ದುಷ್ಟರಿಗೆ ಬುದ್ದಿ ಕಲಿಸುವ ಮಾಸ್ಟರ್ ವಿಷ್ಣು
ಕನ್ನಡ ಚಿತ್ರಂಗದಲ್ಲಿ ಸುಪ್ರಭಾತ ಹಾಡುವುದರೊಂದಿಗೆ ಆರಂಭವಾದ ಡಾ:ವಿಷ್ಣುವರ್ಧನ್, ಸಹಜ ಚೆಲುವೆ ಸುಹಾಸಿನಿ ಹಾಗೂ ನಿರ್ದೇಶಕ ದಿನೇಶ್‌ಬಾಬು ಅವರ ತ್ರಿವೇಣಿ ಸಂಗಮ ಹೆಂಡ್ತಿಗೇಳ್ತಿನಿ ಚಿತ್ರದ ನಂತರ ಮತ್ತೆ ಒಂದಾಗಿದೆ ಮಾಸ್ಟರ್ ಚಿತ್ರದಲ್ಲಿ.
ತ್ರಿವೇಣಿ ಸಂಗಮದ ಈ ಚಿತ್ರ 8ರ ಮಿಲನವೂ ಹೌದು. ಹಾಗೆಂದರೆ ಚಿತ್ರದ ಮುಹೂರ್ತವಾಗಿದ್ದು 2008ರ 8ನೇ ತಿಂಗಳ 8ನೇ ದಿನಾಂಕದ 8ಗಂಟೆ, 8ನಿಮಿಷ, 8ಸೆಕೆಂಡಿಗೆ ಸಾಂಸ್ಕೃತಿಕ ನಗರಿಯ ಚಾಮುಂಡಿಬೆಟ್ಟದಲ್ಲಿ ಸೆಟ್ಟೇರಿತು. ಈ ತ್ರಿವಳಿಗಳ ಸುಪ್ರಭಾತ ಚಿತ್ರ ಸಹ ಚಾಮುಂಡಿಬೆಟ್ಟದಲ್ಲೇ ಆರಂಭವಾಗಿತ್ತು. ಆರಂಭದ ದಿನದಿಂದ ಇಲ್ಲಿಯವರಗೂ ಮಾಸ್ಟರ್ ಚಿತ್ರದ ಚಿತ್ರೀಕರಣ ಸುಸೂತ್ರವಾಗಿ ಸಾಗಿದೆ.
ವಿದ್ಯೆ ಕಲಿಸುವ ಮಾಸ್ಟರ್ ದುಷ್ಟರಿಗೆ ಬುದ್ದಿ ಕಲಿಸುವ ಮಾಸ್ಟರ್ ಕೂಡ ಆಗುತ್ತಾನೆ ಎಂದು ತೋರಿಸುತ್ತಾರೆ ಡಾ:ವಿಷ್ಣುವರ್ಧನ್. ಮುಂಜಾನೆಯಲ್ಲಿ ವಾಯುವಿಹಾರಕ್ಕೆ ಬಂದಿದ್ದ ವಿಷ್ಣುವರ್ಧನ್ ಅವರನ್ನು ಒಂದು ಪಡೆ ಕೆಣಕಲು ಬಂದ್ದಾಗ ಅವರಿಗೆ ಸಾಹಸದ ಮೂಲಕ ಪಾಠ ಕಲಿಸುವ ಸನ್ನಿವೇಶವನ್ನು ಮೈಸೂರಿನ ರೇಸ್‌ಕೋರ್ಸ್‌ನಲ್ಲಿ ಪಂಬಲ್ ರವಿ ಅವರ ಸಾಹಸ ಸಂಯೋಜನೆಯಲ್ಲಿ ಸೆರೆಹಿಡಿದರು ಚಿತ್ರದ ಛಾಯಾಗ್ರಾಹಕರೂ ಆಗಿರುವ ನಿರ್ದೇಶಕ ದಿನೇಶ್‌ಬಾಬು.
ಗೋಲ್ಡನ್ ಲಯನ್ ಫಿಲ್ಮಂ ಡಿವಿಜನ್ ಲಾಂಛನದಲ್ಲಿ ಸಿ.ಆರ್.ಮನೋಹರ್ ಅವರು ನಿರ್ಮಿಸುತ್ತಿರುವ ಮೂರನೇ ಚಿತ್ರ ಮಾಸ್ಟರ್. ನಿರ್ದೇಶಕರೇ ಕತೆ, ಚಿತ್ರಕತೆ, ಸಂಭಾಷಣೆ. ಛಾಯಾಗ್ರಹಣ ಕಾರ್ಯಗಳ ಜವಾಬ್ದಾರಿ ಹೊತ್ತಿರುವ ಈ ಚಿತ್ರಕ್ಕೆ ಮುಸ್ಸಂಜೆ ಮಾತು ಖ್ಯಾತಿಯ ವಿ.ಶ್ರೀಧರ್ ಅವರ ಸಂಗೀತವಿದೆ. ಜ್ಞಾನೇಶ್ ಸಂಕಲನ, ಚಿನ್ನಿಪ್ರಕಾಶ್ ನೃತ್ಯ, ಪಳನಿರಾಜ್, ರವಿವರ್ಮ ಸಾಹಸ, ಇಸ್ಮಾಯಿಲ್ ಕಲೆ ಹಾಗೂ ವಿಜಯಕುಮಾರ್, ಚಂಪಕಧಾಮ ಬಾಬು ಅವರ ನಿರ್ಮಾಣ ನಿರ್ವಹಣೆ ಮಾಸ್ಟರ್ಗಿದೆ.
ಡಾ:ವಿಷ್ಣುವರ್ಧನ್, ಸುಹಾಸಿನಿ ಅವರ ಅನುಪಮಜೋಡಿಯ ಚಿತ್ರದ ಉಳಿದ ತಾರಾಬಳಗದಲ್ಲಿ ಅವಿನಾಶ್, ಮುಖೇಶ್‌ರಿಷಿ, ದೇವರಾಜ್, ಹರೀಶ್‌ರಾಯ್, ಧರ್ಮ, ಚಿತ್ರಾಶೆಣೈ, ಬೇಬಿ ಬೃಂದಾ, ಬೇಬಿ ಪ್ರೇರಣ ಮುಂತಾದವರಿದ್ದಾರೆ.
(ದಟ್ಸ್ ಸಿನಿವಾರ್ತೆ)
ವಿಷ್ಣು-ಸುಹಾಸಿನಿ ಜೋಡಿಯ 'ಮಾಸ್ಟರ್'ಕಥೆ ಏನು?


Click it and Unblock the Notifications