ರಾಘವ ಲೋಕಿ ತೆಕ್ಕೆಗೆ ಹ್ಯಾಟ್ರಿಕ್ ಹೀರೋ 101ನೇ ಚಿತ್ರ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 101ನೇ ಚಿತ್ರಕ್ಕೆ ಆಕ್ಷನ್, ಕಟ್ ಹೇಳುವ ಅದೃಷ್ಟ ನಿರ್ದೇಶಕ ರಾಘವ ಲೋಕಿ ಪಾಲಾಗಿದೆ. ಕೆಲ ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಲೋಕಿ ಗಾಯಗೊಂಡಿದ್ದರು. ಅವರ ಬೆನ್ನುಮೂಳೆಗೆ ಬಲವಾಗಿ ಪೆಟ್ಟು ಬಿದ್ದಿತ್ತು. ಈಗಷ್ಟೆ ಚೇತರಿಸಿಕೊಂಡಿರುವ ಅವರು ಭರಣಿ ಮಿನರಲ್ಸ್ ಚೊಚ್ಚಲ ಕಾಣಿಕೆಯ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
ಈ ಹಿಂದೆ ಶಿವರಾಜ್ ಕುಮಾರ್ ಅವರ 'ಸತ್ಯ ಇನ್ ಲವ್' ಚಿತ್ರವನ್ನು ಲೋಕಿ ನಿರ್ದೇಶಿಸಿದ್ದರು. ಲೋಕಿ ನಿರ್ದೇಶನದ ಈ ಚೊಚ್ಚಲ ಚಿತ್ರ ಬಾಕ್ಸಾಫೀಸ್ ಗಳಿಕೆಗೆ ಮೋಸ ಮಾಡಿರಲಿಲ್ಲ. ಶಿವಣ್ಣನ ಜೊತೆ 'ನಾನೇ ರಾಜಕುಮಾರ' ಚಿತ್ರ ಮಾಡಬೇಕಾದರೆ ನಿರ್ಮಾಪಕರು ಈಗ ಬೇಡ ಮುಂದೆ ಮಾಡೋಣ ಎಂದು ಹೇಳಿದ್ದರು.
ಈಗ ಕಾಲ ಕೂಡಿಬಂದಿದ್ದು ಲೋಕಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಚಿತ್ರ ಎಲ್ಲ ಚಿತ್ರಗಳಂತಲ್ಲ, ವಿಭಿನ್ನವಾಗಿರುತ್ತದೆ ಎಂಬುದು ಲೋಕಿ ಅವರ ವಿವರಣೆ. ಶೇ.50ರಷ್ಟು ಚಿತ್ರೀಕರಣ ಬೆಂಗಳೂರಿನಲ್ಲಿ ಉಳಿದ ಭಾಗವನ್ನು ವಿದೇಶದಲ್ಲಿ ಚಿತ್ರೀಕರಿಸಲಾಗುತ್ತದಂತೆ. ಶಿವಣ್ಣನ 'ಜೋಗಯ್ಯ' ಚಿತ್ರೀಕರಣ ಮುಗಿದ ಬಳಿಕ ಈ ಚಿತ್ರ ಸೆಟ್ಟೇರಲಿದೆ ಎನ್ನಲಾಗಿದೆ.
ಬಹುಶಃ ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಚಿತ್ರ ಸೆಟ್ಟೇರುವ ಸಾಧ್ಯತೆಯಿದೆ. ಮೂರು ಸಾಹಸ ಪ್ರಧಾನ ದೃಶ್ಯಗಳು ಹಾಗೂ ಆರು ಹಾಡುಗಳನ್ನು ಚಿತ್ರ ಒಳಗೊಂಡಿರುತ್ತದೆ. 'ಸತ್ಯ ಇನ್ ಲವ್' ಚಿತ್ರದಂತೆ ಈ ಚಿತ್ರವೂ ಯಶಸ್ವಿಯಾಗುತ್ತದೆ ಎಂಬ ಅಪಾರ ವಿಶ್ವಾಸ ರಾಘವ ಲೋಕಿ ಅವರದು.
ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ


Click it and Unblock the Notifications











