ಆಕ್ಷನ್, ಕಟ್ ಹೇಳಲಿದ್ದಾರೆ ಪ್ರಣಯರಾಜ ಶ್ರೀನಾಥ್
ಉದಯ ವಾಹಿನಿಯ ಜನಪ್ರಿಯ ಗೇಮ್ ಶೋ 'ಆದರ್ಶ ದಂಪತಿ'ಗಳ ಮೂಲಕ ಪ್ರಣಯರಾಜ ಶ್ರೀನಾಥ್ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರು ಕಿರುತೆರೆಯಲ್ಲೇ ಹೆಚ್ಚಾಗಿ ತೊಡಗಿಕೊಂಡ ಕಾರಣ ಬೆಳ್ಳಿತೆರೆಯ ಮೇಲೆ ಆಗೊಮ್ಮೆ ಹೀಗೊಮ್ಮೆ ಕಾಣಿಸಿಕೊಂಡು ಪ್ರೇಕ್ಷಕರ ಕಣ್ಣಿಗೆ ಬೀಳುತ್ತಿದ್ದರು. ಈಗವರು ಆಕ್ಷನ್, ಕಟ್ ಹೇಳಲು ತಯಾರಿ ನಡೆಸಿದ್ದಾರೆ.
ಶ್ರೀನಾಥ್ ನಿರ್ದೇಶಿಸಲಿರುವ ಚಿತ್ರಕ್ಕೆ 'ಕನಸು ನನಸು' ಎಂದು ಹೆಸರಿಡಲಾಗಿದೆ. ಚಿತ್ರದ ತಾರಾಗಣ, ನಿರ್ಮಾಪಕ, ತಂತ್ರಜ್ಞರು ಯಾರು ಎಂಬುದು ಸದ್ಯಕ್ಕೆ ಸಸ್ಪೆನ್ಸ್. ಸ್ವತಃ ಶ್ರೀನಾಥ್ ಅವರೇ ಈ ವಿಷಯಗಳನ್ನು ಶೀಘ್ರದಲ್ಲೆ ಬಹಿರಂಗಪಡಿಸಲಿದ್ದಾರಂತೆ.
ಪುಟ್ಟಣ್ಣ ಕಣಗಾಲ್ ಅವರ ಗರಡಿಯಿಂದ ಬಂದ ಶ್ರೀನಾಥ್ ತಮ್ಮ ವೃತ್ತಿ ಜೀವನದ ಅನುಭವಗಳನ್ನು ಧಾರೆ ಎರೆದು ಚಿತ್ರ ನಿರ್ದೇಶಿಸಲಿದ್ದಾರಂತೆ. ಸುದೀರ್ಘ ಸಮಯದಿಂದ ಸದಭಿರುಚಿಯ ಚಿತ್ರವೊಂದನ್ನು ನಿರ್ದೇಶಿಸುವ ಅದಮ್ಯ ಬಯಕೆ ಇತ್ತು. ಅದಕ್ಕೆ ಸರಿಯಾದ ಕಾಲ ಕೂಡಿಬಂದಿರಲಿಲ್ಲ. ಈಗಷ್ಟೆ ಕಾಲ ಕೂಡಿಬಂದಿದೆ ಎನ್ನುತ್ತಾರೆ ಶ್ರೀನಾಥ್.
ಉದಯವಾಹಿನಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀನಾಥ್ 'ಜಗಳ ಗಂಟಿಯರು' ಎಂಬ ಧಾರಾವಾಹಿಯಲ್ಲೂ ಅಭಿನಯಿಸಿದ್ದಾರೆ. ಈ ಧಾರಾವಾಹಿಯನ್ನು ಫಣಿ ರಾಮಚಂದ್ರ ನಿರ್ದೇಶಿಸಿದ್ದರು. ಪ್ರಣಯರಾಜ ಅವರ ನಿರ್ದೇಶನದಲ್ಲಿ ಅದ್ಭುತ ಚಿತ್ರವೊಂದು ಮೂಡಿಬರಲಿ ಎಂದು ಆಶಿಸೋಣ.


Click it and Unblock the Notifications











