»   » ಸಂತೋಷದ ಕ್ಷಣಗಳಲ್ಲಿ ಅದರ ಬಳಗ ಹೇಗಿರಬಹುದು?

ಸಂತೋಷದ ಕ್ಷಣಗಳಲ್ಲಿ ಅದರ ಬಳಗ ಹೇಗಿರಬಹುದು?

Posted By: *ಎಸ್ಕೆ.ಶಾಮಸುಂದರ
Subscribe to Filmibeat Kannada

ಸ್ವರ್ಣ ಕಮಲದ ಖುಷಿಯನ್ನು ಗಿರೀಶ್‌ ಕಾಸರವಳ್ಳಿ ಹೇಗೆ ಸೆಲೆಬ್ರೇಟ್‌ ಮಾಡುತ್ತಿರಬಹುದು ಅನ್ನುವ ಕುತೂಹಲ ಅವರ ಸ್ಪೈಸ್‌ ಮೊಬೈಲಿಗೆ ಫೋನಾಯಿಸಲು ಕುಮ್ಮಕ್ಕು ಕೊಟ್ಟಿತು. ಆದರೆ ಅವರು ಮೊಬೈಲ್‌ ಫೋನಿನ ಸಂದೇಶದ ಅಲೆಗಳು ತಾಕದಷ್ಟು ದೂರ. ಯಾಕೋ ಸುಮ್ಮನಾಗಲು ಮನಸ್ಸು ಬಿಡಲಿಲ್ಲ. ಪದೇಪದೇ ಯತ್ನದ ನಂತರ ಕೊನೆಗೂ ಕಾಸರವಳ್ಳಿ ದನಿ ಅತ್ತಲಿಂದ ಕೇಳಿತು. ..

'ಸ್ವರ್ಣ ಕಮಲ ಬಂದದ್ದು ಖುಷಿಯಾಗಿದೆ. ನಾನೆಲ್ಲೋ ಒಂದು ಕಡೆ ಇದನ್ನ expect ಮಾಡ್ತಿದ್ದೆ. ಈ ಹಿಂದೆ ತಿರುವನಂತಪುರದಲ್ಲಿ 'ದ್ವೀಪ' ಚಿತ್ರವನ್ನು ಕೆಲವು ಸಿನಿಮಾ ಪಂಡಿತರಿಗೆ ತೋರಿಸಿದ್ದೆ. ಅಲ್ಲಿ ಒಳ್ಳೆ ಅಭಿಪ್ರಾಯ ಬಂದಿತ್ತು. ಆಗಲೇ ಈ ಸಿನಿಮಾಗೆ ಸ್ವರ್ಣ ಕಮಲ ಸಿಗಬಹುದು ಅಂತ ಸಣ್ಣ ನಿರೀಕ್ಷೆ ಹುಟ್ಟಿದ್ದು. ಸೌಂದರ್ಯಗೆ ಶ್ರೇಷ್ಠ ನಟಿ ಪ್ರಶಸ್ತಿ ಸಿಗುತ್ತೆ ಅಂತ ನಿರೀಕ್ಷಿಸಿದ್ದೆ. I am a bit disappointed'. ಹೆಚ್ಚು ಮಾತಾಡಲು ಕಾಸರವಳ್ಳಿಗೆ ಪುರುಸೊತ್ತಿರಲಿಲ್ಲ. ಅವರಿದ್ದದ್ದು ಚನ್ನಪಟ್ಟಣದಲ್ಲಿ. 'ಗೃಹಭಂಗ' ಧಾರಾವಾಹಿಯ ಶೂಟಿಂಗ್‌ನಲ್ಲಿ ಅವರು ಬ್ಯುಸಿ. ಸ್ವರ್ಣ ಕಮಲ ಸಿಕ್ಕ ಖುಷಿಯನ್ನೂ ಕಾಯಕದ ನಡುವೆಯೇ ಅವರು ಆಚರಿಸುತ್ತಿದ್ದರು.

ಓವರ್‌ ಟು ಅವಿನಾಶ್‌
ಈಗ ನೆನಪಾದ ನಂಬರ್‌ ಅವಿನಾಶ್‌ದು. ದ್ವೀಪ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿರುವ ಅವಿನಾಶ್‌ ಪ್ರತಿಕ್ರಿಯೆ ಇಂತು ಹೊರಬಂತು- 'ನಾನು ಶ್ರೇಷ್ಠ ನಟ ಪ್ರಶಸ್ತಿಯನ್ನು ನಿರೀಕ್ಷಿಸಿದ್ದೆ. ಆಸ್ಕರ್‌ಗೆ ನಾಮಿನೇಟ್‌ ಆಗಿದ್ದ 'ಲಗಾನ್‌'ನಂಥಾ ಚಿತ್ರ ಇದ್ದಾಗಲೂ ಕೂಡ ಆಯ್ಕೆ ಸಮಿತಿ ಯಾವುದೇ ಪೂವ್ರಾಗ್ರಹಗಳಿಗೆ ಜೋತುಬೀಳದೆ ದ್ವೀಪ ಚಿತ್ರಕ್ಕೆ ಸ್ವರ್ಣ ಕಮಲ ಕೊಟ್ಟಿದೆ. ಪ್ರಶಸ್ತಿಗೆ ಇರುವ ನಿಜವಾದ ತೂಕವನ್ನು ಸಮಿತಿ ಉಳಿಸಿಕೊಂಡಿರುವುದಕ್ಕೆ ಅದರ ಮಾನದಂಡವೇ ಸಾಕ್ಷಿ. ತುಂಬಾ ಸಂತೋಷವಾಗ್ತಿದೆ'.

ನಾನು ಖಂಡಿತ ಪ್ರಶಸ್ತಿ ನಿರೀಕ್ಷಿಸಿರಲಿಲ್ಲ
'ಲಗಾನ್‌ ಇತ್ತು, ದಿಲ್‌ ಚಾಹ್ತಾ ಹೈ, ಅಶೋಕಾ ಇದ್ದವು. ಮೇಲಾಗಿ ಫೋಟೋಗ್ರಫಿ ಬಗ್ಗೆ ಸಾಕಷ್ಟು ಸದ್ದು ಮಾಡಿದ ಅಕ್ಸ್‌ ಇತ್ತು. ಇಂಥಾ ಚರಿಷ್ಮಾಟಿಕ್‌ ಚಿತ್ರಗಳಿರುವಾಗ ನನ್ನ ಛಾಯಾಗ್ರಹಣಕ್ಕೆ ಪ್ರಶಸ್ತಿ ಬರುತ್ತೆ ಅನ್ನವ ಸಣ್ಣ ನಿರೀಕ್ಷೆಯೂ ಇರಲಿಲ್ಲ. ಇಂಥಾ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆಯೆನಿಸಿದೆ. ಗಿರೀಶ್‌ ಕಾಸರವಳ್ಳಿಯವರಿಗೆ ಮನೋಹರ ದೃಶ್ಯಗಳು ಬೇಡ. ಅವರ ನಿರೀಕ್ಷೆಯೇ ಬೇರೆ. There shoul be some point ಅನ್ನುವುದು ಅವರ ನಿರೀಕ್ಷೆ. ಸಿನಿಮಾದ ಅರ್ಧ ಶೂಟಿಂಗ್‌ನಲ್ಲಿ ಮಳೆ ಇತ್ತು. ಇನ್ನರ್ಧಕ್ಕೆ ಮಳೆ ಇರಲಿಲ್ಲ. ಎರಡರಲ್ಲೂ ಒಂದೇ ಎಫೆಕ್ಟ್‌ ಕೊಡೋದು ಸವಾಲಾಯಿತು. ಪ್ರಾಯಶಃ ಅದರಲ್ಲಿ ನಾನು ಗೆದ್ದೆ'- ಎಚ್‌.ಎಂ.ರಾಮಚಂದ್ರ ಆನಂದದ ತುತ್ತ ತುದಿಯಲ್ಲಿದ್ದರು

ಹ್ಯಾಟ್ರಿಕ್‌ ಸಾಧಿಸ್ತೀನಿ- ಶೇಷಾದ್ರಿ
ಫೋನೆತ್ತಿದ್ದೇ ತಡ, ಶೇಷಾದ್ರಿ ನಗು ಬೆರೆಸಿದ ಮಾತಲ್ಲೇ 'ನಾನು ಜಿಗಿಯುತ್ತಿದ್ದೇನೆ' ಅಂತ ಆನಂದತುಂದೀಲರಾಗಿ ಹೇಳಿದರು. 'ನನ್ನ ಆತ್ಮವಿಶ್ವಾಸ ಈಗ ಡಬಲ್‌ ಆಗಿದೆ. ಮುಂದಿನ ವರ್ಷವೂ ಒಳ್ಳೆ ಚಿತ್ರ ಮಾಡಿ, ಹ್ಯಾಟ್ರಿಕ್‌ ಸಾಧನೆ ಮಾಡ್ತೀನಿ' ಅಂತ ಶೇಷಾದ್ರಿ ಬೀಗಿದರು.

ಗಿರೀಶ್‌ ಕಾಸರವಳ್ಳಿ ಅವರಿಗೂ ಪ್ರಶಸ್ತಿ ಸಿಗಬೇಕಿತ್ತು
ಹತ್ತು ಹಲವು ಟಿವಿ ಕೆಮೆರಾಗಳಿಗೆ ಮುಖ ಕೊಟ್ಟು ಸುಸ್ತಾಗಿದ್ದ ಸೌಂದರ್ಯ ಶುಕ್ರವಾರ ರಾತ್ರಿಯಾದರೂ ಅದೇ ನಗೆಯನ್ನು ಉಳಿಸಿಕೊಂಡಿದ್ದರು. ಎಷ್ಟೇ ಫೋನು ಬಂದರೂ ಅವರು ಬೇಜಾರಾಗಿರಲಿಲ್ಲ. ನಮ್ಮ ಫೋನಿಗೆ ಅವರು ಕೊಟ್ಟ ಪ್ರತಿಕ್ರಿಯೆಯಲ್ಲಿ ವ್ಯಕ್ತವಾದದ್ದು ಕಂಡಾಪಟ್ಟೆ ಆತ್ಮವಿಶ್ವಾಸ, ಒಂದಿಷ್ಟು ಹೆಚ್ಚು ನಿರೀಕ್ಷೆ. ಸೌಂದರ್ಯ ಮಾತುಗಳಲ್ಲೇ ಕೇಳಿ- 'ಉತ್ತೇಜನ ಬಂದಿದೆ. ಪ್ರೋತ್ಸಾಹ ಸಿಕ್ಕಂತಾಗಿದೆ. ಪ್ರಶಸ್ತಿ ಸಮಿತಿಗೆ ಸ್ಟೋರಿ ಇಷ್ಟವಾಗಿರಬಹುದು. ದ್ವೀಪ ಒಂದು natural story! ಒಂದು ಒಳ್ಳೆ ಚಿತ್ರ ಅಂತ ಗುರ್ತಿಸಿಕೊಂಡ ಮೇಲೆ ಅದರ ನಿರ್ದೇಶಕರಿಗೂ ಪ್ರಶಸ್ತಿ ಸಿಗಲೇಬೇಕಿತ್ತು. ಆದರೆ ಗಿರೀಶ್‌ ಕಾಸರವಳ್ಳಿಯವರಿಗೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಸಿಕ್ಕಿಲ್ಲ. ಅದೂ ಸಿಕ್ಕಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು'.ವಾರ್ತಾ ಸಂಚಯ

English summary
I expected this award for Dweepa Girish Kasaravalli. Girish should have honored with Best Director Soundarya. I am flying on 9th cloud P.Sheshadri

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada