twitter
    For Quick Alerts
    ALLOW NOTIFICATIONS  
    For Daily Alerts

    ಅತಿ ಶೀಘ್ರದಲ್ಲೇ ನೂತನ ಚಲನಚಿತ್ರ ನೀತಿ ಜಾರಿ

    By Staff
    |

    ಕರ್ನಾಟಕ ರಾಜ್ಯದ ಚಲನಚಿತ್ರ ನೀತಿ ನಿರೂಪಿಸಲು ಸರಕಾರ ರಚಿಸಿರುವ ತಜ್ಞ ಸಮಿತಿಯ ಮೂರನೇ ಮತ್ತು ಅಂತಿಮ ಸಭೆ ಶನಿವಾರ 25ರಂದು ಬೆಂಗಳೂರಿನಲ್ಲಿ ನಡೆಯಿತು. ಕನ್ನಡ ಚಲನಚಿತ್ರ ಕ್ಷೇತ್ರವನ್ನು ಪುನರ್ ಜೀವಗೊಳಿಸಲು ತಜ್ಞರಿಂದ ಸಲಹೆ ಮಾರ್ಗದರ್ಶನವನ್ನು ಕೋರಿರುವ ಸರಕಾರ, ಸಮಿತಿ ನೀಡಲಿರುವ ವರದಿಯನ್ನು ಆಧರಿಸಿ ನೂತನ ಚಲನಚಿತ್ರ ನೀತಿಯನ್ನು ಸದ್ಯದಲ್ಲೇ ಪ್ರಕಟಿಸಲಿದೆ. ಪ್ರಸಕ್ತ ಚಲನಚಿತ್ರ ನೀತಿ ರೂಪಿಸಿ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಸವೆದು ಹೋಗಿರುವುದರಿಂದ ಹೊಸ ನೀತಿ ನಿರೂಪಿಸುವುದು ಅಗತ್ಯವಾಗಿದೆ.

    ಸಮಿತಿಯಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆ ಕಾರ್ಯದರ್ಶಿ ಜಯರಾಮರಾಜೇ ಅರಸ್, ವಾರ್ತಾ ಮತ್ತು ಪ್ರಚಾರ ನಿರ್ದೇಶನಾಲಯದ ನಿರ್ದೇಶಕ ವಿಶುಕುಮಾರ್, ವಾಣಿಜ್ಯಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ, ನಿರ್ಮಾಪಕರ ಸಂಘದ ಅಧ್ಯಕ್ಷ ಕೆಸಿಎನ್ ಚಂದ್ರು, ನಿರ್ದೇಶಕರ ಸಂಘದ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು, ರಾಷ್ಟ್ರೀಯ ಪ್ರಶಸ್ತಿಗಳ ಸರದಾರ ಗಿರೀಶ್ ಕಾಸರವಳ್ಳಿ , ನಿರ್ದೇಶಕ ನಂಜುಂಡೇ ಗೌಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗಾಭರಣ ಮುಂತಾದವರನ್ನು ಒಳಗೊಂಡಿದೆ.

    ಕನ್ನಡ ಚಿತ್ರಗಳಿಗೆ ಸರಕಾರ ನೀಡುತ್ತಿರುವ ಪ್ರೋತ್ಸಾಹ ಏನೇನೂ ಸಾಕಾಗುತ್ತಿಲ್ಲ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರಬೇಕೆನ್ನುವುದು ವಾಣಿಜ್ಯ ವಿಷಯಗಳನ್ನು ಮಂಡಿಸುವ ಮತ್ತು ಚಿತ್ರಕರ್ಮಿಗಳ ಸವಾಲುಗಳನ್ನು ಪ್ರತಿಬಿಂಬಿಸುವ ಸದಸ್ಯರ ಬೇಡಿಕೆಯಾಗಿತ್ತು. ಕನ್ನಡ ಚಿತ್ರಗಳಿಗೆ ಈಗ ಕೊಡುತ್ತಿರುವ ಸಹಾಯಧನವನ್ನು 30 ಚಿತ್ರಗಳಿಂದ 50 ಚಿತ್ರಗಳಿಗೆ ಏರಿಸಬೇಕೆನ್ನುವುದು ಮುಖ್ಯವಾದ ಬೇಡಿಕೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು 50 ಚಿತ್ರಗಳಿಗೆ ಸಹಾಯಧನ ನೀಡುವುದಾಗಿ ಈಗಾಗಲೇ ಸದನದಲ್ಲಿ ವಾಗ್ದಾನ ಕೊಟ್ಟಿರುವುದರಿಂದ ಈ ಬೇಡಿಕೆ ಬಹುತೇಕ ಚಲನಚಿತ್ರ ನೀತಿಯ ಒಂದಂಗವಾಗಿ ಅಡಕವಾಗುವ ಸಾಧ್ಯತೆ ನಿಚ್ಚಳವಾಗಿದೆ.

    ಚಿತ್ರಕರ್ಮಿಗಳ ಬೇಡಿಕೆಯ ಪಟ್ಟಿ ಬಹಳ ಉದ್ದ ಇದೆ. 'ನಿರ್ಮಾಪಕ ಸತ್ತು ಹೋಗುತ್ತಿದ್ದಾನೆ ಅವನನ್ನು ಮೇಲಕ್ಕೆ ಎತ್ತ ಬೇಕು ಸಾರ್' ಎಂದು ಜಯಮಾಲಾ ಅವರು ಒಂದೇ ರಾಗದಲ್ಲಿ ಹಾಡಿಕೊಂಡು ಬಂದಿದ್ದಾರೆ. ಮೊನ್ನೆ ಸಭೆಯಲ್ಲೂ ಅವರು ನಿರ್ಮಾಪಕನನ್ನು ಕಾಪಾಡಿ ಎನ್ನುವ ಕೀರ್ತನೆಗೆ ಪುನಃ ರಾಗಸಂಯೋಜನೆ ಮಾಡಿದರು. ಅಷ್ಟೇ ಅಲ್ಲ, ಒಂದು ಹದಿನೈದು ಕಾದಂಬರಿ ಆಧಾರಿತ ಚಿತ್ರಕ್ಕೆ ವಿಶೇಷ ಪ್ರೋತ್ಸಾಹ ಧನ ನೀಡಬೇಕೆಂಬ ಪ್ರಸ್ತಾವನೆಯೂ ಸಭೆಯಲ್ಲಿ ಕೇಳಿಬಂತು.

    ಒಬ್ಬ ನಿರ್ಮಾಪಕ ಚಿತ್ರೀಕರಣ ಮಾಡುವಾಗ ಅನೇಕ ಕಷ್ಟಗಳಿಗೆ ಗುರಿಯಾಗುತ್ತಾನೆ. ಅದರಲ್ಲಿ ಶೂಟಿಂಗ್ ಲೊಕೇಷನ್ ಪರ್ಮಿಶನ್ ಪ್ರಮುಖವಾದದ್ದು. ಗೋಲ್ ಗುಂಬಜ್ ನಲ್ಲಿ ಚಿತ್ರೀಕರಣ ಮಾಡಬೇಕಿದ್ದಲ್ಲಿ ಪುರಾತತ್ವ ಇಲಾಖೆಯ ಪರವಾನಗಿ ಬೇಕು, ಅದೇ ಚಿತ್ರ ಲಾಲ್ ಬಾಗ್ ನಲ್ಲಿ ಶೂಟಿಂಗ್ ಮಾಡಿದರೆ ತೋಟಗಾರಿಕೆ ಇಲಾಖೆ ಪರವಾನಗಿಯೂ ಬೇಕು. ಹೀಗೆ, ಇಲಾಖೆಯಿಂದ ಇಲಾಖೆಗೆ ಅಲೆಯುವ ದುಸ್ಥಿತಿ ತಪ್ಪಿಸುವ ನಿಟ್ಟಿನಲ್ಲಿ ಸರಕಾರ ಏಕಗವಾಕ್ಷಿ ಪದ್ದತಿ ಜಾರಿಗೆ ತರಬೇಕು ಎಂದು ಗಾಂಧಿನಗರದ ಪ್ರತಿನಿಧಿಗಳು ಬೇಡಿಕೆ ಮುಂದಿಟ್ಟರು. ಈ ಪದ್ಧತಿಯ ಪ್ರಯೋಜನವೆಂದರೆ, ಒಂದು ಪರವಾನಗಿ ಇದ್ದರೆ ಎಲ್ಲಿ ಬೇಕಾದರೂ ನಿರಾತಂಕವಾಗಿ ಚಿತ್ರೀಕರಣ ನಡೆಸಬಹುದು ಎನ್ನುವುದು ನಿರ್ಮಾಪಕರ ಅಪೇಕ್ಷೆ.

    ಚಲನಚಿತ್ರ ಪ್ರಶಸ್ತಿಗಳಿಗೆ ಸದ್ಯ ಸರಕಾರ ನೀಡುತ್ತಿರುವ ಹಣದ ಪ್ರಮಾಣವನ್ನು ಹೆಚ್ಚಿಸಬೇಕೆನ್ನುವ ಸಲಹೆಗಳು ಸಭೆಯ ಮುಂದೆ ಬಂದವು. ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಕೇಂದ್ರ ಪ್ರಶಸ್ತಿ ಪಡೆದ ಚಿತ್ರಗಳಿಗೆ ರಾಜ್ಯ ಬೊಕ್ಕಸದಿಂದ ಬಹುಮಾನಗಳನ್ನು ಈಗಾಗಲೇ ಕೊಡಲಾಗುತ್ತಿದೆ. ಆದರೆ ಈ ಮೊತ್ತ ಜಾಸ್ತಿಯಾಗಬೇಕು ಎನ್ನುವುದು ಚಿತ್ರಮಂದಿಯ ವಾದ. ಕನ್ನಡ ಚಿತ್ರಗಳಿಗೆ ಗಂಡಾಂತರ ತಂದಿರುವ ಪೈರೆಸಿ ಭೂತವನ್ನು ಬಿಡಿಸಲು ಸರಕಾರ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಬಹುತೇಕ ಎಲ್ಲ ಸದಸ್ಯರು ಅಭಿಪ್ರಾಯಪಟ್ಟರು. ಗೂಂಡಾ ಕಾಯಿದೆ ವ್ಯಾಪ್ತಿಗೆ ಪೈರೆಸಿಯನ್ನು ಸೇರಿಸಿದರೆ ಖದೀಮರಿಗೆ ಮಟ್ಟ ಹಾಕುವುದು ಸುಲಭ ಎನ್ನುವ ಮಾತುಗಳು ಕೇಳಿಬಂತು. ಕಳ್ಳಭಟ್ಟಿ ಸಾರಾಯಿ ತಯಾರಿಸುವವರು ಮುಂತಾದ ಸಮಾಜ ಘಾತುಕ ಶಕ್ತಿಗಳು ಗೂಂಡಾ ಕಾಯಿದೆ ಸರಹದ್ದಿಗೆ ಬರುತ್ತವೆ.

    ಚಿತ್ರೋದ್ಯಮವನ್ನು ಪ್ರತಿನಿಧಿಸುವ ಸದಸ್ಯರು ಅನೇಕ ಸಲಹೆ, ಬೇಡಿಕೆಗಳನ್ನು ಮುಂದಿಟ್ಟರು. ಈ ಸಲಹೆಗಳನ್ನು ಕ್ರೋಢೀಕರಿಸಿ ವಾರ್ತಾ ಇಲಾಖೆ ಸರಕಾರಕ್ಕೆ ಸಲ್ಲಿಸುತ್ತದೆ. ಅದು ಇಲಾಖಾ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ಟೇಬಲ್ಲಿಗೆ ಅಲ್ಲಿಂದ ಮುಖ್ಯಮಂತ್ರಿ ಯಡ್ಡಿಯೂರಪ್ಪ ಅವರ ಕೊಠಡಿಗೆ ಹೋಗುತ್ತದೆ. ಅದಕ್ಕೆ ಮುನ್ನ ಆರ್ಥಿಕ ಇಲಾಖೆಗೆ ಫೈಲು ಹೋಗಿ ಸರಕಾರದ ಒಟ್ಟು ಆದಾಯ ಖರ್ಚುವೆಚ್ಚಗಳ ಪರೀಶೀಲನೆ ನಡೆದ ನಂತರ ಚಿತ್ರರಂಗಕ್ಕೆ ಹೆಚ್ಚಿಗೆ ಏನು ಸಿಗುತ್ತದೆ ಅಥವಾ ಏನು ಸಿಗಲ್ಲ ಎನ್ನುವುದು ನಿರ್ಧಾರವಾಗುತ್ತದೆ.

    ಈ ಮಧ್ಯೆ, ನಾಗಾಭರಣ ಅವರದೊಂದು ತಕರಾರಿದೆ. ಕನ್ನಡ ಸಿನಿಮಾ ಕುರಿತ ಎಲ್ಲ ವಿಚಾರ, ವಿವೇಚನೆಗಳು ಅಕಾಡೆಮಿಯ ವ್ಯಾಪ್ತಿಗೆ ಬರಬೇಕು. ರಾಜ್ಯ ಚಲನಚಿತ್ರ ನೀತಿ ನಿರೂಪಣೆಯನ್ನು ಶಿಫಾರಸ್ಸು ಮಾಡುವುದಕ್ಕೆ ಅಕಾಡೆಮಿ ಸಿದ್ಧವಾಗಿದೆ, ಮತ್ತು ಬದ್ಧವಾಗಿದೆ. ಅಕಾಡೆಮಿಯನ್ನು ಬದಿಗಿಟ್ಟು ನೀತಿ ನಿರೂಪಣೆಗೆ ಮತ್ತೊಂದು ಸಮಿತಿ, ಸಭೆ ಮಾಡುವ ಅವಶ್ಯಕತೆಯಾದರೂ ಏನಿದೆ ಎಂದು ಭರಣ ವಾದಿಸುತ್ತಾರೆ. ಏನೇ ಆಗಲಿ, ಅಕಾಡೆಮಿ ವತಿಯಿಂದ ನೀತಿ ನಿರೂಪಣೆ ಕುರಿತ ಪ್ರತ್ಯೇಕ ಶಿಫಾರಸುಗಳು ಸರಕಾರ ತಲಪುವುದು ಖಂಡಿತ.

    (ದಟ್ಸ್ ಕನ್ನಡ ಚಿತ್ರವಾರ್ತೆ)

    Monday, July 27, 2009, 15:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X