»   » ಚಿತ್ರಲೋಕ ಹುಟ್ಟುಹಬ್ಬದಲ್ಲಿ ಡಾಟ್‌ ಕಾಮುಕರು

ಚಿತ್ರಲೋಕ ಹುಟ್ಟುಹಬ್ಬದಲ್ಲಿ ಡಾಟ್‌ ಕಾಮುಕರು

Posted By: Staff
Subscribe to Filmibeat Kannada
K.M.Veeresh
ರಿಸೆಷನ್ನಿನ ಅಲೆಯ ನಡುವೆ ಏಗಿ ಜೀವಂತ ಉಳಿದು, ಜೀವಂತಿಕೆಯನ್ನೂ ಕಾಪಿಟ್ಟುಕೊಂಡಿರುವ ಮೂರು ಮತ್ತೊಂದು ವೆಬ್‌ಸೈಟುಗಳ ಪೈಕಿ ಒಂದು ವೃತ್ತಿಮಿತ್ರ ಕೆ.ಎಂ.ವೀರೇಶ್‌ ಅವರ ಚಿತ್ರಲೋಕ ಡಾಟ್‌ ಕಾಂ. ನಿನ್ನೆ (ಜೂನ್‌ 26) ವೀರೇಶ್‌ ಡಾಟ್‌ಕಾಂ ಕೂಸಿಗೆ ಮೂರು ತುಂಬಿ ನಾಲ್ಕಕ್ಕೆ ಬಿದ್ದ ಸಂಭ್ರಮದ ಪಾಲು ನಮಗೂ ಸಂದಿತು.

ಒಂದಷ್ಟು ಸಮಾನ ಮನಸ್ಕರನ್ನು ಹಾಗೂ ವೃತ್ತಿ ಬಾಂಧವರನ್ನು ಕಲೆಹಾಕಿ, ಅವರೊಟ್ಟಿಗೆ ವಿಚಾರ ವಿನಿಮಯ ಮಾಡಿಕೊಳ್ಳುವ ವೀರೇಶ್‌ ಉಮೇದಿಗೆ ಅರ್ಥವಿತ್ತು. ಸಿನಿಮಾ ಸುದ್ದಿಗೆ ಶುಕ್ರವಾರವನ್ನೇ ಎದುರು ನೋಡುವ ಕಾಲವನ್ನು ಅಳಿಸಿ ಹಾಕಿದ ಚಿತ್ರಲೋಕ ಡಾಟ್‌ ಕಾಂನಲ್ಲಿ ಕನ್ನಡ ಸಿನಿಮಾ ಲೋಕದ ಅವತ್ತಿನವತ್ತು ಕದಲಿಕೆಗಳು ದಾಖಲಾಗುತ್ತವೆ. ಚೆಂದದ ಫೋಟೋಗಳು ವರದಿಗಳನ್ನು ಚಿತ್ರವತ್ತಾಗಿ ಕೊಡುತ್ತವೆ.

ಚಿತ್ರಲೋಕದ ಪುಟ್ಟ ಪುಟ್ಟ ಹೆಜ್ಜೆಗಳನ್ನು ವೀರೇಶ್‌ ಹೇಳಿದ್ದು ಹೀಗೆ...

ಅಪ್ಪ ಹಾಗೂ ಕೆಲವು ಹಿತೈಷಿಗಳು ಕೊಟ್ಟ ಧೈರ್ಯದ ಮೇಲೆ ಕನ್ನಡ ಸಿನಿಮಾಗೇ ಮೀಸಲಾದ ವೆಬ್‌ಸೈಟನ್ನು ಮಾಡಿದೆ. ಏರಿಳಿತಗಳ ನಡುವೆಯೂ ಜಗ್ಗದೆ ನಿಭಾಯಿಸಿಕೊಂಡು ಬಂದೆ. ಓದುಗರ ಒಲವಿನ ಓಲೆಗಳಿಗಳಿಗೂ ಸ್ಪಂದಿಸುತ್ತ, ಸಿನಿಮಾ ಮಂದಿಗೆ ಬೇಸರವೂ ಆಗದಂತೆ ತೂಗಿಸಿಕೊಂಡು ಹೋಗುವ ಸವಾಲು ಇಲ್ಲಿದೆ. ಇಲ್ಲಿನ ಸಿನಿಮಾ ಲೋಕಕ್ಕೆ ಹಾಗೂ ಕಡಲಾಚೆಯ- ಗಡಿಯಾಚೆಯ ಜನಮನಕ್ಕೆ ಚಿತ್ರಲೋಕ ಸೇತುವೆ. ಖುದ್ದು ನಾನು ಫೋಟೋಗ್ರಾಫರ್‌ ಆಗಿರುವುದರಿಂದ ಚಿತ್ರಲೋಕ ಹೆಸರಿಗೆ ತಕ್ಕ ಹಾಕಿದೆ.

ಫೋಟೋ ಕಾಮಿಕ್ಸ್‌ನ ಹೊಸ ಪರಿಕಲ್ಪನೆಯನ್ನು ರೂಢಿಸಿಕೊಂಡ ಮೊದಲ ಪೋರ್ಟಲ್‌ ಚಿತ್ರಲೋಕ. ಮದನ್‌ ಮಲ್ಲು ಆಸಿಡ್‌ ಆರ್ಭಟವನ್ನು ಮೊದಲು ಬಯಲಿಗೆ ತಂದಿದ್ದು ಚಿತ್ರಲೋಕ. ಫೋಟೋ ಕಾಮಿಕ್ಸ್‌ ಮೂಲಕ ಹೊಸ ನಾಯಕನೊಬ್ಬನನ್ನು ಪರಿಚಯಿಸಿ, ಆತನಿಗೆ ನಾಲ್ಕು ಕನ್ನಡ ಸಿನಿಮಾ (ಮಲ್ಲ, ಜಬರ್‌ದಸ್ತ್‌ ಇತ್ಯಾದಿ) ಗಳಲ್ಲಿ ಖಳ ನಟನ ಅವಕಾಶ ಗಿಟ್ಟಿಸಿಕೊಟ್ಟದ್ದು ಚಿತ್ರಲೋಕ....

ಚಿತ್ರಲೋಕದಲ್ಲಿ ನಾಗತಿ : ಚಿತ್ರಲೋಕದ ಪ್ರವರದ ನಂತರ ವೀರೇಶ್‌ ತಮ್ಮ ಮುಂದಿನ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹೇಳಿಕೊಂಡರು. 'ಹಾಯ್‌ ಬೆಂಗಳೂರ್‌' ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ನಾಗತಿಹಳ್ಳಿ ಚಂದ್ರಶೇಖರ್‌ ಅವರ 'ನನ್ನ ಪ್ರೀತಿಯ ಹುಡುಗಿ' ಅಂಕಣ ವೀರೇಶ್‌ ಪೋರ್ಟಲ್‌ನಲ್ಲಿ ಯಥಾವತ್ತಾಗಿ ಪ್ರಕಟವಾಗಲಿದೆ. ಚಿತ್ರವೊಂದರ ಕತೆಯ ಮೊದಲಾರ್ಧ ಹೇಳಿ, ಕ್ಲೈಮ್ಯಾಕ್ಸನ್ನು ಅಂದಾಜು ಮಾಡುವ ಸವಾಲನ್ನು ಓದುಗರಿಗೆ ಒಡ್ಡಿ, ಒರಿಜಿನಲ್‌ ಚಿತ್ರಕತೆಗೂ ಓದುಗರ ಲೆಕ್ಕಾಚಾರಕ್ಕೂ ತಾಳೆಯಾದಲ್ಲಿ ಬಹುಮಾನ ಕೊಡುವುದು- ವೀರೇಶ್‌ ಅಂದುಕೊಂಡಿರುವ ಇನ್ನೊಂದು ಯೋಜನೆ.

ಸಿನಿಮಾದೋರು ಯಾರು ಡಾಟ್‌ ಕಾಂ ಓದುತ್ತಾರೆ ಹೇಳಿ?
ಮುದ್ರಣ ಮಾಧ್ಯಮದವರೊಬ್ಬರು ಸಿಡಿಸಿದ ಈ ಪ್ರಶ್ನೆಗೆ ವೀರೇಶ್‌ ಕೊಟ್ಟ ಉತ್ತರ ನಿಜಕ್ಕೂ ಸೋಜಿಗ ಹುಟ್ಟಿಸಿತು. ಪ್ರಶಸ್ತಿ ವಿಜೇತ ನಿರ್ದೇಶಕಿ ಕವಿತಾ ಲಂಕೇಶ್‌, ವಿಷ್ಣುವರ್ಧನ್‌ ಮಗಳು ಕೀರ್ತಿ, ಪುನೀತ್‌ ರಾಜ್‌ಕುಮಾರ್‌, ಅಂಬರೀಶ್‌ ಮಡದಿ ಸುಮಲತಾ- ಇವರೆಲ್ಲರಿಗೆ ಚಿತ್ರಲೋಕ.ಕಾಂ ಹಾಗೂ ದಟ್ಸ್‌ಕನ್ನಡ ಡಾಟ್‌ ಕಾಂ ಪರಿಚಿತ.

ಚಿತ್ರಲೋಕದ ನಡೆಗಳನ್ನು ಬಿಚ್ಚಿಟ್ಟ ವೀರೇಶ್‌, ತಮ್ಮ ಪೋರ್ಟಲ್‌ನ ಬೆಳವಣಿಗೆಗೆ ಚಿತ್ರೋದ್ಯಮದ ಮಂದಿ, ಅದರಲ್ಲೂ ವಿಶೇಷವಾಗಿ ನಿರ್ಮಾಪಕರು ಹಾಗೂ ಸಂಪರ್ಕಾಧಿಕಾರಿಗಳು ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡರು.

ವೀರೇಶ್‌ ಜೊತೆ ಪ್ರಶ್ನೋತ್ತರ ಕಾರ್ಯಕ್ರಮದ ನಂತರ ಬೆಂಗಳೂರು ಪ್ರೆಸ್‌ ಕ್ಲಬ್ಬಿನ ಹೆಂಚಿನ ಮನೆಯಲ್ಲಿ ಅಘೋಷಿತ ವಿಚಾರ ಸಂಕಿರಣವೇ ಶುರುವಾಯಿತು. ಡಾಟ್‌ ಕಾಂ ಪತ್ರಿಕೋದ್ಯಮದ ಬದುಕು- ಬವಣೆಯಿಂದ ಹಿಡಿದು ಅದು ಮುಟ್ಟಬೇಕಾದ ಗುರಿಯ ಲೆಕ್ಕಾಚಾರದವರೆಗೆ ಮಾತು ಹರಿದಾಡಿತು. ಎಜುಕೇಷನ್‌ಬೆಂಗಳೂರು ಡಾಟ್‌ ಕಾಂನ ರವಿ ಹೆಗಡೆ, ಕನ್ನಡ ಪ್ರಭದ ರಂಗನಾಥ್‌- ಗಿರೀಶ್‌ ರಾವ್‌- ಉದಯ ಮರಕಿಣಿ, ಸಿನಿಮಾ ಪಿಆರ್‌ಓ ಡಿ.ವಿ.ಸುಧೀಂದ್ರ- ನಾಗೇಂದ್ರ, ರಂಗ ಹಾಗೂ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಹಿರೀಕ ಎ.ಎಸ್‌.ಮೂರ್ತಿ ಮೊದಲಾದವರ ಜೊತೆ ದಟ್ಸ್‌ಕನ್ನಡ ಬಳಗದ 'ಡಾಟ್‌ ಕಾಮುಕರು' ಮುಕ್ತ ಮಾತುಕತೆ ನಡೆಸಿದರು.

ಭವಿಷ್ಯದ ಹುಡುಕಾಟದಲ್ಲಿ... : ಅಭಿವೃದ್ಧಿಶೀಲ, ಅಭಿವೃದ್ದಿ ಹೊಂದುತ್ತಿರುವ ಹಾಗೂ ಬಡ ರಾಷ್ಟ್ರಗಳಲ್ಲಿ ಇಂಟರ್ನೆಟ್‌ ಕನೆಕ್ಟಿವಿಟಿಯ ಪ್ರಮಾಣ ಅಲ್ಲಲ್ಲಿಯ ತಲಾದಾಯವನ್ನು ಅವಲಂಬಿಸಿರುತ್ತದೆ. ಭಾರತದಲ್ಲಿ ವೆಬ್‌ ಮಾಧ್ಯಮ ಈಗಿನ್ನೂ ಗರಿಗೆದರುತ್ತಿದೆ. ಹಳ್ಳಿಗರಿಗೆ ಇಂಟರ್ನೆಟ್‌ ಮಾಧ್ಯಮವನ್ನು ತಲುಪಿಸುವುದು ಆಗುತ್ತಲೇ ಇಲ್ಲವಲ್ಲ , ಹಳ್ಳಿಗರಿರಲಿ ಪಟ್ಟಣದ ಓದುಗರೇ ಕಾಸು ಕೊಟ್ಟು ಡಾಟ್‌ಕಾಂಗಳ ಪೊರೆಯುತ್ತಿಲ್ಲವಲ್ಲ , ಇನ್‌ಫೊಟೈನ್‌ಮೆಂಟ್‌ ಮೀರಿ ಇಂಟರ್ನೆಟ್ಟು ಜೀವನದ ಅವಿಭಾಜ್ಯ ಅಂಗವಾಗಿ ಇನ್ನೂ ಬೆಳೆದಿಲ್ಲವಲ್ಲ... ಹೀಗೆ ವಿಚಾರ ಸಂಕಿರಣ ಡಾಟ್‌ ಕಾಮ್‌ ಲೋಕದಲ್ಲಿ ಸಂಚರಿಸಿತು.

ಇಂಟರ್ನೆಟ್‌ನಂಥಾ ಅದ್ಭುತ ಮಾಧ್ಯಮ ಇನ್ನೊಂದಿಲ್ಲ. ಇಲ್ಲಿ ಚಿತ್ರ ನೋಡಬಹುದು, ಮಾತು- ಹಾಡು ಕೇಳಬಹುದು, ಓದಬಹುದು, ಪರಸ್ಪರ ಮಾತಾಡಬಹುದು, ತಕ್ಷಣವೇ ಪ್ರತಿಕ್ರಿಯೆ ಕೊಡಬಹುದು. ಇಷ್ಟೆಲ್ಲ ಕೆಲಸ ಸಾಧ್ಯವಿರುವ ಇನ್ನೊಂದು ಮಾಧ್ಯಮ ಸದ್ಯಕ್ಕಿಲ್ಲ. ಹಾಗಾಗಿ ಇಂಟರ್ನೆಟ್‌ ಒಂದು ಶಕ್ತಿಯುತ ಮಾಧ್ಯಮ. ಇದನ್ನು ಜನಮುಖಿಯಷ್ಟೇ ಅಲ್ಲ ರೈತಮುಖಿಯಾಗಿಸುವುದೂ ಸಾಧ್ಯ ಅನ್ನೋದು ರವಿ ಹೆಗಡೆ ವಾದ.

ಡಾಕ್ಯುಮೆಂಟರಿ ಹ್ಯಾಂಗೋವರ್‌ನಲ್ಲಿರುವ ಭಾರತೀಯ ಮನಸ್ಸಿನ ಜಾಯಮಾನ ಇಂಟೆರ್ನೆಟ್‌ನಂಥಾ ಹೊಸ ಮಾಧ್ಯಮವನ್ನು ತಕ್ಷಣಕ್ಕೇ ಅಪ್ಪಿಕೊಳ್ಳುತ್ತಿಲ್ಲ. ಇನ್ನಷ್ಟು ವರ್ಷಗಳ ನಂತರ ಇಂಟರ್ನೆಟ್ಟು ಅಗ್ಗದ ಬೆಲೆಗ ಎಟುಕಿ, ಮನೆಮನೆಯಲ್ಲಿ ಪತ್ರಿಕೆ ಕಟ್ಟಿಕೊಡುವ ಅನುಭವವನ್ನೇ ದಕ್ಕಿಸಬಹುದೆಂಬ ಆಶಾ ಭಾವನೆಯನ್ನು ಕನ್ನಡ ಪ್ರಭದ ರಂಗನಾಥ್‌ ವ್ಯಕ್ತಪಡಿಸಿದರು.

ಓದುಗರ ನಿರೀಕ್ಷೆಗಳು, ಡಾಟ್‌ಕಾಂ ಪತ್ರಿಕೋದ್ಯಮದ ಸವಾಲುಗಳು, ಜನರೇಷನ್‌ ಅನ್ನುವುದು ಇಂಟರ್ನೆಟ್‌ ಓದುಗರ ಮಟ್ಟಿಗೆ ಹೇಗೆ ಕೆಲಸ ಮಾಡುತ್ತಿದೆ (ಹೊಸ ತಲೆಮಾರಿನ ಯುವಕರೇ ಇಂಟರ್ನೆಟ್‌ ಓದೋದು ಹೆಚ್ಚು) ಅವಕ್ಕೆ ಕೊಡಬೇಕಾದ ಜವಾಬುಗಳು, ಈ ಮಾಧ್ಯಮದ ಮಿತಿ ಹಾಗೂ ವಿಶಾಲ ವ್ಯಾಪ್ತಿ, ಸಾಗರದಾಚೆದಿನ ಓದುಗರ ಮನಸ್ಥಿತಿ... ಮೊದಲಾದ ವಿಷಯಗಳ ಸುತ್ತ ಮಾತು ಗಿರಕಿ ಹೊಡೆಯಿತು. ಎಷ್ಟು ಮಾತಾದರೂ ಅದು ಮುಗಿಯಲೇ ಇಲ್ಲ. ವ್ಯೋಮ ಪ್ರಪಂಚ ಉರುಫ್‌ ಸೈಬರ್‌ ಲೋಕವೇ ಹಾಗಲ್ಲವೇ; ಕೊನೆ- ಮೊದಲು ಕಣ್ಣಳತೆಗೆ ಸಿಗುವಂಥದಲ್ಲ.

ಎನಿವೇ.. ಹ್ಯಾಪಿ ಬರ್ತ್‌ಡೇ ಚಿತ್ರಲೋಕ.

English summary
An informal seminar on dot com journalism on the occassion of Chitraloka.coms birthday

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada