»   » ಎರಡು ಸಲ ಸಾವಿನ ಮನೆ ಮುಟ್ಟಿ ಬಂದೆ- ವಜ್ರಮುನಿ

ಎರಡು ಸಲ ಸಾವಿನ ಮನೆ ಮುಟ್ಟಿ ಬಂದೆ- ವಜ್ರಮುನಿ

Posted By: Staff
Subscribe to Filmibeat Kannada

'ಶಾಲೆಗೆ ಫೀಸು ಕಟ್ಟಲೂ ಹಣವಿರಲಿಲ್ಲ .
ಒಂದಾಣೆಗೆ ಹುಲ್ಲು ಮಾರಿ ದಿನ ಸವೆಸುತ್ತಿದ್ದ ದಿನಗಳು. ಶಾಂತಿ ಟಾಕೀಸ್‌ನಿಂದ ಜಯನಗರಕ್ಕೆ ಹುಲ್ಲು ಹೊತ್ತುಕೊಂಡು ಹೋಗಿ ಮಾರುತ್ತಿದ್ದೆ. ಬುಡ್ಡಿ ದೀಪದಲ್ಲಿ ಓದುತ್ತಿದ್ದೆ . ಚಡ್ಡಿಯೂ ಇರದ ಮುಜುಗರ."

ತೀವ್ರ ಅನಾರೋಗ್ಯದಿಂದಾಗಿ ಕೆಲವು ದಿನ ತೆರೆ ಮರೆಗೆ ಸರಿದಿದ್ದ ಕನ್ನಡ ಚಿತ್ರರಂಗದ ಪ್ರಸಿದ್ಧ ಖಳನಟ ವಜ್ರಮುನಿ ತಮ್ಮ ಅಂತರಂಗದ ಪುಟಗಳ ಬಹಿರಂಗವಾಗಿಸಿದ್ದು ಹೀಗೆ. ಸಂದರ್ಭ : ರಂಗಶ್ರೀ ಕಲಾಸಂಸ್ಥೆ ಏರ್ಪಡಿಸಿದ್ದ ದಯಾನಂದ ಸಾಗರ್‌ ಸಾಂಸ್ಕೃತಿಕ ರಂಗೋತ್ಸವದ ಸಮಾರೋಪ ಸಮಾರಂಭ. ಜುಲೈ 26 ರ ಶುಕ್ರವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಈ ಸಮಾರಂಭ ವಜ್ರಮುನಿ ಅವರ ಸನ್ಮಾನ ಸಮಾರಂಭವೂ ಹೌದು.

ನಟ ಶ್ರೀನಿವಾಸಮೂರ್ತಿ ಹಾಗೂ ರಾಮಕೃಷ್ಣ ಹೆಗಲು ಕೊಟ್ಟು ವಜ್ರಮುನಿ ಅವರನ್ನು ವೇದಿಕೆಗೆ ಕರೆ ತಂದಾಗ ಅಭಿಮಾನಿಗಳು ಭಾರೀ ಚಪ್ಪಾಳೆಯ ಮೂಲಕ 'ನಟ ಶಾರ್ದೂಲ"ನಿಗೆ ಗೌರವ ಸೂಚಿಸಿದರು.

ವಜ್ರಮುನಿ ಸಿನಿಮಾದಲ್ಲಿ ಮಾತ್ರ ಖಳನಟ, ನಿಜ ಜೀವನದಲ್ಲಿ ಆತ ಅಷ್ಟೇ ಸಜ್ಜನ. ನನ್ನ ಮೂವತ್ತು ವರ್ಷಗಳ ಸಿನಿಮಾ ಅನುಭವದಲ್ಲಿ - ಬೇರೆಯವರಿಗೋಸ್ಕರ ಬದುಕು ಸವೆಸಿದ ವಜ್ರಮುನಿಯಂಥ ಇನ್ನೊಬ್ಬ ವ್ಯಕ್ತಿಯನ್ನು ನೋಡಲಿಲ್ಲ ಎಂದು ಖಳನಟನೊಂದಿಗಿನ ತಮ್ಮ ಅನುಭವಗಳನ್ನ ನೆನಪುಗಳನ್ನು ಅಂಬರೀಷ್‌ ಬಣ್ಣಿಸಿದರು.

ಕಾರ್ಯಕ್ರಮಕ್ಕೆ ತಮ್ಮ ಹಾಜರಿಯಿಂದ ರಂಗುತಂದ ಇನ್ನೊಬ್ಬರು- ಖ್ಯಾತ ಅಭಿನೇತ್ರಿ ಜಯಂತಿ.

ವಜ್ರಮುನಿ ಅವರಿಗೆ ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಿದಾಗ ಮತ್ತೆ ಅಭಿಮಾನಿಗಳ ಚಪ್ಪಾಳೆ, ಹರ್ಷೋದ್ಘಾರ. 'ಕಷ್ಟಪಡದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ . ನನ್ನ ಕಾಲಲ್ಲಿ ನಿಲ್ಲಬೇಕೆಂಬ ಛಲವೇ ನನ್ನ ಇಂದಿನ ಸ್ಥಿತಿಗೆ ಕಾರಣವಾಗಿದೆ. ಜೀವನದಲ್ಲಿ ಗುರಿ ಇರಬೇಕು, ಹಾಗೂ ಆ ಗುರಿಯನ್ನು ಸಾಧಿಸಬೇಕಾದರೆ ಹಠ ಇರಬೇಕು" ಎಂದು ಸನ್ಮಾನ ಸ್ವೀಕರಿಸಿದ ವಜ್ರಮುನಿ ಭಾವುಕತೆಯಿಂದ ಜೀವನ ಮೀಮಾಂಸಕರಾದರು.

ವಜ್ರಮುನಿ ಯಾವತ್ತೂ ಸಾವಿಗೆ ಹೆದರುವುದಿಲ್ಲ . ಎರಡು ಬಾರಿ ಸಾವಿನ ಸಮೀಪ ಹೋಗಿ ಬಂದಿದ್ದೇನೆ. ನಾನು ಉಳಿದುಕೊಳ್ಳಲು ನನ್ನ ಪತ್ನಿಯೇ ಕಾರಣ. ಸಾವಿನ ಮನೆಗೆ ಹೋಗಿದ್ದ ನನ್ನನ್ನು ವಾಪಸ್‌ ಕರೆಸಿಕೊಂಡ ಪುಣ್ಯವತಿ ಆಕೆ ಎಂದು ವಜ್ರಮುನಿ ಹನಿಗಣ್ಣಾದರು.

ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಾಟಕಗಳ ಒಂದೆರಡು ದೃಶ್ಯಗಳನ್ನು ವಜ್ರಮುನಿ ಅಭಿನಯಿಸಿದರು. ಆ ಮೂಲಕ ತಮ್ಮಲ್ಲಿನ್ನೂ ಅಭಿನಯಿಸುವ ಶಕ್ತಿಯಿದೆ ಎನ್ನುವ ಸಂದೇಶವನ್ನು ಚಿತ್ರ ಜಗತ್ತಿಗೆ ರವಾನಿಸಿದರು.

ಗುಬ್ಬಿ ವೀರಣ್ಣ , ಪುಟ್ಟಣ್ಣ ಕಣಗಾಲ್‌ ಮುಂತಾದ ಖ್ಯಾತನಾಮರು ನನಗೆ ಪ್ರೋತ್ಸಾಹ ನೀಡಿದರು, ಹಾರೈಸಿದರು. ನನಗೆ ಇಂಜಿನಿಯರ್‌ ಆಗುವ ಆಸೆಯಿತ್ತು. ಪಾಲಿಟೆಕ್ನಿಕ್‌ಗೆ ಸೇರಿದೆ. ಆ ದಿನಗಳಲ್ಲೇ ನಾಟಕದ ಗೀಳಿಗೆ ಒಳಗಾದೆ. ನಾಟಕ ಕಂಪನಿ ಸೇರಿಕೊಂಡೆ. ಗುಬ್ಬಿ ವೀರಣ್ಣನವರ ಆಶೀರ್ವಾದವೂ ದೊರೆಯಿತು.

ಕುರುಕ್ಷೇತ್ರ ನಾಟಕ ಶಕುನಿ ಪಾತ್ರದ ಮೂಲಕ ರಂಗದ ದಿನಗಳು ಪ್ರಾರಂಭವಾದವು. ಆನಂತರ ಕಣಗಾಲ್‌ ಪ್ರಭಾಕರಶಾಸ್ತ್ರಿಯವರ ಪ್ರಚಂಡ ರಾವಣ ನಾಟಕದಲ್ಲಿ ಅಭಿನಯಿಸಿದೆ. ಅದು ರಾಜ್ಯಾದ್ಯಂತ 600 ಪ್ರದರ್ಶನ ಕಂಡಿತು. ಪ್ರಚಂಡ ನಾಟಕದಲ್ಲಿನ ನನ್ನ ನಟನೆ ನೋಡಿ ಪುಟ್ಟಣ್ಣ ಕಣಗಾಲರು ಸಾವಿರ ಮೆಟ್ಟಿಲು ಚಿತ್ರದಲ್ಲಿ ಅವಕಾಶ ಕೊಟ್ಟರು. ಆ ಸಿನಿಮಾ ತೆರೆ ಕಾಣಲಿಲ್ಲ . ಆದರೆ ಮಲ್ಲಮ್ಮನ ಪವಾಡ ಚಿತ್ರದಲ್ಲ ಪುಟ್ಟಣ್ಣ ಅವಕಾಶ ಕೊಟ್ಟರು ಎಂದು ವಜ್ರಮುನಿ ಹಿನ್ನೋಟವನ್ನು ಅವಲೋಕಿಸಿದರು.

12 ವರ್ಷ ಕೌನ್ಸಿಲರ್‌ ಆಗಿದ್ದ ಹಾಗೂ 12 ವರ್ಷ ಬಿಡಿಎನಲ್ಲಿ ಕೆಲಸ ಮಾಡಿಯೂ ಒಂದು ನಿವೇಶನ ಪಡೆಯಲು ಸಾಧ್ಯವಾಗದ ತಮ್ಮ ತಂದೆ ವಜ್ರಪ್ಪನವರನ್ನು ಸನ್ಮಾನದ ಪುಳಕದಲ್ಲಿ ವಜ್ರಮುನಿ ನೆನಪಿಸಿಕೊಂಡರು. ಕನ್ನಡಿಗರ ಋಣ ತೀರಿಸುವುದಾದರೂ ಹೇಗೆ ಎಂದು ಪೇಚಾಡಿಕೊಂಡರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಸಿ.ಸೋಮಶೇಖರ್‌, ಲಕ್ಷ್ಮಿ ವಜ್ರಮುನಿ, ಮಾಜಿ ಸಚಿವ ಡಾ.ಪ್ರೇಮಚಂದ್ರ ಸಾಗರ್‌, ಡಾ.ಹೇಮಚಂದ್ರ ಸಾಗರ್‌, ಮಾಜಿ ಮೇಯರ್‌ ಕೆ.ರಾಮಚಂದ್ರಪ್ಪ, ರಂಗಶ್ರೀ ಸಂಸ್ಥೆಯ ಅಧ್ಯಕ್ಷ ಎಚ್‌.ಅಂದಾನಿಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

English summary
Vajramuni felicitated with Silver Crown

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada