ಕಿತ್ತೂರು ರಾಣಿ ಚೆನ್ನಮ್ಮ ಪಾತ್ರದಲ್ಲಿ ಜಯಪ್ರದಾ
ಕಿತ್ತೂರು ರಾಣಿ ಚೆನ್ನಮ್ಮ ಎಂದರೆ ಕನ್ನಡಿಗರಿಗೆ ನೆನಪಾಗುವುದು ಬಹುಭಾಷಾ ತಾರೆ, ಅಭಿನಯ ಸರಸ್ವತಿ ಬಿ ಸರೋಜಾದೇವಿ. ಕನ್ನಡ ಬೆಳ್ಳಿತೆರೆಯನ್ನು ಬೆಳಗಿದ ಅಭಿನೇತ್ರಿ ಈಕೆ. ರಾಣಿ ಚೆನ್ನಮ್ಮನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ ಅವರ ನಟನೆ ಇಂದಿಗೂ ಪುಳಕ ಹುಟ್ಟಿಸುತ್ತದೆ. ಈಗ ಅಂತಹದ್ದೇ ಪಾತ್ರವನ್ನು ಮೋಹಕ ತಾರೆ ಜಯಪ್ರದಾ ಮಾಡಲಿದ್ದಾರೆ.
ಹೌದು ಜಯಪ್ರದಾ ಅವರು ಕಿತ್ತೂರಿನ ಹುಲಿ ರಾಣಿ ಚೆನ್ನಮ್ಮನಾಗಿ ಕಾಣಿಸಲಿದ್ದಾರೆ. ಛಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ'ಚಿತ್ರದಲ್ಲಿ ಜಯಪ್ರದಾ ಅವರು ಚೆನ್ನಮ್ಮನ ಪಾತ್ರ ಮಾಡಲಿದ್ದಾರೆ.
ಜಯಪ್ರದಾ ಅವರು ಕನ್ನಡದಲ್ಲಿ ಪೂರ್ಣಪ್ರಮಾಣದಲ್ಲಿ ನಟಿಸಿ ಎರಡು ವರ್ಷಗಳೆ ಕಳೆದು ಹೋಗಿವೆ. ಅವರು ಪೂರ್ಣಪ್ರಮಾಣದಲ್ಲಿ ನಟಿಸಿದ ಕೊನೆಯ ಚಿತ್ರ ವಿಷ್ಣುವರ್ಧನ್ ಮುಖ್ಯಭೂಮಿಕೆಯ 'ಈ ಬಂಧನ'.'ರಾಜ್ ದಿ ಶೋ ಮ್ಯಾನ್' ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ 'ಕೀಚಕ' ಚಿತ್ರದಲ್ಲೂ ಅಭಿನಯಿಸಿದ್ದಾರೆ.ಇದೀಗ ಕನ್ನಡಲ್ಲಿ ಪುನಃ ಪ್ರಮುಖ ಪಾತ್ರ ಸಿಕ್ಕಿದೆ.
ನಾಗಣ್ಣ ನಿರ್ದೇಶಿಸುತ್ತಿರುವ ಈ ಚಿತ್ರ ನವೆಂಬರ್ ತಿಂಗಳಲ್ಲಿ ಸೆಟ್ಟೇರಲಿದೆ. ನಾಯಕಿಗಾಗಿ ಹುಡುಕಾಟ ನಡೆದಿದೆ. ಮೂಲಗಳ ಪ್ರಕಾರ, ಪ್ರಿಯಾಮಣಿ ಅವರೊಂದಿಗೆ ಮಾತುಕತೆ ನಡೆಯುತ್ತಿದೆ. ಚಿತ್ರದಲ್ಲಿ ನೂರಕ್ಕೂ ಹೆಚ್ಚು ಕಲಾವಿದರು ನಟಿಸುತ್ತಿರುವುದು ವಿಶೇಷ. ಅವಿನಾಶ್, ರಮೇಶ್ ಭಟ್ ಸಹ ಪಾತ್ರವರ್ಗದಲ್ಲಿದ್ದಾರೆ.
ಇದೊಂದು ಐತಿಹಾಸಿಕ ಚಿತ್ರವಾದ ಕಾರಣ 600 ಕುದುರೆಗಳು, 100 ಆನೆಗಳು ಹಾಗೂ ಸೈನಿಕರ ಪಾತ್ರಕ್ಕೆ 3,000 ಮಂದಿಯನ್ನು ಕರೆತರಲಾಗುತ್ತಿದೆ. ಲಂಡನ್ ನಿಂದ ಬ್ರಿಟೀಷ್ ಕಲಾವಿದರನ್ನೂ ಕರೆತರುವ ಪ್ರಯತ್ನ ನಡೆಯುತ್ತಿದೆ. ಚಿತ್ರದ ಬಹುತೇಕ ಚಿತ್ರೀಕರಣ ಜೈಪುರದಲ್ಲಿ ನಡೆಯಲಿದೆ. ಚಿತ್ರದಲ್ಲಿ ತಾಂತ್ರಿಕ ಅಂಶಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.
ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುತ್ತಿರುವವರು ಆನಂದ್ ಅಪ್ಪುಗೋಳ್. ಉಪೇಂದ್ರ ಕುಮಾರ್ ಅವರ ಪುತ್ರ ಯಶೋವರ್ಧನ್ ಅವರ ಸಂಗೀತ ಚಿತ್ರಕ್ಕಿರುತ್ತದೆ. ಛಾಯಾಗ್ರಹಣ ರಮೇಶ್ ಬಾಬು, ರವಿವರ್ಮ ಸಾಹಸ ಚಿತ್ರಕ್ಕಿದೆ. ಇಂತಹದ್ದೊಂದು ಚಿತ್ರವನ್ನು ನಿರ್ಮಿಸಬೇಕೆಂಬ ತಹತಹ ಆರೇಳು ವರ್ಷಗಳಿಂದ ನಿರ್ಮಾಪಕ ಆನಂದ್ ಅವರಿಗಿತ್ತಂತೆ. ಅದು 'ರಾಯಣ್ಣ' ಮೂಲಕ ಈಡೇರುತ್ತಿದೆ.


Click it and Unblock the Notifications











