಾರರಾದ ಕೆ.ಎಂ. ವೀರೇಶ್ ಈ ತಾಣವನ್ನು ಕೈಹಿಡಿದು ನಡೆಸಿಕೊಂಡು ಬಂದಿರುವರು. ಅವರಿಗೆ ಇದು ಏಕಲವ್ಯನ ಕಾಯಕ. ಇತ್ತೀಚಿನ ದಿನಗಳಲ್ಲಿ ತಮ್ಮ ಕಾರ್ಯ ಬಾಹುಳ್ಯವನ್ನು ವಿಸ್ತರಿಸಿಕೊಂಡಿರುವ ವೀರೇಶ್, ಚಿತ್ರ ನಿರ್ಮಾಣಕ್ಕೂ ಕೈಹಾಕಿದರು. ತಮ್ಮ ಜತೆಗಾರರ ಜತೆ ಒಬ್ಬರಾಗಿ ಅವರು ನಿರ್ಮಿಸಿದ 'ಕಾಡಬೆಳದಿಂಗಳು' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯೂ ಲಭಿಸಿತು.

    ಕನ್ನಡ ಚಿತ್ರ ನಿರ್ಮಾಣ ಮತ್ತು ಪ್ರಶಸ್ತಿ ಪ್ರಾಪ್ತವಾದ ಉತ್ಸಾಹ ಅವರನ್ನು ಹೊಸಹೊಸ ಯೋಜನೆಗಳತ್ತ ಸೆಳೆದಿದೆ. ಕನ್ನಡ ಚಿತ್ರಗಳನ್ನು ಕನ್ನಡ ನೆಲದಿಂದಾಚೆಗೆ, ವಿದೇಶಿ ಕನ್ನಡಿಗರಿಗೆ ತಲುಪಿಸುವ ಚಿತ್ರಹಂಚಿಕೆ ಕೆಲಸಕ್ಕೂ ಅವರೀಗ ಕೈಹಾಕಿದ್ದಾರೆ. ಕನ್ನಡ ಚಿತ್ರಗಳನ್ನು ವಿದೇಶದಲ್ಲಿ ಪ್ರದರ್ಶಿಸುವ ಉದ್ಯಮ ನಮ್ಮಲ್ಲಿ ಬಲವಾಗಿ ಬೇರು ಊರಿಲ್ಲ. ಹಾಗಾಗಿ ಆ ಸಾಹಸ ಲಾಭದಾಯಕವಲ್ಲ ಎಂಬ ಅಳುಕಿದೆ. ಇದಕ್ಕೆ ಕಾರಣಗಳು ಹಲವಾರಿವೆ. "ಆದಾಯ ಕಡಿಮೆ, ತುಂಬಾ ಲಾಸ್ ಆಗತ್ತೆ ಸಾರ್, ಅಂತೂ ಇಂತೂ ಕನ್ನಡ ಚಿತ್ರಗಳ ಹಂಚಿಕೆಯನ್ನು ಎಂಟು ವರ್ಷಗಳಿಂದ ಅಮೆರಿಕಾದಲ್ಲಿ ಮಾಡುತ್ತಾ ಬಂದಿದ್ದೇನೆ"ಎನ್ನುತ್ತಲೇ ಇರುತ್ತಾರೆ ಅಮೆರಿಕಾ ನಿವಾಸಿ, ಚಿರಾಗ್ ಎಂಟರ್‌ಟೇನರ್ಸ್‌ನ ಮಾಲಿಕ ಕೆ.ಎಸ್. ಪ್ರಸಾದ್.

    ಹೊಸ ನೆಲದಲ್ಲಿ , ಅಪರಿಚಿತ ಹುಲ್ಲುಗಾವಲಿನಲ್ಲಿ ಹೆಜ್ಜೆ ಹಾಕಲು ಆರಂಭಿಸಿರುವ ವೀರೇಶ್ ಅವರಿಗೆ ಚಿತ್ರಹಂಚಿಕೆ ಲಾಭವಾಗದಿದ್ದರೂ ಸಹ ನಷ್ಟವಾಗದಿರಲಿ ಎಂದು ಅವರ ಅನೇಕ ಅಭಿಮಾನಿಗಳು ಆಶಿಸುತ್ತಾರೆ. ಇದೇ ವೇಳೆ, ಹೊಸ ಯೋಜನೆಗಳ ಗದ್ದಲದಲ್ಲಿ ಛಾಯಾಗ್ರಹಣ ಕಲೆಯನ್ನು ಅವರು ಜತನವಾಗಿ ಕಾಪಾಡಿಕೊಂಡು ಬರುತ್ತಾರೆಂಬ ಇಷ್ಟವನ್ನು ಅವರ ಛಾಯಾಚಿತ್ರಕಲೆಯ ಸೂಕ್ಷ್ಮಗಳನ್ನು ಮೆಚ್ಚಿಕೊಂಡಿರುವ ಕಲಾಭಿಮಾನಿಗಳು ವ್ಯಕ್ತಪಡಿಸುತ್ತಾರೆ. ಮೇಲಾಗಿ, ಹೊಸಹೊಸ ವಿಷಯ ವಿಚಾರಗಳಿಲ್ಲದೆ ಸಣ್ಣಗೆ ಸೊರಗುತ್ತಿರುವ, ಎಂಟು ವರ್ಷ ಪೂರೈಸಿರುವ ಅವರ ಅಂತರ್ಜಾಲ ತಾಣ ಕನ್ನಡ ಚಲನಚಿತ್ರೋದ್ಯಮದ ಕನ್ನಡಿಯಾಗಿ ರೂಪುಗೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿ ಎಂದು ಹಾರೈಸಿದ್ದಾರೆ.

    ಇಲ್ಲಿ ನೀವು ನೋಡುತ್ತಿರುವ ಸುದ್ದಿಚಿತ್ರ ಚಿತ್ರಲೋಕದ 8ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಕ್ಲಿಕ್ಕಿಸಿದ್ದು. ಈ ಸಂದರ್ಭದಲ್ಲಿ ಚಿತ್ರಲೋಕ ವಿನ್ಯಾಸ ಮಾಡಿರುವ ಉಪೇಂದ್ರ ಅಭಿನಯದ 'ಬುದ್ದಿವಂತ' ಚಿತ್ರದ ಇಂಟರ್ನೆಟ್ ಬ್ರೋಚರ್ ಅನ್ನು ಉತ್ತರ ಅಮೆರಿಕಾ ಕನ್ನಡ ಕೂಟಗಳ ಆಗರದ (ಅಕ್ಕ) ಆಶ್ರಯದಲ್ಲಿ ಶಿಕಾಗೋದಲ್ಲಿ ನಡೆಯಲಿರುವ ವಿಶ್ವಕನ್ನಡ ಸಮ್ಮೇಳನದ ಸಂಯೋಜನಾಧಿಕಾರಿ ರಾಘವೇಂದ್ರರಾಜು (ಬಿಸ್ಕಟ್ ಬ್ಲೇಜರ್) ಬಿಡುಗಡೆ ಮಾಡಿದರು. ನಗೆ ಬೀರುತ್ತಿರುವ ಕರಿಕುರುಚಲು ಗಡ್ಡಧಾರಿ ಕೆ.ಎಂ. ವೀರೇಶ್.

    Friday, April 26, 2024, 0:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X