'ನಾರದ ವಿಜಯ' ಸಾಹಸದಲ್ಲಿ ನಾಯಕನಿಗೆ ಪೆಟ್ಟು
ಕೆಲವು ದಿನಗಳ ಹಿಂದೆ ಚಾಮರಾಜಪೇಟೆಯ ರಸ್ತೆಯೊಂದು ರಣರಂಗವಾಗಿ ಮಾರ್ಪಟಿತ್ತು. ನಾಯಕಿಯ ಮನ ಒಲಿಸಲು ಬಂದ ಯುವ ನಾಯಕನಿಗು ಹಾಗೂ ಸಾಹಸ ತಂಡದ ಸದಸ್ಯರಿಗೂ ನಡೆಯುತ್ತಿದ್ದ ಮಾರಾಮಾರಿ ಅದು. ಸ್ವಲ್ಪ ಹೊತ್ತಿನ ಹೊಡೆದಾಟದ ನಂತರ ಎದುರಾಳಿಯ ಮೇಲೆ ನಾಯಕ ಕಲ್ಲು ಎತ್ತಿ ಹಾಕುವ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿತ್ತು. ಆದರೆ ಆ ಕಲ್ಲು ಜಾರಿ ಚಿತ್ರದ ನಾಯಕನಾಗಿ ಅಭಿನಯಿಸುತ್ತಿರುವ ಸೂರ್ಯ ಅವರ ಕಾಲ ಮೇಲೆ ಬಿದ್ದು ಪೆಟ್ಟಾಗಿದೆ.
ಸದ್ಯ 'ನಾರದ ವಿಜಯ ಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿದೆ. ಅಲ್ಟಿಮೆಟ್ ಶಿವು ಅವರ ಸಾಹಸ ನಿರ್ದೇಶನದಲ್ಲಿ ಈ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿತ್ತು. ಮಧ್ಯಮ ವರ್ಗದ ಜನರ ಜೀವನದಲ್ಲಿ ಜರಗುವ ಪ್ರಸಂಗಗಳನ್ನು ಆಧರಿಸಿರುವ ಈ ಚಿತ್ರದಲ್ಲಿ ಶಶಿಕುಮಾರ್ ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸೂರ್ಯ ನಾಯಕನಾಗಿ ನಟಿಸುತ್ತಿದ್ದು, ಇವರಿಗೆ ಜೋಡಿಯಾಗಿ ಮೋಹಿನಿವಿಶ್ವಾಸ್ ಇದ್ದಾರೆ. ನಾಯಕಿ ಮೋಹಿನಿ ಖ್ಯಾತ ನಟ ಅಜಯ್‌ದೇವಗನ್ ಅವರ ಸಂಬಂಧಿ ಕೂಡ.
ಮಂಜು ದೈವಜ್ಞ ಕಥೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ನಾರದ ವಿಜಯ ಚಿತ್ರಕ್ಕೆ ಆದಂ ಸಂಗೀತ ನೀಡಿದ್ದಾರೆ. ಶಿವಕುಮಾರ್ ಕ್ಯಾಮೆರಾ, ಕುಮಾರ್ ಸಂಕಲನ, ಶ್ರೀನಿವಾಸ್ ಕಲೆ ಹಾಗೂ ಅಲ್ಟಿಮೆಟ್ ಶಿವು ಸಾಹಸ ಈ ಚಿತ್ರಕ್ಕಿದ್ದು, ಬ್ಯಾಂಕ್ ಜನಾರ್ದನ್, ಮೋಹನ್ ಜುನೇಜಾ, ಎಂ.ಎನ್.ಲಕ್ಷ್ಮೀದೇವಿ, ಬಿರದಾರ್, ಸುನಿತಾಶೆಟ್ಟಿ, ಜ್ಯೋತಿ, ರುದ್ರಾಣಿ ತಾರಾಬಳಗದಲಿದ್ದಾರೆ.


Click it and Unblock the Notifications











