ಸಿನಿಮಾ ತಾರೆ ಪೂಜಾಗಾಂಧಿ ಕಣ್ಣೀರಧಾರೆ ಕತೆ
ಮುಂಗಾರು ಮಳೆ ಬೇಬಿ ಪೂಜಾಗಾಂಧಿ ಕಣ್ಣೀರ ಕತೆಯಿದು. ಸ್ಯಾಂಡಲ್‌ವುಡ್‌ನಲ್ಲಿ ಬಹಳಷ್ಟು ತಾರೆಗಳು ಮಹಿಳೆಯರ ಕೈಗೆ ಕರ್ಚೀಫು ಕೊಟ್ಟು ಬಿಕ್ಕಿಬಿಕ್ಕಿ ಅಳುವಂತೆ ಮಾಡಿದ್ದಾರೆ. ಈಗ ಪೂಜಾಗಾಂಧಿ ಕೂಡ ಕಣ್ಣೀರಧಾರೆ ಹರಿಸಲು ಬರುತ್ತಿದ್ದಾರೆ. ಈ ಮೂಲಕ 'ತವರಿನ ಋಣ' ತೀರಿಸಲಿದ್ದಾರೆ.
ಕನ್ನಡದಲ್ಲಿ ಶ್ರುತಿ, ರಾಧಿಕಾ ಜಾಗ ಖಾಲಿ ಆದ ಮೇಲೆ ಆ ಪಾತ್ರಗಳನ್ನು ತುಂಬುವುದೇ ಕಷ್ಟವಾಗಿದೆ. ತವರಿನ ಸಿರಿ, ತಾಯಿ ಇಲ್ಲದ ತವರು, ತವರುಮನೆ ಉಡುಗೊರೆ ಚಿತ್ರಗಳ ಬಳಿಕ ಮತ್ತೊಮ್ಮೆ ಹೆಂಗೆಳೆಯರ ಮುಂದೆ ಬರುತ್ತಿದ್ದಾರೆ ಕರುಳು ಕಲಕಲು ಚಿತ್ರ 'ತವರಿನ ಋಣ' ಮೂಲಕ.
ತವರಿಣ ಚಿತ್ರದಲ್ಲಿ ಪೂಜಾಗಾಂಧಿ ಅವರದು ವಿಧವೆ ಪಾತ್ರ. ರಾಜಕಾರಣಿಯಾಗಿ ತಬಲಾ ನಾಣಿ ಹಾಗೂ ಖಳನಾಯಕನಾಗಿ ಮುನಿ ಕಾಣಿಸಲಿದ್ದಾರೆ. ನಿರ್ಮಾಪಕರಲ್ಲಿ ಒಬ್ಬರಾದ ಶ್ರೀರಾಮುಲು ಚಿತ್ರದಲ್ಲಿ ಎರಡನೇ ನಾಯಕ ನಟ. ಪಾತ್ರವರ್ಗದಲ್ಲಿ ಕೃಷ್ಣೇಗೌಡ, ಗಿರಿಜಾ ಲೋಕೇಶ್, ಆಶಾರಾಣಿ ಇದ್ದಾರೆ.
ಸಂಗೀತ ಸಂಯೋಜನೆ ಅಭಿಮಾನ್ ರಾಯ್ ಹಾಗೂ ಛಾಯಾಗ್ರಹಣ ಜಗದೀಶ್ ವಾಲಿ. ಡಾ.ವಿಷ್ಣುವರ್ಧನ್ ಮತ್ತು ಸಿತಾರ ನಟಿಸಿದ್ದ 'ಹಾಲುಂಡ ತವರು' ಚಿತ್ರಕ್ಕೂ ನಮ್ಮ 'ತವರಿನ ಋಣ' ಚಿತ್ರಕ್ಕೂ ಎಲ್ಲೂ ಸಾಮ್ಯತೆ ಇರುವುದಿಲ್ಲ ಎನ್ನುತ್ತಾರೆ ನಿರ್ದೇಶಕ ರಮೇಶ್ ರಾಜ್. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











