ರವಿಮಾಮನ ತೆಕ್ಕೆಯಲ್ಲಿ ನಲುಗಿದ ಹೂಗಳು
ಸಾಕಷ್ಟು ಸಂಕಷ್ಟಗಳ ಪಾಲಾಗಿದ್ದ ಕ್ರೇಜಿ ಸ್ಟಾರ್ ರವಿಚಂದ್ರನ್ 'ಹೂ' ಕಡೆಗೂ ಮುಡಿಗೇರುವ ಭಾಗ್ಯ ದೊರಕಿದೆ. ಇಷ್ಟೊತ್ತಿಗಾಗಲೆ ಚಿತ್ರ ಮಂದಿರಗಳಲ್ಲಿ 'ಹೂ' ಅರಳಿ ಹಣ್ಣಾಗಬೇಕಾಗಿತ್ತು. ರವಿ ಹುಟ್ಟುಹಬ್ಬದಂದು ಬಿಡುಗಡೆಯಾಗುತ್ತೆ ಅಂದುಕೊಂಡಿದ್ದ 'ಹೂ'ಗೆ ಮುಕ್ತಿ ಸಿಕ್ಕಿರಲಿಲ್ಲ. ಈಗಾಗಲೆ ರವಿ ಕೈಯಲ್ಲಿ ಸಾಕಷ್ಟು ನಲುಗಿರುವ ಹೂ ಕಡೆಗೂ ಜೂನ್ 4ರಂದು ಅರಳುತ್ತಿದೆ .
'ಹೂ'ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್ ಮಂಡಳಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಅಂದುಕೊಂಡಂತೆ ಎಲ್ಲಾ ನಡೆದಿದ್ದರೆ ಮೇ.28ರಂದೇ ಹೂ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರಮಂದಿರಗಳ ಕೊರತೆಯ ಕಾರಣ 'ಹೂ' ಮುಡಿದ ತಾವರೆಯಂತಾಯಿತು.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಸೆಟ್ಟೇರಿದ 'ಹೂ' ಚಿತ್ರಕ್ಕೆ ಸಾಕಷ್ಟು ವಿಘ್ನಗಳು ಎದುರಾಗಿದ್ದವು. ಈ ಚಿತ್ರಕ್ಕೆ ರವಿಚಂದ್ರ ಸಂಗೀತ ಸಂಯೋಜಿಸದೆ ತಮ್ಮ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದ ಹರಿಕೃಷ್ಣ ಅವರ ಕೈಗೆ ಒಪ್ಪಿಸಿದ್ದಾರೆ. ತಮ್ಮ ಮೇಲೆ ನಂಬಿಕೆ ಇಲ್ಲ ಎಂದಲ್ಲ. ಹರಿಕೃಷ್ಣ ಮೇಲಿನ ವಿಶ್ವಾಸದಿಂದ ರವಿ ಹಾಗೆ ಮಾಡಿದ್ದರು.
ಬೇಸಿಗೆ, ಮಳೆಗಾಲ, ಚಳಿಗಾಲಗಳು ಕಳೆಯುತ್ತಿದ್ದರೂ ಕನಸುಗಾರನ ಕನಸು 'ಮಂಜಿನ ಹನಿ'ಗೆ ಮುಕ್ತಿ ಸಿಕ್ಕಿಲ್ಲ. ಈ ಚಿತ್ರವನ್ನು ವಿಭಿನ್ನವಾಗಿ ಪ್ರೇಕ್ಷಕರ ಮುಂದೆ ತರಬೇಕು ಎಂಬ ತುಡಿತ ರವಿ ಅವರದ್ದು. ಮಂಜಿನ ಹನಿಯನ್ನು ಅರ್ಧಕ್ಕೆ ಬಿಟ್ಟು 'ಹೂ' ಚಿತ್ರವನ್ನು ರವಿ ಕೈಗೆತ್ತಿಕೊಂಡಿದ್ದರು. ನಮಿತಾ, ಮೀರಾ ಜಾಸ್ಮಿನ್ ಎಂಬ ಎರಡು ಬೆಟ್ಟದ ಹೂಗಳು ಚಿತ್ರದಲ್ಲಿದ್ದು ಪ್ರೇಕ್ಷಕರಿಗೆ ಪಾಲಿಗೆ ಪಂಚಾಮೃತವಾಗಲಿದೆ.


Click it and Unblock the Notifications











