»   » ರಾಷ್ಟ್ರದಾದ್ಯಂತ ಏಕಕಾಲಕ್ಕೆ ಸತ್ಯ ಇನ್ ಲವ್ ಬಿಡುಗಡೆ

ರಾಷ್ಟ್ರದಾದ್ಯಂತ ಏಕಕಾಲಕ್ಕೆ ಸತ್ಯ ಇನ್ ಲವ್ ಬಿಡುಗಡೆ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಹೊಸ ಗೆಟಪ್‌ನಲ್ಲಿರುವ ರಾಘವ್ ಲೋಕಿ ನಿರ್ದೇಶನದ ಮಹತ್ವಾಕಾಂಕ್ಷೆಯ ಚಿತ್ರ 'ಸತ್ಯ ಇನ್ ಲವ್' ಕರ್ನಾಟಕದಲ್ಲಿ ಮಾತ್ರವಲ್ಲ ರಾಷ್ಟ್ರದಾದ್ಯಂತ ಏಕಕಾಲದಲ್ಲಿ ಮಾರ್ಚ್ 28ರಂದು ಬಿಡುಗಡೆಯಾಗುತ್ತಿದೆ. ಕನ್ನಡ ಚಿತ್ರಗಳು ಇಲ್ಲಿಯವರೆಗೆ ಮೊದಲು ಕರ್ನಾಟಕದಲ್ಲಿ ಚಿತ್ರವನ್ನು ಬಿಡುಗಡೆ ಮಾಡಿ ಕೆಲ ವಾರಗಳ ನಂತರ ಇತರ ರಾಜ್ಯಗಳಲ್ಲಿ ಬಿಡುಗಡೆ ಮಾಡುವ ಪರಿಪಾಠ ನಡೆಸಿಕೊಂಡು ಬಂದಿದ್ದವು. ಆದರೆ, ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ದೂರದ ದೆಹಲಿಯಲ್ಲಿಯೂ ಏಕಕಾಲಕ್ಕೆ ಬಿಡುಗಡೆಯ ಭಾಗ್ಯ ಕಾಣುತ್ತಿದೆ.

ಈ ವರ್ಷ ಬಿಡುಗಡೆಯಾದ ಪ್ರಥಮ ಚಿತ್ರ ದರ್ಶನ್ ನಟನೆಯ 'ಗಜ' ಹೊರತುಪಡಿಸಿದರೆ ಯಾವ ಚಿತ್ರವೂ 'ಹಿಟ್' ಪಟ್ಟಿಗೆ ಸೇರಿಕೊಂಡಿಲ್ಲ. ಬಹು ನಿರೀಕ್ಷೆ ಹುಟ್ಟಿಸಿದ್ದ ಅವ್ವ, ಪ್ರೀತಿ ಏಕೆ ಭೂಮಿ ಮೇಲಿದೆ, ಹೊಂಗನಸು ಮುಂತಾದ ಸ್ವಮೇಕ್ ಚಿತ್ರಗಳನ್ನು ಪ್ರೇಕ್ಷಕ ದೊರೆ ಸಾರಾಸಗಟಾಗಿ ತಳ್ಳಿಹಾಕಿದ್ದಾನೆ. ಗಾಳಿಪಟ, ಬಿಂದಾಸ್ ಅಂತಹ ಸ್ಟಾರ್‌ಕಾಸ್ಟ್‌ನ ಹೈವೋಲ್ಟೇಜ್ ಚಿತ್ರಗಳ ಬಗ್ಗೆ ಪರವಾಗಿಲ್ಲ ಓಕೆ ಎನ್ನುವಂಥ ಮಾತಾಡುತ್ತಿದ್ದಾರೆ ಚಿತ್ರಪ್ರೇಮಿಗಳು. ಇಂತಿ ನಿನ್ನ ಪ್ರೀತಿಯ ಅಂಥ ಬಹುನಿರೀಕ್ಷೆ ಹುಟ್ಟಿಸಿದ್ದ ಚಿತ್ರ ಕೂಡ ಚಿತ್ರರಸಿಕರನ್ನು ನಿರಾಸೆಯಲ್ಲಿ ನೂಕಿಬಿಟ್ಟಿದೆ. ಏನೂ ನಿರೀಕ್ಷೆಯಿರದ ನಂದ ಲವ್ಸ್ ನಂದಿತ ಮತ್ತು ಗೂಳಿ ಚಿತ್ರಗಳಿಗೆ ಸಿಕ್ಕ ಆರಂಭವಂತೂ ಅದ್ಭುತವಾಗಿದೆ. ಮುಂದಿನ ದಿನಗಳು ಹೇಗಿವೆಯೋ ಯಾರು ಬಲ್ಲರು? ಪ್ರೇಕ್ಷಕರ ನಾಡಿಮಿಡಿತವನ್ನು ಅರಿಯುವುದು ಬಲುಕಷ್ಟ ಎಂಬ ಅಂಶ ನಿರ್ಮಾಪಕರಿಗೆ ಈಗ ಮನದಟ್ಟಾಗಿರಬಹುದು.

ಸ್ವಮೇಕೋ ರಿಮೇಕೋ ನೋಡದೆ ಇಷ್ಟವಲ್ಲದ ಚಿತ್ರಗಳನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಇಂಥ ಹೊತ್ತಿನಲ್ಲಿ ಶುಕ್ರವಾರ ಸತ್ಯ ಇನ್ ಲವ್ ರಾಷ್ಟ್ರದಾದ್ಯಂತ ಚಿತ್ರಮಂದಿರಗಳನ್ನು ಆವರಿಸಿಕೊಳ್ಳುತ್ತಿದೆ. ಒಟ್ಟು ನೂರು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡಬೇಕೆಂಬುದು ರಾಘವ್ ಲೋಕಿ ಆಶಯ. ಚೆನ್ನೈ, ಹೈದರಾಬಾದ್, ಪುಣೆ, ಮುಂಬೈ, ದೆಹಲಿ, ತಿರುಪತಿ, ಆದೋನಿ, ಕರ್ನೂಲು, ಅನಂತಪುರ, ಲಾತೂರ್, ಗೋವಾ, ಕೃಷ್ಣಗಿರಿ, ಹೊಸೂರು ಮುಂತಾದ ಹೊರರಾಜ್ಯದ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.

ಈ ಮೊದಲೂ ಚಿತ್ರಗಳು ಇತರ ರಾಜ್ಯಗಳಲ್ಲಿ ಬಿಡುಗಡೆಯಾಗಿದ್ದರೂ ಗೆದ್ದಿರುವ ಚಿತ್ರಗಳು ಕಡಿಮೆ. ಚಿತ್ರಗಳು ಇಲ್ಲಿಯೇ ಸೋಲುತ್ತಿವೆಯಾದ್ದರಿಂದ ಹೊರರಾಜ್ಯಗಳಲ್ಲಿ ಗೆಲ್ಲುವ ಕನಸು ಇಟ್ಟುಕೊಳ್ಳುವುದು ತಪ್ಪಾದರೂ ಈ ಟ್ರೆಂಡ್ ಮುಂದಿನ ಚಿತ್ರಗಳಿಗೂ ಮುಂದುವರಿಯಬೇಕು. ಈ ಸತಿಯಲ್ಲದಿದ್ದರೂ ಮುಂದಿನಸಲವಾದರೂ ದುಡ್ಡು ಮಾಡುತ್ತೇವೆ ಎನ್ನುವುದು ಲೋಕಿಯ ಆಶಾವಾದ.

ತಮಿಳು, ತೆಲುಗು ಚಿತ್ರಗಳಲ್ಲಿ ಚಿತ್ರರಸಿಕರನ್ನು ತನ್ನ ಸೌಂದರ್ಯದಿಂದ ಮರಳುಮಾಡಿರುವ ಜೆನಿಲಿಯಾ ಪ್ರಥಮ ಬಾರಿಗೆ ಕನ್ನಡಕ್ಕೆ ಪಾದಾರ್ಪಣ ಮಾಡಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ. ಇದು ಗುರುಕಿರಣ್ ಅವರ ವೃತ್ತಿ ಜೀವನದ 50 ನೇ ಚಿತ್ರವಾಗಿರುವುದು ವಿಶೇಷ.ಹಿಂದಿಯಲ್ಲಿ ಬೇಡಿಕೆ ಕಳೆದುಕೊಂಡಿರುವ ಕುಮಾರ್ ಸಾನು ಈ ಚಿತ್ರದಲ್ಲಿ ಹಾಡಿದ್ದಾರೆ. ಜೋಗಿ ಖ್ಯಾತಿಯ ಎಂ.ಆರ್. ಸೀನು ಛಾಯಾಗ್ರಹಣ ಹಾಗೂ ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಈ ಚಿತ್ರಕ್ಕಿದೆ. ಸತ್ಯ ಇನ್ ಲವ್ ಹೆಸರೇ ಸೂಚಿಸುವಂತೆ ಇದು ಪ್ರೀತಿ ಸುತ್ತ ಗಿರಕಿ ಹೊಡೆಯುವ ಚಿತ್ರ. ನವನವೀನ ಕೇಶವಿನ್ಯಾಸದಲ್ಲಿ ಶಿವರಾಜ್‌ಕುಮಾರ್ ಯಂಗ್ ಲವರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೀತಿಯ ಜೊತೆ ಸೆಂಟಿಮೆಂಟು, ಹೊಡೆದಾಟ ಸೇರಿಕೊಂಡಿರುವ ಅಪ್ಪಟ ಕಮರ್ಷಿಯಲ್ ಚಿತ್ರ ಸತ್ಯ ಇನ್ ಲವ್. ಈ ಚಿತ್ರಕ್ಕಾಗಿ ಶಿವಣ್ಣ ತಮ್ಮ ನಡಿಗೆಯ ಸ್ಟೈಲನ್ನೂ ಬದಲಿಸಿಕೊಂಡಿದ್ದಾರೆ. ಶಿವಣ್ಣನ ಕೇಶವಿನ್ಯಾಸ, ನಡಿಗೆ, ಹೊಡೆದಾಟದ ದೃಶ್ಯಗಳಿಂದ ಚಿತ್ರಕ್ಕೆ ಹೊಸ ಸ್ಟೈಲ್, ಒಂದು ಬಗೆಯ ಫೋರ್ಸ್ ದಕ್ಕಿದೆಯೆಂಬುದು ಲೋಕಿ ಕಂಡುಕೊಂಡಿರುವ ಸತ್ಯ.

(ದಟ್ಸ್ ಕನ್ನಡ ಸಿನಿವಾರ್ತೆ)

ಸತ್ಯನ ಲವರ್ ಜೆನಿಲಿಯಾ ಗ್ಯಾಲರಿ

ನೆರೆರಾಜ್ಯದಲ್ಲಿ ಬೇರುಬಿಟ್ಟಿರುವ ಕನ್ನಡತಿಯರು : ನಿತ್ಯಾ, ಅಕ್ಷರ, ರಮ್ಯಾ, ಸಿಂಧು ಮೆನನ್, ರಾಧಿಕಾ, ಸಂಜನಾ
ಪಕ್ಕದೂರಿನಿಂದ ಆಮದಾಗಿರುವ ಸುಂದರಾಂಗಿನಿಯರು : ಜೆನಿಲಿಯಾ, ಮಮತಾ ಮೋಹನದಾಸ್, ನಮಿತಾ, ಮಧುಮಿತಾ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada