twitter
    For Quick Alerts
    ALLOW NOTIFICATIONS  
    For Daily Alerts

    ಸಿಂಹ ಅಂತ ಹೆಸರಿಟ್ಕೊಂಡು ನಾಯಿಗೆ ಹೆದರೋದಾ?

    By Super
    |

    CR Simha
    ಇದು 1999ರ ಮಾತು. ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣ, ವಿ. ಸೋಮಶೇಖರ್ ನಿರ್ದೇಶನದ ಪರಶುರಾಮ್' ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ತನ್ನ ಕುಟುಂಬದವರ ಸಾವಿಗೆ ಕಾರಣರಾಗಿದ್ದ ಖಳನಾಯಕರ ಮೇಲೆ ನಾಯಕ ರಾಜ್ ಕುಮಾರ್ ಸೇಡು ತೀರಿಸಿಕೊಳ್ಳುವ ದೃಶ್ಯದ ಚಿತ್ರೀಕರಣವನ್ನು ಬೆಂಗಳೂರಿನ ಅರಮನೆ ಹಿಂಭಾಗದಲ್ಲಿ ನಡೆಸಲುನಿರ್ಧರಿಸಲಾಗಿತ್ತು. ನಾಯಕ, ಖಳನಾಯಕರನ್ನೆಲ್ಲ ಕಟ್ಟಿಹಾಕಿ ಅವರನ್ನು ಜೀಪಿನಲ್ಲಿ ತುಂಬಿಕೊಂಡು ಬರುತ್ತಾನೆ. ನಂತರ ಅವರ ಮೇಲೆ ನಾಯಿಯನ್ನು ಛೂ ಬಿಡುತ್ತಾನೆ. ನಾಯಿ, ಒಬ್ಬರ ನಂತರ ಒಬ್ಬರನ್ನು ಕಚ್ಚಿ, ಪರಚಿ, ಕಚ್ಚಿಸಾಯಿಸುತ್ತದೆ. ಇದು ಸನ್ನಿವೇಶ.

    ಈ ಸಿನಿಮಾಕ್ಕೆಂದೇ ಮದ್ರಾಸಿನಿಂದ ನಾಯಿಯೊಂದನ್ನು ಕರೆ ತರಲಾಗಿತ್ತು. ಅದೋ, ಮೈಕೈ ತುಂಬಿಕೊಂಡು ಜೋರಾಗಿತ್ತು. ಆಗಲೇ ಐದಾರು ಚಿತ್ರಗಳಲ್ಲಿ ನಟಿಸಿದ ಹಿನ್ನೆಲೆ ಕೂಡ ಅದಕ್ಕಿತ್ತು. ನಾಯಿಯ ತರಬೇತುದಾರನಿಗೆ ಮೊದಲೇ ಎಲ್ಲ ವಿವರಣೆ ನೀಡಲಾಗಿತ್ತು. ಇಷ್ಟೆಲ್ಲ ಆದ ನಂತರವೂ ಮುನ್ನೆಚ್ಚರಿಕೆಯ ಕ್ರಮವಾಗಿ, ಖಳನಾಯಕ ಪಾತ್ರಧಾರಿಗಳ ಮೈ, ಕೈ,ಕಾಲುಗಳಿಗೆ ಪ್ಯಾಡ್ ಕಟ್ಟಲಾಗಿತ್ತು.

    ಸ್ವಾರಸ್ಯವೆಂದರೆ, ಖಳನಾಯಕರ ವೇಷ ಹಾಕಿಕೊಂಡು ಗೋತಾ ಹೊಡೆಯಬೇಕಿದ್ದವರ' ಪಟ್ಟಿಯಲ್ಲಿ ನಟ ಸಿ.ಆರ್. ಸಿಂಹ ಕೂಡ ಇದ್ದರು. ಅವರಿಗೆ ಸನ್ನಿವೇಶ ವಿವರಿಸಿದ ನಿರ್ದೇಶಕ ವಿ. ಸೋಮಶೇಖರ್- ಕೇಳಿ ಸರ್, ನಾಯಿಯನ್ನು ಛೂ ಬಿಡ್ತಾನೆ. ಅದು ಹಾರಿಬಂದು ಖಳನ ಮೇಲೆ ಬೀಳುತ್ತೆ. ನಂತರ ಮುಖ, ಕಾಲು, ಕೈಯನ್ನೆಲ್ಲ ಕಚ್ಚುತ್ತೆ. ಪರಚುತ್ತೆ. ನಂತರದ ಶಾಟ್‌ನಲ್ಲಿ ಖಳನಾಯಕನ ಮುಖದ ತುಂಬ ರಕ್ತದ ಕಲೆ ಇರೋ ಹಾಗೆ ತೋರಿಸ್ತೇವೆ.

    ಮೊದಲು ನಾಯಿಯಿಂದ ಹಲ್ಲೆಗೆ ಈಡಾಗುವ ಖಳನ ಪಾತ್ರದಲ್ಲಿ ಪೃಥ್ವಿರಾಜ್ ನಟಿಸ್ತಾರೆ. ನಂತರದ್ದು ನಿಮ್ಮ ಸರದಿ' ಎಂದರಂತೆ. ಹೇಳಿ ಕೇಳಿ ಇದು ಮದ್ರಾಸ್ ನಾಯಿ. ಅಪ್ಪಿತಪ್ಪಿ ಕಚ್ಚಿಬಿಟ್ರೆ ಹೊಕ್ಕಳಿನ ಸುತ್ತ ಇಂಜೆಕ್ಷನ್ ಹಾಕಿಸ್ಕೋಬೇಕು. ಇಂಥದೊಂದು ಯೋಚನೆ ಬಂದಾಕ್ಷಣ ಸಿಂಹ ನಿಂತಲ್ಲೇ ಕಂಪಿಸಿದರಂತೆ. ವಿಶೇಷವೆಂದರೆ, ಈ ಸಂಕಟದ ಸಂದರ್ಭದಲ್ಲಿಯೇ ಅವರಿಗೊಂದು ಹೊಸ ಐಡಿಯಾ ಹೊಳೆಯಿತು.

    ತಕ್ಷಣವೇ ನಿರ್ದೇಶಕ ಸೋಮಶೇಖರ್ ಬಳಿ ಹೋಗಿ ಹೇಳಿದರಂತೆ: ಸಾರ್, ಒಂದ್ಸಲ ವಿಲನ್ ಮೇಲೆ ನಾಯಿ ಅಟ್ಯಾಕ್ ಮಾಡಿರುತ್ತೆ ಅಲ್ವ? ಎರಡನೇ ಬಾರಿ ಕೂಡ ಅದನ್ನೇ ರಿಪೀಟ್ ಮಾಡೋದು ಬೇಡ. ಹಾಗೆ ಮಾಡಿದ್ರೆ ನೋಡೋರಿಗೆ ಬೋರ್ ಅನಿಸುತ್ತೆ. ಅದರ ಬದಲಿಗೆ, ನಾಯಿ ಜಂಪ್ ಮಾಡಲಿ. ನಾನು ಹೋ ಎಂದು ಕಿರುಚ್ತೇನೆ. ಮುಂದಿನ ದೃಶ್ಯದಲ್ಲಿ ನಾನು ಸತ್ತಂತೆ ಬಿದ್ದಿರುತ್ತೇನೆ. ಮುಖದ ಮೇಲೆ ನಾಯಿ ಪರಚಿ ಗಾಯವಾದಂತೆ, ರಕ್ತದ ಕಲೆಗಳಿರುವಂತೆ ತೋರಿಸಿಬಿಡಿ'. ಈ ಮಾತು ಮುಗಿದ ವೇಳೆಗೇ ಊಟದ ಬ್ರೇಕ್ ಎಂದು ಘೋಷಿಸಲಾಯಿತು. ಊಟದ ನಂತರ ಈ ಬಗ್ಗೆ ಯೋಚಿಸೋಣ ಎಂದರುಸೋಮಶೇಖರ್.

    ಈ ಇಬ್ಬರ ಮಾತುಕತೆಯನ್ನೂ ದೂರದಿಂದಲೇ ಗಮನಿಸಿದ್ದ ಡಾ. ರಾಜ್ ಊಟ ಮಾಡುವಾಗ ಕೇಳಿದರಂತೆ: ಸಿಂಹ ಅವರೇ, ನಿರ್ದೇಶಕರೊಂದಿಗೆ ಏನೋ ಗಹನವಾಗಿ ಮಾತಾಡ್ತಾ ಇದ್ರಲ್ಲ ಏನು ಸಮಾಚಾರ?' ತಕ್ಷಣವೇ ಸಿಂಹ ಎಲ್ಲವನ್ನೂ ವಿವರಿಸಿದ್ದಾರೆ. ನಾಯಿ ಕಂಡರೆ ವಿಪರೀತ ಹೆದರಿಕೆ ಆಗ್ತಿದೆ ಎಂದು ಹೆಳುವ ಬದಲು ವಿಶೇಷ ಸಲಹೆ ನೀಡಿದ ಸಿಂಹ ಅವರ ತಂತ್ರ' ಅಣ್ಣಾವ್ರಿಗೆ ತಕ್ಷಣ ಅರ್ಥವಾಗಿ ಹೋಗ್ತಿದೆ. ಅವರು ಜೋರಾಗಿ ನಗುತ್ತಾ- ನೋಡಿ ನೋಡಿ, ನೀವು ಸಿಂಹ ಅಂತ ಹೆಸರು ಇಟ್ಕೊಂಡಿದೀರಿ. ಆದರೂ ನಾಯಿಗೆ ಹೆದರೋದಾ?' ಅಂದರಂತೆ.

    ಅದಕ್ಕೆ ಸಿಂಹ-ಸಾರ್, ಬರೀ ಭಯ ಅಲ್ಲ, ಈಗಾಗಲೇ ಗುರ್ರ್‌ಗುರ್ರ್ ಅಂತಿರೋ ಈ ನಾಯಿ ಹಾರಿ ಬಂದು ಮೈಮೇಲೆ ಬಿದ್ದರೆ ಆ ಶಾಕ್‌ಗೆ ಸತ್ತೇ ಹೋಗ್ತೇನೆ. ಇದನ್ನೆಲ್ಲ ಕಂಡರೆ ಸಿಂಹ ಅಂತ ಯಾಕಾದ್ರೂ ಹೆಸರು ಇಟ್ಕೊಂಡೆನೋ ಅನಿಸುತ್ತೆ' ಅಂದರಂತೆ. ಈ ಮಾತಿಗೆ ಇನ್ನಷ್ಟು ನಕ್ಕ ರಾಜ್ ಇದೊಳ್ಳೇ ತಮಾಷೆ ಸಿಂಹ ಅವರೇ. ಆಗಲಿ, ನಿಮ್ಮ ಸಲಹೆಯಂತೆಯೇ ಚಿತ್ರೀಕರಣ ಮಾಡೋಣ' ಎಂದರಂತೆ.

    ಇದನ್ನೇ ನೆನಪಿಸಿಕೊಂಡು ಸಿಂಹ ಹೇಳುತ್ತಾರೆ: ಕಡೆಗೂ ನನ್ನ ಸೂಚನೆಯಂತೆಯೇ ಚಿತ್ರೀಕರಣ ನಡೆಸಿದರು. ಆದರೆ ಅಂದು ಅಣ್ಣಾವ್ರು ಕೇಳಿದ ಪ್ರಶ್ನೆಗೆ ನನ್ನಲ್ಲಿ ಈಗಲೂ ಉತ್ತರವಿಲ್ಲ. ಸಿಂಹ ಅಂತ ಹೆಸರಿಟ್ಕೊಂಡು ನಾಯಿಗೆ ಹೆದರುವುದಾ?' (ಸ್ನೇಹಸೇತು: ವಿಜಯ ಕರ್ನಾಟಕ)

    English summary
    CR Simha explains humorous incident during movie Parashurama with Rajkumar.
    Thursday, February 27, 2014, 16:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X