ಮಥುರಾನಗರಿಯಲ್ಲಿ ರಮ್ಯಾ ಪ್ರೇಮ ಲೋಕ!
ಬೆಂಗಳೂರು ರಾಯಲ್ ಚಾಲೆಂಜರ್ಸ್ ನ ರಾಯಭಾರಿ ರಮ್ಯಾ ಇಷ್ಟು ದಿನ ಐಪಿಎಲ್ ಪಂದ್ಯಾವಳಿಯಲ್ಲಿ ಕಳೆದು ಹೋಗಿದ್ದರು. ಇದೀಗ ಮತ್ತೆ ಫಾರ್ಮ್ ಗೆ ಮರಳಿದ್ದಾರೆ. ತಮ್ಮ ಮುಂದಿನ ಚಿತ್ರದಲ್ಲಿ ನಟ ಧ್ಯಾನ್ ಗೆ ಜೊತೆಯಾಗಲಿದ್ದಾರೆ ರಮ್ಯಾ. ಚಿತ್ರದ ಹೆಸರು 'ಮಥುರಾನಗರಿ'. ಟ್ಯಾಗ್ ಲೈನ್ 'ರಾಧೆಯ ಪ್ರೇಮಲೋಕ'!
'ಒಂದು ಪ್ರೀತಿಯ ಕಥೆ' ನಿರ್ದೇಶಿಸಿದ್ದ ರಾಜಶೇಖರ ರಾವ್ ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿದ್ದಾರೆ. ರಮ್ಯಾ ಮತ್ತು ಧ್ಯಾನ್ ಕತೆಯ ಪಾತ್ರಗಳಿಗೆ ಸೂಕ್ತವಾಗಿ ಒಪ್ಪುತ್ತಾರೆ ಎಂಬ ಕಾರಣಕ್ಕೆ ಅವರಿಬ್ಬರನ್ನು ತಮ್ಮ 'ಮಥುರಾನಗರಿ' ಚಿತ್ರಕ್ಕೆ ಆಯ್ಕೆ ಮಾಡಿದ್ದಾಗಿ ರಾಜಶೇಖರ ರಾವ್ ತಿಳಿಸಿದ್ದಾರೆ.
ಹಳ್ಳಿಹುಡುಗನ ರೀತಿ ಕಾಣುವ ನಟ ಬೇಕಾಗಿತ್ತು. ಧ್ಯಾನ್ ಗಿಂತಲೂ ಸೂಕ್ತ ನಟ ಇನ್ಯಾರಿದ್ದಾರೆ ಎಂಬುದು ರಾವ್ ಅವರ ಪ್ರತಿಕ್ರಿಯೆ. ಇದೊಂದು ನಾಯಕಿ ಪ್ರಧಾನ ಚಿತ್ರವಾಗಿದ್ದು, ರಮ್ಯಾ ಅವರಿಗೆ ಈ ಪಾತ್ರ ಹೇಳಿ ಮಾಡಿಸಿದಂತಿದೆ. ಆಧುನಿಕ ರಾಧೆಯಾಗಿ ರಮ್ಯಾ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ ಎನ್ನುತ್ತಾರೆ ರಾಜಶೇಖರ.ಚಿತ್ರದ ಉಳಿದ ತಂತ್ರಜ್ಞರ ಹಾಗೂ ತಾರಾಬಳಗದ ಆಯ್ಕೆ ಪ್ರಗತಿಯಲ್ಲಿದೆ.


Click it and Unblock the Notifications











