»   » ‘ ಸ್ವಾತಿಮುತ್ತು’ ಅಲ್ಲೊಂದು ಇಲ್ಲೊಂದು!

‘ ಸ್ವಾತಿಮುತ್ತು’ ಅಲ್ಲೊಂದು ಇಲ್ಲೊಂದು!

Posted By: Super
Subscribe to Filmibeat Kannada
Swatimuttu
ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ....
ನಿಜ, ಕಲಾತ್ಮಕ ಚಿತ್ರಗಳಲ್ಲಿ ಕನ್ನಡ ಮೇಲ್ಪಂಕ್ತಿಯಲ್ಲಿದೆ,ಇಲ್ಲಿ ರೇ ಶೈಲಿಗೆ ಬರವಿಲ್ಲ . ಪ್ರಸ್ತುತ ಕಾಸರವಳ್ಳಿ, ಶೇಷಾದ್ರಿ,ಬರಗೂರು, ಕಾರ್ನಾಡ, ... ಅಂತರಾಷ್ಟ್ರಿಯ ಖ್ಯಾತಿ ತಂದಿದ್ದಾರೆ . ಕಮರ್ಶಿಯಲ್‌ಗೆ ನಾಗಣ್ಣ, ಸುರೇಶ್‌ ಕೃಷ್ಣ, ಬಾಬು, ಸಿಂಗ್‌... ಹೀಗೆ ಪಟ್ಟಿ ಬೆಳೆಯುತ್ತದೆ. ಆದರೆ ಕನ್ನಡ ಚಿತ್ರ ಮಾರುಕಟ್ಟೆಗೆ ಸದ್ಯ ಬೇಕಾಗಿರುವುದು , ಇವರೆಲ್ಲರ ಜೊತೆ ಒಬ್ಬ ಮಣಿರತ್ನಂ. ಕನ್ನಡ ಚಿತ್ರರಂಗದ ದುರಾದೃಷ್ಟ ಎಂದರೆ ಕಲಾತ್ಮಕ ಹಾಗು ಕಮರ್ಶಿಯಲ್‌ ಚಿತ್ರಗಳ ಮಧ್ಯೆ ಬೆಳೆದುಕೊಂಡು ಬಂದ ಬಿರುಕು. ಇವು ಎರಡು ಪ್ರಕಾರಗಳಾಗಿ ಮಾರ್ಪಟ್ಟಿವೆ. ಕಲಾತ್ಮಕತೆಗೆ ಪ್ರೇಕ್ಷಕನ ಪರಿ ಇಲ್ಲ , ಕಮರ್ಶಿಯಲ್‌ಗೆ ಗುಣಮಟ್ಟ ಬೇಕಾಗಿಲ್ಲ . ಇವೆರಡರ ಮಧ್ಯೆ ಒಮ್ಮೊಮ್ಮೆ 'ಜನುಮದ ಜೋಡಿ"ಯಂತಹ ಚಿತ್ರಗಳು ಬಂದುಹೋಗುವುದುಂಟು.

ಕನ್ನಡ ಚಿತ್ರರಂಗದ ಯುವ ನಾಯಕರು ಆಯ್ದುಕೊಳ್ಳುತ್ತಿರುವ ಕೆಲ ಪಾತ್ರಗಳನ್ನು ಈಗೀಗ ಕಂಡಾಗ ಚಿತ್ರರಂಗ ಗುಣಮಟ್ಟದ ದೃಷ್ಟಿಯಿಂದ ಚೇತರಿಸಿಕೊಳ್ಳಬಹುದೆಂಬ ನಿರೀಕ್ಷೆ ಹುಟ್ಟುತ್ತದೆ. ಅಂತಹ ಪ್ರಯತ್ನಗಳಲ್ಲೊಂದು ಸುದೀಪ್‌ನಟನೆಯ 'ಸ್ವಾತಿಮುತ್ತು". ಚಿತ್ರದ ವೈಶಿಷ್ಟ್ಯವೆಂದರೆ ಇಮೇಜ್‌ ಬದಿಗಿಟ್ಟು ನಟನೆಗೆ ಮಾತ್ರ ಒತ್ತುಕೊಟ್ಟ ಸುದೀಪು. ಇಂದಿನ ಕನ್ನಡ ಚಿತ್ರಗಳು ನಾಯಕ ಪಾತ್ರದತ್ತ ಕೇಂದ್ರೀಕೃತವಾಗಿ ಉಳಿದ ಪಾತ್ರಗಳನ್ನು ಕಡೆಗಣಿಸುವ ಪರಿಸ್ಥಿತಿಯಲ್ಲಿ ಇತರ ಪಾತ್ರಗಳಿಗೂ ತುಂಬಿದ ಜೀವ (ಲೀಲಾವತಿ,ದೊಡ್ಡಣ್ಣ, ಪವಿತ್ರ...). ಕೇವಲ ಕಲಾತ್ಮಕ ಚಿತ್ರಗಳ ಛಾಯಾಗ್ರಹಕ ಎಂಬ ಹಣೆಪಟ್ಟಿ ಹೊರ ಬೇಕಾಗಿದ್ದ ರಾಮಚಂದ್ರರನ್ನು ಕರೆತಂದ ದಿಟ್ಟ ನಿಲುವು. ಪಾತ್ರಕ್ಕೆ ತಕ್ಕಂತ ನಾಯಕಿಯ ಆಯ್ಕೆ. ಶೂಟಿಂಗ್‌ಗೆ ಆಯ್ದುಕೊಂಡ ಸ್ಥಳಗಳು. ಸಮಸ್ಯೆ ಬಂದಾಗ ಎದುರಿಸಿದ ಧೃಡ ನಿಲುವುಗಳು. ಹಾಡುಗಳ ಹಿಂದಿನ ಶ್ರಮ . ಚಿತ್ರಕತೆಯ ಆಯ್ಕೆ?. ..

ಈ ಚಿತ್ರ ತೆರೆಕಂಡ ಇಪ್ಪತ್ತೆೈದನೇ ದಿನದ ಸಂಭ್ರಮದಲ್ಲಿ ಸುದೀಪು 'ಐದು ಕೋಟಿ ಕನ್ನಡಿಗರು ನಮ್ಮಲ್ಲಿ ಎಲ್ಲಿದ್ದಾರೆ? ನಮ್ಮಲ್ಲಿರುವುದು ಕೇವಲ ಇಪ್ಪತ್ತು ಲಕ್ಷ ಮಾತ್ರ. " ಎಂದರು. ಯಾಕೆಂದರೆ ಅವರ ಪ್ರಕಾರ 'ಹದಿನೈದು ರೂಪಾಯಿ ಕೊಟ್ಟು ಒಬ್ಬ ಪ್ರೇಕ್ಷಕ ಚಿತ್ರ ನೋಡುತ್ತಾನೆ. 5 ಕೋಟಿ ಜನರಲ್ಲಿ ಒಂದು ಕೋಟಿ ಜನ ಬಂದರೂ 15 ಕೋಟಿ ಆಗುತ್ತದೆ. ಯಶಸ್ವೀ ಚಿತ್ರ ಗಳಿಕೆ ಎಂದರೆ 3ಕೋಟಿ. ಅಂದರೆ ಇಪ್ಪತ್ತು ಲಕ್ಷ ಜನ ಕನ್ನಡಿಗರು ಎಂದಾಯಿತು. " ಇದು ಸುದೀಪನ ಲೆಕ್ಕ.

ಪ್ರಾಯಶಃ ಸುದೀಪನ ನಿರೀಕ್ಷೆ ಸ್ವಾತಿಮುತ್ತಿನಲ್ಲಿ ಕೈಗೂಡಲಿಲ್ಲ. ಹೊಸತನದ ಹರಸಾಹಸವೇ ಹೀಗೆ. ಎಲ್ಲ ನೋಟದಲ್ಲೂ ಚಿತ್ರ ಚೆನ್ನಾಗಿದ್ದರೂ, ವಿಮರ್ಶೆಗಳು ಹೊಗಳಿದ್ದರೂ ಚಿತ್ರ ಆರಂಭಿಕ ಹಂತದಲ್ಲಿ ಮುಗ್ಗರಿಸಲು ಎರಡು ಕಾರಣ. ಇದು ಯಶಸ್ವೀ ಚಿತ್ರದ ರಿಮೇಕು ಹಾಗೂ ಕಮಲ್‌ ಅದ್ಭುತ ಅಭಿನಯದ ಮಾಜಿ ಚಿತ್ರ. ಟಿಕೇಟ್‌ ಕೊಳ್ಳುವ ಮುನ್ನ, ಜನ ಕಮಲ್‌ ಜೊತೆ ಸುದೀಪನನ್ನು ಚಿತ್ರ ನೋಡದೆ ಹೋಲಿಸುತ್ತಾರೆ. ಸರಿಸಮವಾಗದೆಂದು ತಾವೇ ನಿರ್ಧರಿಸುತ್ತಾರೆ. ಯಾಕೆಂದರೆ ಕನ್ನಡ ಚಿತ್ರವಲ್ಲ ... ಪೂರ್ವಾಗ್ರಹಿ ಭಾವನೆ. ಅದಕ್ಕಾಗಿ ಹೊಸ ಪ್ರಯತ್ನವ ಬಿಡಬಾರದು. ಬೀಳದೆ ಬಾಲೆ ನಡೆಯಲೊಲ್ಲದು. ಇಳಿಯದೆ ನೀರಿಗೆ ಚಳಿ ಬಿಡದು. ಹೇಳಿ, ಕನ್ನಡ ಚಿತ್ರ ರಂಗದಲ್ಲಿ ಎಲ್ಲರೂ ಚಿತ್ರದ ನಾಯಕರೆ ಆಗುತಿದ್ದಾರೆಯೇ ಹೊರತು ಚಿತ್ರರಂಗದ ನಾಯಕರಾಗುತ್ತಿಲ್ಲ ಅಲ್ಲವೇ! ನಮಗೀಗ ಬೇಕಾಗಿರುವುದು ನಾಯಕತ್ವ?

ಆದರೆ ಒಂದಂತೂ ಸ್ಪಷ್ಟ , ಕನ್ನಡದಲ್ಲಿ ಕತೆಗಳಿವೆ, ಸಾಹಿತ್ಯವಿದೆ, ಇಲ್ಲವೇ ಕತೆಗಾರರಿದ್ದಾರೆ...ಅವರಂತೂ ನಿಜವಾಗಿಯೂ ಕನ್ನಡಿಗರೇ! ಪಂಚಕೋಟಿಗಳಲ್ಲಿ ಒಬ್ಬರು. ಅದನ್ನು ಅರಿತರೆ ಕನ್ನಡಕ್ಕೊಂದು ಹೊಸತನ ನೀಡಬಹುದು. ಆಗ ಈ ಮಣ್ಣಿನ ಸೊಗಡು ಹಬ್ಬಬಹುದು.

ಗೆದ್ದೇ ಗೆಲ್ಲುತ್ತದೆ ಒಂದು ದಿನ

ಗೆಲ್ಲಲೇ ಬೇಕು ಒಳ್ಳೆ(ಹೊಸ)ತನ....

English summary
Swatimuttu, sudeep starer kannada movie is well received by audience. Its new trend in kannada cinema

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada