ಆಷಾಢದಲ್ಲಿ ಮದುವೆ, ಕೃಷ್ಣನ್ ಮ್ಯಾರೇಜ್ ಗೆ ತಪ್ಪದೇ ಬನ್ನಿ
ಆಷಾಢ ಮಾಸ ಬಂದರೆ ಯಾವುದೇ ಶುಭ ಕಾರ್ಯಗಳು ಬಂದ್ ಆಗಿಬಿಡುತ್ತದೆ. ಅದರಲ್ಲೂ ಮದುವೆ ಕಾರ್ಯಗಳು ನಡೆಯುವುದು ಅಪರೂಪ, ಸಿನಿಮಾ ಮಂದಿ ಕೂಡಾ ಯಾವುದೇ ಹೊಸ ಸಿನಿಮಾ ಅನೌನ್ಸ್ ಮಾಡೋಲ್ಲ. ಪರಿಸ್ಥಿತಿ ಹೀಗಿರುವಾಗ ಆಷಾಢ ಮಾಸದಲ್ಲಿ ಮದುವೆ ಮಹೂರ್ತ ಘೋಷಿಸಿ, ಸಾರ್ವಜನಿಕರಿಗೆ ಪತ್ರಿಕೆ ಹಂಚುತ್ತಿದ್ದಾರೆ ನಿರ್ಮಾಪಕ ವಿಜಯ್ ಕುಮಾರ್. ಅಂತೂ ಕೃಷ್ಣನ್ ಮದುವೆ ಕಥೆ ಆಷಾಢದಲ್ಲಿ ತೆರೆ ಮೇಲೆ ಕಾಣಬಹುದು.
ಹಿಂದೂ ಸಂಪ್ರದಾಯದ ಪ್ರಕಾರ ಆಷಾಢ ಮಾಸದಲ್ಲಿ ಗಂಡ ಹೆಂಡಿರು ಒಟ್ಟಿಗೆ ಅಡ್ಡಾಡುವಂತಿಲ್ಲ. ಹೀಗಿರಲು ಕುಟುಂಬ ಸಮೇತ ಕೃಷ್ಣನ್ ಮದುವೆ ನೋಡೋಕೆ ಯಾರು ಬರ್ತಾರೆ ಎಂದರೆ, ನೋಡ್ತಾ ಇರೀ ಹೌಸ್ ಫುಲ್ ಆಗುತ್ತೆ ಎಂದು ಚಿತ್ರತಂಡ ಭರವಸೆ ವ್ಯಕ್ತಪಡಿಸುತ್ತಾರೆ.
ಉದಯ ವಾಹಿನಿ ಮತ್ತು ಕೃಷ್ಣನ್ ಚಿತ್ರ ತಂಡ ಒಟ್ಟುಗೂಡಿ ಮದುವೆ ರಿಲೀಸ್ ಸಿದ್ಧತೆ ನಡೆಸಿದ್ದಾರೆ. ಯಾವ ವಿಶೇಷ ಅತಿಥಿಗಳನ್ನು ಕರೆಯಬೇಕು ಎಂದು ತಲೆಕೆಡಿಸಿಕೊಂಡಿದ್ದಾರೆ. ನಾಯಕ ನಟ ಅಜಯ್ ರಾವ್ ಈಗಲೇ, ನಿದ್ದೆ ಬಂದಿಲ್ಲಾ ನಂಗೆ ನಿದ್ದೆ ಬಂದಿಲ್ಲಾ, ನಾಳೆ ನನ್ನ ಮದ್ವೆ ಅಂತಾ ನಿದ್ದೆ ಬಂದಿಲ್ಲ ಎಂದು ಹಾಡುತ್ತಿದ್ದಾರೆ. ಕೊಡಗಿನ ಬೆಡಗಿ ನಿಧಿ, ಮುದುವೆ ಮೇಕಪ್ ನಲ್ಲಿ ಬ್ಯುಸಿಯಾಗಿದ್ದಾರೆ.
ಶಿವಮೊಗ್ಗ. ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಮದುವೆ ಮಂಟಪಗಳನ್ನು ಸುತ್ತಿ ಬಂದಿರುವ ಅಜಯ್ ಹಾಗೂ ನಿಧಿ ಜೋಡಿ ತಮ್ಮ ಬೆಳ್ಳಿ ಪರದೆ ಮದುವೆಗಾಗಿ ಕಾದು ಕೂತಿದ್ದಾರೆ.


Click it and Unblock the Notifications











