»   » ಸ್ವಾಮಿ ವಿವೇಕಾನಂದ ಜೀವನ ಕುರಿತ ತೆಲುಗು ಚಿತ್ರಕ್ಕೆ ಸಿದ್ಧತೆ

ಸ್ವಾಮಿ ವಿವೇಕಾನಂದ ಜೀವನ ಕುರಿತ ತೆಲುಗು ಚಿತ್ರಕ್ಕೆ ಸಿದ್ಧತೆ

Posted By:
Subscribe to Filmibeat Kannada


ಚಲನಚಿತ್ರದಿಂದ ಜನರಿಗೆ ಸಂದೇಶ ತಲುಪಿಸುವ ಕಾಲ ಯಾವಾಗಲೋ ಮುಗಿದುಹೋಯ್ತು. ಈಗ ಏನಿದ್ದರೂ ಬಂಡವಾಳಕ್ಕೆ ತಕ್ಕ ಆದಾಯ ಬರುವುದೇ ಎಂಬುದು ಚಿತ್ರ ನಿರ್ಮಿಸುವವರ ಚಿಂತೆ. ಸದಭಿರುಚಿಯ ಚಿತ್ರಗಳಿಗೆ ಹಾಗೂ ಭಕ್ತಿ ಪ್ರಧಾನ ಚಿತ್ರಗಳಿಗೆ ಕಮರ್ಷಿಯಲ್‌ ನಾಯಕರನ್ನು ಸೇರಿಸಿಕೊಂಡು ಜನರಿಗೆ ಸಂದೇಶ ನೀಡುತ್ತಾ, ಹಣವನ್ನು ಗಳಿಸುವ ಯುಕ್ತಿ ತೆಲುಗರಿಗೆ ಒಲಿದಿದೆ ಎಂದರೆ ತಪ್ಪಾಗಲಾರದು.

  • ಮಲೆನಾಡಿಗ.
ಅನ್ನಮಯ್ಯ, ಶ್ರೀರಾಮದಾಸು ಚಿತ್ರಗಳ ಮೂಲಕ ತೆಲುಗರಲ್ಲಿ ಭಕ್ತಿ ಭಾವ ಹೆಚ್ಚುವಂತೆ ಮಾಡಿ ಸಾಕಷ್ಟು ಜನಮನ್ನಣೆ ಹಾಗೂ ಹಣ ಗಳಿಸಿದ ಖ್ಯಾತ ತೆಲುಗು ಚಲನಚಿತ್ರ ನಿರ್ದೇಶಕ ಕೆ .ರಾಘವೇಂದ್ರರಾವ್‌ರವರು ಹೊಸ ಚಿತ್ರದ ಆಲೋಚನೆಯಲ್ಲಿ ತೊಡಗಿದ್ದಾರೆ.

ಅನ್ನಮಯ್ಯ ಹಾಗೂ ಶ್ರೀ ರಾಮದಾಸು ಪಾತ್ರಗಳಲ್ಲಿ ನಟ ನಾಗಾರ್ಜುನ ಅದ್ಭುತವಾಗಿ ನಟಿಸಿದ್ದು, ಈಗ ಹಳೆ ಸಂಗತಿ. ಸದ್ಯ ನಟ ಬಾಲಕೃಷ್ಣರವರಿಗೆ ಸೂಪರ್‌ಹಿಟ್‌ ಚಿತ್ರ ನೀಡುವ ಸಲುವಾಗಿ ರಂಗಾ ಪಾಂಡು ರಂಗ ಚಿತ್ರ ನಿರ್ದೇಶಿಸುತ್ತಿರುವ ಕೆ. ರಾಘವೇಂದ್ರರಾಯರು, ಆ ಚಿತ್ರದ ನಂತರ ತಮ್ಮ ಮಹತ್ತರ ಯೋಜನೆಯಾದ ಸ್ವಾಮಿ ವಿವೇಕಾನಂದರವರ ಜೀವನ ಚರಿತ್ರೆ ಕುರಿತ ಚಿತ್ರ ನಿರ್ಮಾಣದಲ್ಲಿ ತೊಡಗುವುದಾಗಿ ಹೇಳಿದ್ದಾರೆ.

ಈ ಚಿತ್ರದ ಪ್ರಧಾನ ಪಾತ್ರಕ್ಕೆ ನಟ ಸುಮಂತ್‌ ಅವರನ್ನು ಆರಿಸಿದ್ದಾರೆ. ಅಗಷ್ಟ್‌ನಲ್ಲಿ ಚಿತ್ರೀಕರಣ ನಡೆಯುವ ಸಾಧ್ಯತೆಯಿದೆ ಎಂದು ರಾಯರು ಹೇಳುತ್ತಾರೆ.

ತೆಲುಗು ಚಿತ್ರರಂಗ ಅಗಿಂದಾಗ್ಗೆ ಜನರಲ್ಲಿ ಭಕ್ತಿ ಭಾವ ಮೂಡಿಸುವ ಸಿನೆಮಾಗಳನ್ನು ನೀಡುವ ಟ್ರೆಂಡ್‌ ಉಳಿಸಿಕೊಂಡು ಬಂದಿದೆ ಎನ್ನುವುದು ಸರ್ವವಿದಿತ. ಕನ್ನಡದ ಮಟ್ಟಿಗೆ ಜನರಿಗೆ ಭಕ್ತಿ ಪ್ರಧಾನ ಚಿತ್ರಗಳು ಇತ್ತೀಚೆಗೆ ಯಶಸ್ವಿಯಾದ ಉದಾಹರಣೆಗಳಿಲ್ಲ.

ಆದರೆ ತೆಲುಗಿನಲ್ಲಿ ಕಮರ್ಷಿಯಲ್‌ ಹೀರೋಗಳು, ವಿಲನ್‌ ಪಾತ್ರಧಾರಿಗಳು, ಭಕ್ತಿ ಪ್ರಧಾನ ಪಾತ್ರದಲ್ಲಿ ಮಿಂಚಿದ್ದಾರೆ ಎಂದರೆ ಸುಳ್ಳಲ್ಲ. ಕನ್ನಡದಲ್ಲಿ ಇಂತಹ ಚಿತ್ರಗಳು ಬಂದು ಹೋದರೂ ಯಾರಿಗೂ ತಿಳಿಯುವುದಿಲ್ಲ. ಐತಿಹಾಸಿಕ ಚಿತ್ರ ಕಲ್ಲರಳಿ ಹೂವಾಗಿ ಅದ್ದೂರಿ ತಾರಾಗಣದ ಹೊರತಾಗಿ ಹಣ ಗಳಿಸಲು ವಿಫಲವಾದರೆ, ಭಕ್ತಿ ಪ್ರಧಾನ ಚಿತ್ರ ಕೈವಾರ ತಾತಯ್ಯ ಕುರಿತ ಸಾಯಿಕುಮಾರ್‌ಅಭಿನಯದ ಚಿತ್ರದಲ್ಲಿ ಹಂಸಲೇಖರ ಸಂಗೀತವಿದ್ದಾಗ್ಯೂ ಮುಗ್ಗರಿಸಿತು. ಅನು ಪ್ರಭಾಕರ್‌ ಅಭಿನಯದ ದಾನಮ್ಮ ದೇವಿ ಚಿತ್ರ ತೆರೆಯ ಮೇಲೆ ಯಾವಾಗ ಬಂದು ಹೋಯ್ತು ಬಲ್ಲವರಿಲ್ಲ.

ಒಟ್ಟಿನಲ್ಲಿ ಪ್ರತಿಭಾವಂತರನ್ನು ಕಲೆ ಹಾಕಿ ಲೆಕ್ಕಾಚಾರವಾಗಿ ಸಿನೆಮಾ ಮಾಡಿ ಹಣ ಗಳಿಸುವ ಬಗ್ಗೆ ನಮ್ಮವರು ಇನ್ನೂ ಕಲಿಯಬೇಕಿದೆ. ಇತ್ತೀಚಿನ ಮುಂಗಾರು ಮಳೆ. ದುನಿಯಾ ಚಿತ್ರ ಲೋ ಬಜೆಟ್‌ ಅನ್ನೋದು ಬಿಟ್ಟರೆ, ಕನ್ನಡ ಚಿತ್ರರಂಗ ಅಷ್ಟು ಬಡತನದಲ್ಲಿದ್ದೀಯಾ ಎಂಬ ಪ್ರಶ್ನೆ ಕಾಡುತ್ತದೆ.

ಸ್ವಾಮಿ ವಿವೇಕಾನಂದರ ಕುರಿತ ಚಿತ್ರವನ್ನು ಸಂಸ್ಕೃತದಲ್ಲಿ ಕನ್ನಡ ಚಿತ್ರರಂಗದ ಭೀಷ್ಮ ಜಿ.ವಿ. ಅಯ್ಯರ್‌ರವರು ತೆರೆಗೆ ತಂದಿದ್ದರು ಎಂಬುದಷ್ಟೆ ಕನ್ನಡಿಗರ ಪಾಲಿಗೆ ಹರ್ಷಪಡುವ ಸಂಗತಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada