»   » ಮೋನಿಷಾ ಎಂಬ ತಬ್ಬಲಿಯ ಪ್ರಾಣಪಕ್ಷಿ ಹಾರಿತು

ಮೋನಿಷಾ ಎಂಬ ತಬ್ಬಲಿಯ ಪ್ರಾಣಪಕ್ಷಿ ಹಾರಿತು

Posted By:
Subscribe to Filmibeat Kannada

ಮೋನಿಷಾ ಗೊತ್ತಿರಬೇಕಲ್ಲ. ಅಪ್ಪ ಅಮ್ಮನನ್ನು ಕಳೆದುಕೊಂಡ ನತದೃಷ್ಟ ಹೆಣ್ಣು ಮಗು. ಒಂದೇ ಒಂದು ಸಾರಿ, ಕಣ್ಮುಂದೇ ಬಾರೇ. ಕಣ್ಣ ತುಂಬ ನಿನ್ನನ್ನ ನಾ ತುಂಬಿ ಕೊಂಡಿರುವೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯ ಮುಂಗಾರುಮಳೆ ಚಿತ್ರದ ಜನಪ್ರಿಯ ಗೀತೆಯನ್ನು ಗುನುಗುತ್ತ ಅಪ್ಪ ಅಮ್ಮ ಕಳೆದುಕೊಂಡು ಮಾನಸಿಕ ತೊಳಲಾಟದಲ್ಲಿ ದಿನ ದೂಡಿದ ಮೋನಿಶಾ ಕೊನೆಗೂ ಜವರಾಯ ಬಳಿಗೆ ತೆರಳಿದ್ದಾಳೆ. ತೀವ್ರ ಮಾನಸಿಕವಾಗಿ ಕುಗ್ಗಿದ್ದ ಮುದ್ದು ಮುಖದ ಹೆಣ್ಣು ಮಗು ಶುಕ್ರವಾರ ಇಹಲೋಕ ತ್ಯಜಿಸಿತು.

ನಿಮಗೆ ನೆನಪಿರಬಹುದು, ನಗರದ ಭಾಪೂಜಿನಗರದ ವಾಸಿಗಳಾಗಿದ್ದ ಯುವ ದಂಪತಿಗಳ ಪುತ್ರಿ ಮೋನಿಷಾ ಕೌಟುಂಬಿಕ ಸಮಸ್ಯೆಯನ್ನು ಎದುರಿಸಲಾರದೇ ಈ ಯುವ ದಂಪತಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ಸಾಯಲೆಬೇಕೆಂದು ತೀರ್ಮಾನಿಸಿದ್ದ ದಂಪತಿಗಳು ಮಗು ಮೋನಿಷಾಗೂ ನೇಣಿ ಬಿಗಿದಿದ್ದರು. ಅದೃಷ್ಟವಶಾತ್ ಪವಾಡಸದೃಶ ರೀತಿಯಲ್ಲಿ ಮಗುಮೋನಿಷಾ ಬದುಕುಳಿದಿತ್ತು. ಹೃದಯವಂತರೆಲ್ಲ ಮೋನಿಷಾ ಕತೆ ಕೇಳಿ ಮಮ್ಮಲ ಮರುಗಿದ್ದರು. ಕೇವಲ 8 ವರ್ಷದ ಮಗು ಆತ್ಮಹತ್ಯೆಯಂತಹ ಭೀಕರತೆಯಿಂದ ಹೊರಬರಲು ಸಾಕಷ್ಟು ಸಮಯ ಹಿಡಿಯಿತು.

ಹಿರಿಯ ವೈದ್ಯರ ಬಳಿಯಲ್ಲಿ ಚಿಕಿತ್ಸೆ ನೀಡಲಾಯಿತು.ಆದರೂ ಮಾನಸಿಕವಾಗಿ ಸಹಜ ಸ್ಥಿತಿಗೆ ಬರಲು ಮೋನಿಶಾಗೆ ಸಾಧ್ಯಲಿಲ್ಲ ಎನ್ನುವ ಮಾತಿದೆ. ಏನೂ ಅರಿಯದ ಈ ಮಗು ತಂದೆ ತಾಯಿ ಮಾಡಿದ ತಪ್ಪಿನಿಂದ ಭಾರಿ ಶಿಕ್ಷೆಗೆ ಒಳಪಡುವಂತಾಗಿತ್ತು. ಇನ್ನೇನು ಮೋನಿಷಾ ಸಹಜ ಜೀವನ ನಡೆಸಬಹುದು ಎನ್ನುವ ಹೊತ್ತಿಗೆ. ಸುದ್ದಿಯೊಂದು ಬಂದಿದೆ. ಅಮಾಯಕ ಪುಟ್ಟಿಯ ಪ್ರಾಣ ಪಕ್ಷಿ ಶುಕ್ರವಾರ ಹೋಯಿತು ಅಂತ. ತಪ್ಪು ಯಾರದೋ ಶಿಕ್ಷೆ ಯಾರಿಗೋ.

ಗಣೇಶ್ ಸಾಂತ್ವನ

ಅಪ್ಪ ಅಮ್ಮನನ್ನ ಕಳೆದುಕೊಂಡ ಮೋನಿಶಾಗೆ ಆಘಾತದಿಂದ ಹೊರಬರಲು ಸಾಕಷ್ಟು ಸಮಯ ಬೇಕಾಯಿತು. ವೈದ್ಯಲೋಕ ಚಿಕಿತ್ಸೆಗಿಂತ ಸಾಂತ್ವನ ಬೇಕಿತ್ತು. ಮೋನಿಷಾ ಮುಂಗಾರುಮಳೆ ಗೀತೆಯಾದ ಒಂದೇ ಒಂದು ಸಾರಿ, ಕಣ್ಮುಂದೇ ಬಾರೇ ಹಾಡಿನ ಸಾಲನ್ನು ಸದಾ ಗುನುಗುತ್ತಿದ್ದಳು. ಅನಿಸುತಿದೆ ಯಾಕೋ ಇಂದು ಎಂದು ತೊದಲು ನುಡಿಗಳಲ್ಲಿ ಹೇಳುತ್ತಿದ್ದಳು. ವೈದ್ಯರ ಮುಖಾಂತರವೋ, ಸ್ನೇಹಿತರ ಮೂಲಕವೋ ಈ ಸುದ್ದಿ ಮಾಧ್ಯಮದ ಮಿತ್ರರ ಕಿವಿಗೆ ತಲುಪಿತು. ಸುದ್ದಿ ಅಚ್ಚಾಗಲು ತಡಲಾಗಲಿಲ್ಲ. ಇಂಗ್ಲೀಷ್ ದೈನಿಕವೊಂದು ಮುಖಪುಟದಲ್ಲಿ ಈ ವಿಷಯವನ್ನು ಪ್ರಕಟಿಸಿತು. ವಿಷಯ ತಿಳಿದ ನಟ ಗಣೇಶ್ ನೇರವಾಗಿ ಮೋನಿಶಾ ಚಿಕಿತ್ಸೆ ಪಡೆಯುತ್ತಿದ್ದ ಅಸ್ಪತ್ರೆಗೆ ತೆರಳಿದರು. ಅವರ ಜತೆಗೆ ನಿರ್ಮಾಪಕ ಕೆ.ಮಂಜು, ಅರಮನೆ ಚಿತ್ರದ ನಿರ್ದೇಶಕ ನಾಗಶೇಖರ್ ಕೂಡಾ ಇದ್ದರು. ತಂದೆತಾಯಿ ಕಳೆದುಕೊಂಡು ತಬ್ಬಲಿಯಾಗಿದ್ದ ಮೋನಿಷಾ ಗೆ ಸಾಂತ್ವನ ಹೇಳಿದರು. ಹಾಡಿದರು, ನಕ್ಕರು, ನಗಿಸಿದರು,ಮುದ್ದಿಸಿದರು. ಮಗು ಆಗ ಮಾತನಾಡಲು ಪ್ರಯತ್ನಿಸುತ್ತಿತ್ತು. ಇನ್ನೇನು ಮೋನಿಷಾ ಸಹಜ ಸ್ಥಿತಿಗೆ ಬರುವ ಎಲ್ಲ ಆಶಾವಾದವೂ ಇತ್ತು. ಆದರೆ ವಿಧಿ ವಿಪರ್ಯಾಸ ಮೋನಿಷಾ ಶುಕ್ರವಾರ ಮೃತಪಟ್ಟಿದ್ದಾಳೆ ಎಂದು ಸುದ್ದಿ ಬಂದಿದೆ.

(ದಟ್ಸ್ ಕನ್ನಡ ಸಿನಿ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada