ಮೇ 6ರಂದು ತೆರೆಗೆ ಪುನೀತ್ ರಾಜ್ ಕುಮಾರ್ 'ಹುಡುಗರು' ದಾಳಿ
ಡಾ.ರಾಜ್ ಕುಟುಂಬದ ಮತ್ತೊಂದು ಮಹತ್ವಾಕಾಂಕ್ಷಿ ಚಿತ್ರ 'ಹುಡುಗರು' ಮೇ 6ರಂದು ರಾಜ್ಯದಾದ್ಯಂತ ತೆರೆಗೆ ಅಪ್ಪಳಿಸಲಿದೆ. ತಮಿಳಿನ ಯಶಸ್ವಿ ಚಿತ್ರ 'ನಾಡೋಡಿಗಳ್' ರೀಮೇಕ್ ಇದಾಗಿದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಧಿಕಾ ಪಂಡಿತ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ರಾಜ್ ಕುಟುಂಬದ ಅಧೀನ ಸಂಸ್ಥೆ ಚಕ್ರೇಶ್ವರಿ ಕಂಬೈನ್ಸ್ ನ 79ನೇ ಪ್ರತಿಷ್ಠಿತ ಚಿತ್ರವಿದು.
ಬೆಂಗಳೂರಿನ ಕೆಜಿ ರಸ್ತೆಯ ಸಂತೋಷ್ ಸೇರಿದಂತೆ ರಾಜ್ಯದಾದ್ಯಂತ 150 ಚಿತ್ರಮಂದಿರಗಳಲ್ಲಿ 'ಹುಡುಗರು' ಝಗಮಗಿಸಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. 'ಮಠ' ಗುರುಪ್ರಸಾದ್ ಅವರ ಸಂಭಾಷಣೆ ಚಿತ್ರಕ್ಕಿದ್ದು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. 'ಜಾಕಿ' ಚಿತ್ರದ ಬಳಿಕ ನಿರ್ದೇಶಕ ಕಮ್ ಗೀತ ಸಾಹಿತಿ ಯೋಗರಾಜ್ ಭಟ್ ಎಲ್ಲ ಗೀತೆಗಳನ್ನು ರಚಿಸಿರುವುದು ವಿಶೇಷ.
ಗಜ, ರಾಮ್, ಪ್ರೀತ್ಸೆ ಪ್ರೀತ್ಸೆ ಹಾಗೂ ದಂಡಂ ದಶಗುಣಂ ಚಿತ್ರಗಳ ಮಾದೇಶ್ ಆಕ್ಷನ್, ಕಟ್ ಹೇಳಿದ್ದಾರೆ. ವಿ ಹರಿಕೃಷ್ಣ ಸಂಗೀತ, ಸತ್ಯ ಹೆಗಡೆ ಅವರ ಛಾಯಾಗ್ರಹಣ, ರವಿ ವರ್ಮ ಅವರ ಸಾಹಸ, ದೀಪು ಎಸ್ ಕುಮಾರ್ ಅವರ ಸಂಕಲನ ಚಿತ್ರಕ್ಕಿದೆ. ಯೋಗೇಶ್, ಶ್ರೀನಗರ ಕಿಟ್ಟಿ, ವಿಶಾಲ್ ಹೆಗಡೆ, ಅಭಿನಯಾ, ಸಾಧು ಕೋಕಿಲ, ಶಾಂತಮ್ಮ, ರಂಗಾಯಣ ರಘು, ಸುಧಾ ಬೆಳವಾಡಿ, ಶ್ರೀನಿವಾಸ ಪ್ರಭು, ರಮ್ಯಾ ಬಾರ್ನಾ ಮುಂತಾದವರ ತಾರಾಬಳಗದಿಂದ ಚಿತ್ರ ತುಂಬಿ ತುಳುಕುತ್ತಿದೆ.


Click it and Unblock the Notifications











